ನೆಲ್ಯಾಡಿ: ಸಾರ್ವಜನಿಕರಿಂದ ಯು-ಟರ್ನ್ ಬೇಡಿಕೆ : ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ತಂಡದಿಂದ ಪರಿಶೀಲನೆ

0

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ನೆಲ್ಯಾಡಿ ಸಂತಜಾರ್ಜ್ ಹಾಗೂ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಗಳ ನಡುವೆ ಯು-ಟರ್ನ್ ಬೇಡಿಕೆ ಮುಂದಿಟ್ಟು ಇತ್ತೀಚೆಗೆ ನಡೆದ ಹೋರಾಟದ ಹಿನ್ನೆಲೆಯಲ್ಲಿ ಸೆ.25ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಹಾಗೂ ಇಂಜಿನಿಯರ್‌ಗಳ ತಂಡ ಯು-ಟರ್ನ್ ಕಲ್ಪಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿತು.


ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿಯಿಂದ ಕರ್ಬ ಸಂಕದವರೆಗೆ ಹೆದ್ದಾರಿಯ ವಿವಿಧ ಸ್ಥಳಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಯು-ಟರ್ನ್ ಕಲ್ಪಿಸುವ ಸಾಧ್ಯತೆ ಹಾಗೂ ಸುರಕ್ಷತಾ ಅಂಶಗಳ ಕುರಿತು ಪರಿಶೀಲನೆ ನಡೆಸಿದರು. ನೆಲ್ಯಾಡಿ ಸಂತಜಾರ್ಜ್ ಹಾಗೂ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಗಳ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ನೀಡುವಂತೆ ಒತ್ತಾಯಿಸಿ ಸೆ.9ರಂದು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನೆಲ್ಯಾಡಿ ಗಾಂಧಿಮೈದಾನದಲ್ಲಿ ಪ್ರತಿಭಟನೆ ನಡೆದಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಇಲ್ಲಿ ಯು-ಟರ್ನ್ ಅಗತ್ಯವಾಗಿದೆ ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದರು.

ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು ಈ ಪ್ರದೇಶದಲ್ಲಿ ಯು-ಟರ್ನ್ ಕಲ್ಪಿಸುವುದು ಸುರಕ್ಷತೆಯ ದೃಷ್ಟಿಯಿಂದ ಸಾಧ್ಯವಿಲ್ಲ. ಯು-ಟರ್ನ್ ನೀಡಿದಲ್ಲಿ ಅಪಘಾತ ವಲಯ ನಿರ್ಮಾಣವಾಗುವ ಸಾಧ್ಯತೆ ಇದೆ. ವಾಹನಗಳ ಸಂಚಾರಕ್ಕೆ ಸರ್ವಿಸ್ ರಸ್ತೆ ಹಾಗೂ ಸಾರ್ವಜನಿಕರು ಹೆದ್ದಾರಿ ದಾಟಲು ಸ್ಕೈವಾಕ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಯು-ಟರ್ನ್ ಕಲ್ಪಿಸುವಂತೆ ಪಟ್ಟು ಹಿಡಿದಿದ್ದರು. ಬಳಿಕ ಹೆದ್ದಾರಿ ಸುರಕ್ಷತಾ ಎಂಜಿನಿಯರ್‌ಗಳ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ, ತಂಡ ನೀಡುವ ತಾಂತ್ರಿಕ ನಿರ್ದೇಶನದ ಆಧಾರದ ಮೇಲೆ ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಬ್ದುಲ್ಲಾ ಜಾವೇದ್ ಅಜ್ಮಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಅಬ್ದುಲ್ಲಾ ಜಾವೇದ್ ಅಜ್ಮಿ ನೇತೃತ್ವದ ಎನ್‌ಎಚ್‌ಎಐ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ತಂಡ ನೆಲ್ಯಾಡಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದೆ.


ಈ ಸಂದರ್ಭದಲ್ಲಿ ಯು-ಟರ್ನ್ ಹೋರಾಟ ಸಮಿತಿ ಸಂಚಾಲಕ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ರಫೀಕ್, ಫಾ.ಜಿಜನ್, ಜಿ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ರವಿಚಂದ್ರ ಹೊಸವಕ್ಲು, ರವಿಚಂದ್ರ ಅತ್ರಿಜಾಲು, ಗಣೇಶ್ ಆಚಾರ್ಯ, ನೆಲ್ಯಾಡಿ ಅಲ್ ಬದ್ರಿಯಾ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಝೀಂ ಸಾಹೇಬ್, ಬೆಥನಿ ಐಟಿಐ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಸಜಿ ಕೆ. ತೋಮಸ್, ಉಪನ್ಯಾಸಕ ಜಾನ್ ಪಿ.ಎಸ್., ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಇಂಜಿನಿಯರ್ ಚಾಕೋ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here