







ಪುತ್ತೂರು: ಯಕ್ಷಪ್ರಿಯೆ ಅರ್ಷಿಯಾ ಎಂದೇ ಖ್ಯಾತರಾಗಿರುವ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ದೇವಿಯಾಗಿ ರಂಗಸ್ಥಳವೇರಲು ಸಿದ್ಧತೆ ನಡೆಸಿದ್ದಾರೆ.
‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಅರ್ಷಿಯಾ ಅವರು ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿ. ಈ ಕೇಂದ್ರ ಮಂಗಳೂರು ನಗರದ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಆಯೋಜಿಸಿರುವ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಭಾಗವಾಗಿ ಅ.20ರಂದು ಪ್ರದರ್ಶನಗೊಳ್ಳಲಿರುವ ಸಂಪೂರ್ಣ ‘ಶ್ರೀದೇವಿ ಮಹಾತ್ಮೆ’ಯಲ್ಲಿ ಅಷ್ಟಭುಜ ಧಾರಿಣಿ ದೇವಿಯಾಗಿ ಅರ್ಷಿಯಾ ಮಿಂಚಲಿದ್ದಾರೆ.


12 ವರ್ಷಗಳಿಂದ ಯಕ್ಷಗಾನ ಪಾತ್ರಗಳನ್ನು ಮಾಡುತ್ತಿದ್ದೇನೆ. ಆದಿಮಾಯೆ, ವಿವಿಧ ಅಸುರ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಉಳ್ಳಾಲ್ತಿ ಅಮ್ಮನ (ಕಟೀಲು ದುರ್ಗಾಪರಮೇಶ್ವರಿ) ಮೇಲಿನ ಭಕ್ತಿಯೇ ನನ್ನ ಯಕ್ಷಗಾನದ ಆಸಕ್ತಿಗೆ ಕಾರಣ. ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ಮಾಡಲು ಅವಕಾಶ ದೊರೆತಿದೆ. ಅಷ್ಟಭುಜ ಧರಿಸಿ ವೇದಿಕೆಯೇರುವ ಆ ಪವಿತ್ರ ಕ್ಷಣದ ಕಲ್ಪನೆಯೇ ನನ್ನಲ್ಲಿ ಕಂಪನ ಸೃಷ್ಟಿಸುತ್ತಿದೆ ಎಂದು ಅರ್ಷಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ಯಕ್ಷಗಾನಕ್ಕೆ ಅದರದೇ ಆದ ಪಾವಿತ್ರ್ಯ ಇದೆ. ಅಲ್ಲದೆ ದೇವಿ ಪಾತ್ರ ಮಾಡುವಾಗ ನಾನು ಪರಿಶುದ್ಧಳಾಗಬೇಕು. ಮುಸ್ಲಿಂ ಮಹಿಳೆಯಾಗಿ, ದೇವಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯ. ಅದಕ್ಕಾಗಿ ಆರು ತಿಂಗಳುಗಳಿಂದ ಮಾಂಸಾಹಾರ ತ್ಯಜಿಸಿ, ಕಠಿಣ ವ್ರತ ಪಾಲಿಸುತ್ತಿದ್ದೇನೆ. ಪ್ರತಿದಿನ ದೈವಸ್ಥಾನ ಅಥವಾ ದೇವಸ್ಥಾನಕ್ಕೆ ಭೇಟಿ ನೀಡಿ ಧ್ಯಾನವನ್ನೂ ಮಾಡುತ್ತಿದ್ದೇನೆ. ನವರಾತ್ರಿ ಆರಂಭವಾದ ಮೇಲೆ ಇನ್ನಷ್ಟು ಕಟ್ಟುನಿಟ್ಟಿನ ವ್ರತ ಆಚರಿಸಬೇಕಾಗಿದೆ ಎಂದು ಅರ್ಷಿಯಾ ಅವರು ಸುದ್ದಿ ಬಿಡುಗಡೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಕುಟುಂಬದವರ ಸಹಕಾರ:
ಯಕ್ಷಗಾನ ಪೌರಾಣಿಕ ಕಥಾನಕಗಳನ್ನು ಆಧರಿಸಿರುತ್ತದೆ. ನಮ್ಮ ಧರ್ಮ ಬೇರೆಯಾಗಿರುವ ಕಾರಣಕ್ಕೆ ಯಕ್ಷಗಾನ ಕಥಾನಕದ ಪ್ರತಿ ಪಾತ್ರವನ್ನು ಓದಿಕೊಂಡು ಅರಿವು ಬೆಳೆಸಿಕೊಳ್ಳಬೇಕು. ಇದು ನನಗಿರುವ ದೊಡ್ಡ ಸವಾಲು. ಆದರೆ ಯಕ್ಷಗುರು ರಮೇಶ್ ಭಟ್ ಮಾರ್ಗದರ್ಶನದಲ್ಲಿ ಇವೆಲ್ಲವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಯಕ್ಷ ಪ್ರೇಮಕ್ಕೆ ಕುಟುಂಬದವರ ಸಹಕಾರ ಇದೆ. ಸಾರ್ವಜನಿಕರು ಹಲವರು ಬೆಂಬಲಿಸಿದ್ದಾರೆ. ಕೆಲವರು ಟೀಕಿಸಿದ್ದಾರೆ. ಎಲ್ಲವನ್ನೂ ಮುಕ್ತ ಮನಸ್ತಿನಿಂದ ಸ್ವೀಕರಿಸಿದ್ದೇನೆ’ ಎಂದು ಪದವಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಮಂಗಳೂರಿನ ಡೈಜಿವರ್ಲ್ಡ್ ವಾಹಿನಿಯ ನಿರೂಪಕಿಯಾಗಿರುವ ಅರ್ಷಿಯಾ ಹೇಳಿದರು. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ರಂಗಸ್ಥಳದಲ್ಲಿ ಧಾರ್ಮಿಕ ಸೌಹಾರ್ದತೆಯ ಅಪೂರ್ವ ಹಾಗೂ ಸುಂದರ ಅಧ್ಯಾಯವೊಂದು ಅನಾವರಣಗೊಳ್ಳುತ್ತಿರುವ ಈ ವಿಚಾರ ಇದೀಗ ಭಾರೀ ಸುದ್ದಿಯಾಗಿದೆ.
