ಆಲಂಕಾರು ಅಪಘಾತ ಪ್ರಕರಣ: ಪರಾರಿಯಾಗಿದ್ದ ಥಾರ್ ಚಾಲಕನ ಬಂಧನ, ಜಾಮೀನಿನ ಮೇಲೆ ಬಿಡುಗಡೆ

0

ಕಡಬ: ನಾಲ್ಕು ದಿನದ ಹಿಂದೆ ಆಲಂಕಾರು ಪೇಟೆಯಲ್ಲಿ ಥಾರ್ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಜೀಪು ಚಾಲಕನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.


ಆಲಂಕಾರು ನಿವಾಸಿ ಇಲ್ಯಾಸ್ ಎನ್.ಎ.(33ವ.) ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಆರೋಪಿ. ಸೆ.25ರಂದು ರಾತ್ರಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ಥಾರ್ ಜೀಪು (ಕೆಎ 21, ಎಂಬಿ 0233) ಆಚಾರಿ ಕೊಟ್ಯ ಕಡೆಗೆ ಹೋಗುತ್ತಿದ್ದ ಬೈಕ್ (ಕೆಎ 21, ವೈ 5006)ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಧರ್ಣಪ್ಪ ಗೌಡರವರ ಪುತ್ರ ಲೋಕೇಶ್ (42ವ.) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಅಪಘಾತದ ಪರಿಣಾಮ ಲೋಕೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರೂ ಜೀಪು ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಯುವಕರ ಗುಂಪು ಆಲಂಕಾರು ಪೇಟೆಯಲ್ಲಿ ಜಮಾಯಿಸತೊಡಗಿ ಪರಾರಿಯಾಗಿದ್ದ ವಾಹನದ ಹುಡುಕಾಟ ಆರಂಭಿಸಿದರು. ಹುಡುಕಾಟದ ವೇಳೆ ಕಾರು ನಡುಗುಡ್ಡೆ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ನಿಂತಿರುವುದು ಪತ್ತೆಯಾಗಿದ್ದರೂ ಚಾಲಕ ನಾಪತ್ತೆಯಾಗಿದ್ದ. ಜನ ಗುಂಪು ಸೇರುತ್ತಿದ್ದಂತೆ ಆಲಂಕಾರು ಪೇಟೆಯಲ್ಲಿ ತುಸು ಉದ್ವಿಘ್ನ ಪರಿಸ್ಥಿತಿಯೂ ನಿರ್ಮಾಣಗೊಂಡಿತು. ಜೀಪು ವಶಪಡಿಸಿಕೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕೈಗೊಂಡಿದ್ದರು. ಇದೀಗ ಆರೋಪಿ ಜೀಪು ಚಾಲಕ ಇಲ್ಯಾಸ್ ಎನ್.ಎ. ಎಂಬಾತನನ್ನು ಬಂಧಿಸಿರುವ ಪೊಲೀಸರು ಆತ ಮಾದಕ ವಸ್ತು ಸೇವಿಸಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿ ಜೀಪು ಚಾಲಕ ಮಾದಕ ವಸ್ತು ಸೇವನೆ ದೃಢಪಟ್ಟಿರುವುದಿಲ್ಲ. ಆರೋಪಿಯನ್ನು ಸೂಕ್ತ ಜಾಮೀನಿನೊಂದಿಗೆ ಬಿಡುಗಡೆ ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here