ಅ.2 ಗಾಂಧಿ ಜಯಂತಿ : ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಜಾಗೃತಿ ಜಾಥ – ಸ್ವಚ್ಛತಾ ಸೇನಾನಿಗಳಿಗೆ ಗೌರವ

0

ಪುತ್ತೂರು: ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಗಣೇಶ್ ಟ್ರೇಡರ್‍ಸ್, ಶ್ರೀಲಕ್ಷ್ಮೀ ಏಜೆನ್ಸಿಸ್(ಎಕ್ಸೈಡ್ ಬ್ಯಾಟರಿ ಡೀಲರ್), ಏಷ್ಯಯನ್ ವುಡ್ ಆಂಡ್ ಮಂಗಳೂರು ಪರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್, ನಯಾ ಚಪ್ಪಲ್ ಬಜಾರ್‌ನ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಎಲ್ಲಾ 8 ರೋಟರಿ ಕ್ಲಬ್ ಸಹಯೋಗದೊಂದಿಗೆ ಸ್ವಚ್ಚತಾ ಜಾಗೃತಿ ಜಾಥ ಮತ್ತು ನಗರಸಭೆ ಪೌರಕಾರ್ಮಿಕರಾದ ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ. ಎಂ ದತ್ತಾತ್ರೆಯ ರಾವ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಗಾಂಧೀಜಿಯವರು ಮಾನಸಿಕ ಮತ್ತು ಸಾಮಾಜಿಕ ಸ್ವಚ್ಛತೆಗೆ ತಮ್ಮ ಜೀವನದಲ್ಲಿ ಬಹಳ ಮಹತ್ವ ನೀಡಿದ್ದಾರೆ. ಈ ವರ್ಷದ ಗಾಂಧಿ ಜಯಂತಿಯಂದು ಪುತ್ತೂರನ್ನು ನಿರಂತವಾಗಿ ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಹಿರೋಗಳಾದ ನಗರಸಭೆ ಸ್ವಚ್ಛತಾ ಸೇನಾನಿಗಳನ್ನು ಸನ್ಮಾನಿಸಲಾಗುವುದು ಎಂದವರು ಹೇಳಿದರು.


ಜಾಗೃತಿ ಜಾಥಾ ಉಸ್ತುವಾರಿ ಜಗಜೀವನ್ ದಾಸ್ ಅವರು ಮಾತನಾಡಿ ಅಂದು ಬೆಳಿಗ್ಗೆ ಗಂಟೆ 9ಕ್ಕೆ ದರ್ಬೆ ಮತ್ತು ಬೊಳುವಾರಿನಿಂದ ಏಕಕಾಲಕ್ಕೆ ‘ನಮ್ಮ ಕಸ ನಮ್ಮ ಜವಾಬ್ದಾರಿ’ ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛತಾ ಜಾಗೃತಿ ಜಾಥ ಪುತ್ತೂರು ಬಸ್‌ನಿಲ್ದಾಣದ ತನಕ ನಡೆಯಲಿದೆ. ಈ ಜಾಥಾದಲ್ಲಿ ಪುತ್ತೂರಿನ 8 ರೋಟರಿ ಕ್ಲಬ್‌ಗಳು, ಸಂತಫಿಲೋಮಿನಾ, ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು, ನಗರಸಭೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬಳಿಕ ಸಂಜೆ ಗಂಟೆ 3 ರಿಂದ ನಗರಸಸಭೆ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಸುಮಾರು 65 ಮಂದಿಗೆ ತಲಾ ರೂ. 2ಸಾವಿರ ಮೌಲ್ಯದ ಸೊತ್ತುಗಳನ್ನು ಅವರಿಗೆ ಸಮರ್ಪಣೆ ಮಾಡುವ ಮೂಲಕ ಗೌರವಿಸಲಾಗುವುದು ಎಂದವರು ಹೇಳಿದರು.


ಪ್ರೊ. ದತ್ತಾತ್ರೆಯ ರಾವ್ ಅವರು ಮಾತನಾಡಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ. ಇಬ್ರಾಹಿಂ ಎಂ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಸ್ವಚ್ಛತಾ ಸೇನಾನಿಗಳನ್ನು ಸನ್ಮಾನಿಸಲಾಗುವುದು ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಶ್ರೀಲಕ್ಷ್ಮೀ ಏಜೆನ್ಸಿಸ್‌ನ ವಿಶ್ವನಾಥ ಗೌಡ, ನಯಾ ಚಪ್ಪಲ್ ಬಜಾರ್‌ನ ರಫೀಕ್ ಎಂ.ಜಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಮನೋಜ್, ಏಷಯನ್ ವುಡ್ ಆಂಡ್ ಮಂಗಳೂರು ಫರ್ನಿಚರ್‍ಸ್‌ನ ಮತ್ತು ಇಲೆಕ್ಟ್ರಾನಿಕ್ಸ್‌ನ ಇಸ್ಮಾಯಿಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here