







ಪುತ್ತೂರು: ಕೆಮ್ಮಾಯಿ ಭರತ್ಪುರದ ಶ್ರೀಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ನ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ಡಯಾಲಿಸ್ ರೋಗಿಗಳಿಗೆ ನೀಡಲಾಗುವ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ 47ನೇ ಯೋಜನೆಯ ಕಾರ್ಯಕ್ರಮ ಸೆ.30ರಂದು ಸೇವಾಶ್ರಮದಲ್ಲಿ ನಡೆಯಿತು.


ಪುತ್ತೂರು ಶಿಶು ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಶಾಂತಿ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅನಾರೋಗ್ಯ ಪೀಡಿತರ ನೋವಿಗೆ ಸ್ಪಂದಿಸುವ ಚೇತನ್ರವರು ಕಷ್ಟದಲ್ಲಿದ್ದರೂ ಪರರಿಗೆ ಸಹಾಯ ಮಾಡುತ್ತಾರೆ. ದೇವರೆ ಅವರಿಂದ ಇಂತಹ ಕೆಲಸ ಮಾಡಿಸುತ್ತಿದ್ದಾರೆ. ಇನ್ನೂ ಹೆಚ್ಚು ಕಿಟ್ ವಿತರಣೆ ಕಾರ್ಯ ನಿಮ್ಮಿಂದ ನಡೆಯಲಿ ಎಂದರು. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಗಿರೀಶ್ ಹೆಗ್ಡೆ ಮಾತನಾಡಿ ಇಂದು ಪ್ರತಿಯೊಂದು ಕುಟುಂಬದಲ್ಲಿಯೂ ಸಮಸ್ಯೆಗಳು ಇರುತ್ತದೆ. ಧಾರ್ಮಿಕ ಆಚರಣೆ, ಅನುಷ್ಠಾನ ನಡೆಸಿದಾಗ ಸಮಸ್ಯೆಗಳು ಪರಿಹಾರವಾಗುತ್ತದೆ. ಚೇತನ್ರವರು ಎಲ್ಲರನ್ನು ಸೇರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು. ಹಿಂದೂ ಜನಜಾಗೃತಿ ವೇದಿಕೆಯ ಜಿಲ್ಲಾ ಸಮನ್ವಯಕಾರ ಹಾಗೂ ವೈದ್ಯರಾದ ಡಾ.ಪ್ರಣಮ್ ಮಲ್ಯ ಮಾತನಾಡಿ ಸನಾತನ ಧರ್ಮದ ಆಚರಣೆ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯಬಾರದು ಪ್ರತಿಯೊಂದು ಆಚರಣೆಗಳಿಗೆ ವೈಜ್ಞಾನಿಕವಾದ ಹಿನ್ನಲೆ ಇದೆ ಎಂದರು. ಪ್ರಾಣಿಕ್ ಹೋಲಿಂಗ್ ಯೋಗ ಥೆರಪಿಸ್ಟ್ ಡಾ|ಉಮೇಶ್ ಹಳಕಾರ, ತುಳು ಹಾಗೂ ಮಲಯಾಳಂ ಸಿನಿಮಾ ನಟಿ ದಯಾವತಿ, ನಾಟಕ ಕಲಾವಿದ ಗುರುರಾಜ್ ಕುಕ್ಕಿಪ್ಪಾಡಿ, ಸಾಂತ್ವನ ಸೇವಾಶ್ರಮದ ಮ್ಯಾನೇಜರ್ ಲಕ್ಷ್ಮೀ ಜಯರಾಂ ಕಾಂಚನ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕ ಅಧ್ಯಕ್ಷ ಶರತ್ ಕುಮಾರ್ ಪಾರ ಮಾತನಾಡಿ ಕಿಟ್ ವಿತರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷೆ ಶೋಭಾ ಚೇತನ್ ಮಾತನಾಡಿ ಎಲ್ಲರ ಸಹಕಾರ ಕೋರಿದರು.



ಅಭಿನಂದನೆ: ಕಿಟ್ ವಿತರಣೆಗೆ ದಾನಿಗಳನ್ನು ಸಂಪರ್ಕಿಸಿ ಅತೀ ಹೆಚ್ಚು ಹಣ ಸಂಗ್ರಹ ಮಾಡಿದ ಟ್ರಸ್ಟ್ ಸದಸ್ಯರನ್ನು ಅಭಿನಂದಿಸಲಾಯಿತು. ಟ್ರಸ್ಟ್ನ ಸದಸ್ಯರಾದ ಕಾವ್ಯ ಬನ್ನೂರು ಪ್ರಥಮ ಸ್ಥಾನ, ಹರ್ಷಿತಾ ತಾರಿಗುಡ್ಡೆ ದ್ವಿತೀಯ ಸ್ಥಾನ ಹಾಗೂ ಮೋಹಿನಿ ಬನ್ನೂರು ತೃತೀಯ ಸ್ಥಾನ ಪಡೆದಿದ್ದು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಟ್ರಸ್ಟಿ ಹಾಗೂ ಕಲಾವಿದ ಕೃಷ್ಣಪ್ಪ ಶಿವನಗರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷರಾದ ಚೇತನ್ ಗುರೂಜಿ ಹಾಗೂ ಟ್ರಸ್ಟ್ ಸದಸ್ಯರಾದ ಹರ್ಷಿತಾ. ಕಾವ್ಯ ಬನ್ನೂರು. ಆತ್ಮಿ, ದೀಕ್ಷಾ, ಕಾವ್ಯ ಈಶ್ವರಮಂಗಲ ವಿನೀತ್, ವನಿತಾ, ರಂಜಿತ್, ಪ್ರಮೋದ್, ಜಯಂತಿ ಕಾವು, ಮಿಥುನ್ ಸಹಕರಿಸಿದರು.
42 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ ಅನಾರೋಗ್ಯ ಪೀಡಿತ ಅಶಕ್ತ 42 ಮಂದಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ಕಿಟ್ ಹಸ್ತಾಂತರಿಸಿದರು.










