







ಹಾನಿ ಪ್ರದೇಶಕ್ಕೆ ಅರುಣ್ ಪುತ್ತಿಲ ಭೇಟಿ-ಕ್ರಮಕ್ಕೆ ಒತ್ತಾಯ



ಕಾವು: ಕಳೆದ ಕೆಲ ತಿಂಗಳುಗಳಿಂದ ಕಾಡಾನೆ ಲಗ್ಗೆಯಿಂದ ತತ್ತರಿಸುತ್ತಿರುವ ಮಾಡ್ನೂರು ಗ್ರಾಮದಲ್ಲಿ ಅ.2ರ ರಾತ್ರಿಯು ಕಾಡಾನೆ ರಂಪಾಟ ಮುಂದುವರೆದಿದ್ದು, ಕೃಷಿ ಹಾನಿ ಮಾತ್ರವಲ್ಲದೇ, ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅ.1ರ ರಾತ್ರಿ ವೇಳೆ ಕಾವು ಭಾಗದ ವಿವಿದೆಡೆ ಕಾಡಾನೆ ಲಗ್ಗೆ ಇಟ್ಟು ಕೃಷಿ ಹಾನಿಯನ್ನು ಮಾಡಿ ಜನರಲ್ಲಿ ಆತಂಕ ಮೂಡಿಸಿತ್ತು. ಅ.2ರ ರಾತ್ರಿ ವೇಳೆಯಲ್ಲೂ ಕಾವು ಭಾಗದ ಸಸ್ಪೆಟ್ಟಿ, ಗುಂಡಿಗದ್ದೆ, ಡೆಂಬಾಳೆ, ಪೂವಂದೂರು ಭಾಗದಲ್ಲಿ ಕಾಣಿಸಿಕೊಂಡು ಕೃಷಿ ಹಾನಿ ಮಾಡಿದೆ.




ಘಟನಾ ಸ್ಥಳಕ್ಕೆ ಅರುಣ್ ಪುತ್ತಿಲ ಭೇಟಿ-ಕ್ರಮಕ್ಕೆ ಒತ್ತಾಯ
ಮಾಡ್ನೂರು ಗ್ರಾಮದ ಹಲವು ಪ್ರದೇಶದಲ್ಲಿ ಕಾಡಾನೆ ಲಗ್ಗೆಯ ಬಗ್ಗೆ ಮಾಹಿತಿ ಪಡೆದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ದೂರವಾಣಿಯ ಮೂಲಕ ಅರಣ್ಯ ಇಲಾಖೆ ಅಧಿಕಾರಿಯವರಲ್ಲಿ ಮಾತುಕತೆ ನಡೆಸಿದ್ದಾರೆ. ಕಾಡಾನೆ ಲಗ್ಗೆಯಿಂದ ಕೃಷಿ ಹಾನಿ ಮಾತ್ರವಲ್ಲದೇ, ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಆನೆಯನ್ನು ಕಾಡಿಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳುವುದಲ್ಲದೇ ಕೃಷಿ ಹಾನಿಗೂ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿದ ಘಟನೆ ಅ.3ರಂದು ಬೆಳಿಗ್ಗೆ ನಡೆದಿದೆ.










