







ಪುತ್ತೂರು: ಇಂದಿನ ಧಾವಂತದ ದಿನಗಳಲ್ಲಿ ಮೊಗದಲ್ಲಿ ನಗು ಕಾಣುವುದು ಅಪರೂಪವಾಗಿದೆ. ಯುವಕರು ಇಂತಹ ಹಾಸ್ಯ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ತುಂಬಾ ಅಪರೂಪವಾಗಿದೆ. ಕ್ರಿಕೆಟ್ ಮ್ಯಾಚ್, ಪಿಲಿಗೊಬ್ಬು ಇತ್ಯಾದಿಗಳನ್ನು ಬಹಳ ತಲ್ಲೀನತೆಯಿಂದ ಆಸ್ವಾದಿಸುವ ಯುವಕರು ಮನಸ್ಸಿಗೆ ಹಿತವಾದ ಉಲ್ಲಾಸ ನೀಡುವ ಇಂತಹ ಸಂಘಗಳಿಗೆ ಬರದಿರುವುದು ವಿಷಾದನೀಯ ಎಂದು ಅನುರಾಗ ವಠಾರದಲ್ಲಿ ಇತ್ತೀಚೆಗೆ ನಡೆದ ಕುಶಲ ಹಾಸ್ಯಪ್ರಿಯರ ಸಂಘದ ಹಾಸ್ಯದ ಹೊನಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರಿನ ಭಾರತೀಯ ಜೀವವಿಮಾ ನಿಗಮದ ನಿವೃತ್ತ ವಿಭಾಗೀಯ ಪ್ರಬಂಧಕರು, ಮಾನವ ಸಂಪನ್ಮೂಲ ವ್ಯಕ್ತಿ ಜಯರಾಮ ನೆಲ್ಲಿತ್ತಾಯ ಅವರು ಕಳಕಳಿ ವ್ಯಕ್ತಪಡಿಸಿದರು.



2004ರಲ್ಲಿ ಪ್ರಾರಂಭವಾದ ಸಂಘವು 22ನೇ ವರ್ಷದ ಹೊಸ್ತಿಲಲ್ಲಿದ್ದರೂ ಕೇವಲ ಮಾಗಿದ ಮನದ ಹಿರಿಯರು ಮಾತ್ರ ಇದರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ದುರಂತವೇ ಸರಿ. ಮುಂದೆ ತಾವು ಇಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿ ಶುಭಹಾರೈಸಿದರು.



ಸಂಘದ ಅಧ್ಯಕ್ಷ ಜಯರಾಮ ಪುಣ್ಚಿತ್ತಾಯ ಅವರು ಅತಿಥಿಗಳನ್ನು ಪರಿಚಯಿಸಿ ಹೊದಿಕೆ ನೀಡಿ ಗೌರವಿಸಿದರು. ಅನ್ನಪೂರ್ಣೇಶ್ವರಿ ಅವರು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾರ್ವತಿ ಭಟ್, ನಿರ್ಮಲಾ ಸುರತ್ಕಲ್, ದಾಮೋದರ ಕೆ., ಕರುಣಾಕರ ಅಲೆಟ್ಟಿ, ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ತುಳಸೀದಾಸ ಪಿಲಿಂಜ, ಹರಿನಾರಾಯಣ ಮಾಡಾವು, ಪದ್ಮಾ ರಾಮಕೃಷ್ಣ ಭಟ್ ಮೊದಲಾದವರು ನಗೆ ಚಟಾಕಿ ಹಾರಿಸಿ ಹಾಸ್ಯದ ಹೊನಲು ಹರಿಸಿದರು. ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.










