ಕೊಂಬೆಟ್ಟು ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ

0

ಪ್ರಾಯೋಗಿಕ ಜ್ಞಾನ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ: ಸುರೇಶ್ ಡಿ.


ಪುತ್ತೂರು:
ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ಅನುಭವಗಳ ಮೂಲಕವೂ ವಿಸ್ತಾರಗೊಳ್ಳಬೇಕು. ಯುವ ಸಂಸತ್‌ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿಯನ್ನು ನೇರವಾಗಿ ಪರಿಚಯಿಸುವುದರ ಜೊತೆಗೆ, ಅವರ ಜ್ಞಾನ, ಚಿಂತನಾ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ ಎಂದು ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ಹೇಳಿದರು.

ಅ.1ರಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂಸತ್ ಕಾರ್ಯಕಲಾಪಗಳನ್ನು ಪ್ರಾಯೋಗಿಕವಾಗಿ ಅನುಕರಿಸುವ ಮೂಲಕ ಪ್ರಶ್ನಿಸುವಿಕೆ, ಚರ್ಚೆ, ವಿಚಾರ ಮಂಡನೆ ಹಾಗೂ ನಿರ್ಧಾರ ಕೈಗೊಳ್ಳುವಿಕೆಯಂತಹ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಯುವ ಸಂಸತ್ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತಷ್ಟು ಸದೃಢವಾಗಿ ಬೆಳೆದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾದ ನಾಗರಿಕರನ್ನು ರೂಪಿಸುವಂತಾಗಲಿ ಎಂದು ಅವರು ಆಶಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್ ಪಿ. ವಹಿಸಿದ್ದರು. ಯುವ ಸಂಸತ್ ಸ್ಪರ್ಧೆಯ ತಾಲೂಕು ನೋಡಲ್ ಅಧಿಕಾರಿ ಹರಿಪ್ರಸಾದ್, ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ ಉಪಸ್ಥಿತರಿದ್ದರು.

ಶಾಲೆಯ ಪ್ರಭಾರ ಉಪಪ್ರಾಂಶುಪಾಲ ನಾಗರಾಜ ಭಟ್ ಪಿ. ಸ್ವಾಗತಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಜಾಕ್, ಪದ್ಮನಾಭ ಎಸ್. ಹಾಗೂ ನಿವೃತ್ತ ಅಧ್ಯಾಪಕ ಗುಡ್ಡಪ್ಪ ಬಲ್ಯ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು. ಶಿಕ್ಷಕಿ ಯುಜಿನಾ ಪಿ. ವಂದಿಸಿದರು. ಸಹಶಿಕ್ಷಕರಾದ ಮಮತಾ ರೈ, ಅಮಿತಾ, ರೆನಿಟಾ ಸುಷ್ಮಾ, ಮೋಹಿನಿ ಬಿ.ಟಿ., ಗ್ರೆಗೊರಿ ರೋನಿ ಪಾಯ್ಸ್ ಹಾಗೂ ಜಗನ್ನಾಥ ಪಿ. ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.

ಐದು ಶಾಲೆಗಳ ವಿದ್ಯಾರ್ಥಿಗಳಿಂದ ಸಂಸತ್ ಕಲಾಪದ ಅನಾವರಣ:
ತಾಲೂಕಿನ ಐದು ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಂಡಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ, ಸಂಸತ್ ಅಧಿವೇಶನದ ಮಾದರಿಯಲ್ಲಿ ಕಾರ್ಯಕಲಾಪಗಳನ್ನು ಪ್ರಸ್ತುತಪಡಿಸಿದರು. ಪ್ರಶ್ನೋತ್ತರ, ಚರ್ಚೆ ಹಾಗೂ ವಿಚಾರ ಮಂಡನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಪ್ರಾಯೋಗಿಕ ಜ್ಞಾನವನ್ನು ಪ್ರದರ್ಶಿಸಿದರು. ಪ್ರತಿ ತಂಡಕ್ಕೆ ಅರ್ಧ ಗಂಟೆಯ ಕಾಲಾವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಐವರು ವಿದ್ಯಾರ್ಥಿಗಳನ್ನು ಜಿಲ್ಲಾ ಹಂತದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸಹಶಿಕ್ಷಕಿ ರೆನಿಟಾ ಸುಷ್ಮಾ ಧನ್ಯವಾದ ಸಮರ್ಪಿಸಿದರು. ಶಾಲೆಯ ಹಿರಿಯ ಶಿಕ್ಷಕಿ ಮರ್ಸಿ ಮಮತಾ ಮೋನಿಸ್ ಕಾರ್ಯಕ್ರಮವನ್ನು ಸಂಘಟಿಸಿದರು. ಸಹಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here