ಯಕ್ಷಗಾನ ರಂಗದಲ್ಲಿ ಹೆಣ್ಣು ಮಕ್ಕಳು ಪಾತ್ರ ವಹಿಸುವುದೇ ವಿರಳವಾಗಿರುವ ದಿನಗಳಲ್ಲಿ ಮುಸ್ಲಿಮ್ ಸಮುದಾಯದ ಪ್ರಥಮ ಯಕ್ಷಗಾನ ಕಲಾವಿದೆ ಅರ್ಷಿಯಾ ಇದೀಗ ಸಾಕ್ಷಾತ್ ಶ್ರೀದೇವಿಯ ಪಾತ್ರದಲ್ಲಿ
ಕಾಣಿಸಿಕೊಳ್ಳಲು ಸಜ್ಜಾಗಿರುವುದು ಸಂಚಲನ ಮೂಡಿಸಿದೆ. ವಿಟ್ಲ ಸಮೀಪದ ಮಾಡ ಮೂಲದ ಅರ್ಷಿಯಾ ಕಟೀಲು ಹಾಗೂ ಪಾವಂಜೆ ಮೇಳ ಸೇರಿದಂತೆ ತೆಂಕುತಿಟ್ಟಿನ ಪ್ರಸಿದ್ಧ ಕಲಾ ವಿದರು ಭಾಗವಹಿಸಲಿರುವ ಈ ಪ್ರಸಂಗದಲ್ಲಿ ಬಣ್ಣ ಹಚ್ಚಲಿದ್ದಾರೆ.
ನಿವೃತ್ತ ಉಪ ತಹಸೀಲ್ದಾರ್ ಅಬ್ದುಲ್ ಖಾದರ್ ಮತ್ತು ಮುಲ್ತಾಜ್ ದಂಪತಿಯ ಮಗಳಾಗಿರುವ ಆರ್ಷಿಯಾ ತಮ್ಮ ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನಗಳನ್ನು ನೋಡಿ ಆಕರ್ಷಿತರಾಗಿದ್ದರು. 4ನೇ ತರಗತಿಯಲ್ಲಿದ್ದಾಗ ತನ್ನ 9ನೇ ವಯಸ್ಸಿನಲ್ಲಿ ಯಕ್ಷಗಾನ ಕಲಿಯಲು ಆರಂಭಿಸಿದ ಇವರಿಗೆ ಹೆತ್ತವರ ಸಂಪೂರ್ಣ ಬೆಂಬಲ ದೊರೆತಿತ್ತು.
ಕಳೆದ 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಯಕ್ಷಗಾನ ಗುರು ಕದ್ರಿ ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಕಲೆ ಅಭ್ಯಾಸ ಮಾಡಿದ್ದಾರೆ. ‘ಕದಳಿ ಕಲಾ ಕೇಂದ್ರ’ದ ಸಕ್ರಿಯ ಸದಸ್ಯೆಯಾಗಿರುವ ಆರ್ಷಿಯಾ, ಈ ಹಿಂದೆ ದೇವಿ ಮಹಾತ್ಯೆಯ ಮಹಿಷಾಸುರ, ಶುಂಭ, ನಿಶುಂಭ ಮುಂತಾದ ಖಳನಾಯಕನ ಪಾತ್ರಗಳು ಹಾಗೂ ಆದಿಮಾಯೆಯ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಪ್ರಥಮ ಬಾರಿಗೆ ಶ್ರೀ ದೇವಿಯ ಪಾತ್ರ ಮಾಡುತ್ತಿರುವುದು ಕಲಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.
ಯಕ್ಷಗಾನದಲ್ಲಿ ದೇವಿಯ ಪವಿತ್ರ ಪಾತ್ರವನ್ನು ನಿರ್ವಹಿಸುವುದೆಂದರೆ ಕೇವಲ ನಟನೆಯಷ್ಟೇ ಅಲ್ಲ. ಅದಕ್ಕೊಂದು ವಿಶೇಷ ಧಾರ್ಮಿಕ ಚೌಕಟ್ಟಿದೆ. ಕಲಾ ಧರ್ಮಕ್ಕೆ ಗೌರವ ನೀಡಿರುವ ಆರ್ಷಿಯಾ ಈ ಪಾತ್ರಕ್ಕಾಗಿ ಪ್ರಸ್ತುತ ಕಟ್ಟುನಿಟ್ಟಿನ ವ್ರತಾಚರಣೆಯಲ್ಲಿದ್ದಾರೆ. ಸಂಪೂರ್ಣ ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ತಾಯಿ ಉಳ್ಳಾಲ್ತಿಯ (ದುರ್ಗಾಪರಮೇಶ್ವರಿ) ಆಶೀರ್ವಾದದಿಂದಲೇ ನನಗೆ ಈ ಮಹತ್ವದ ಅವಕಾಶ ಒದಗಿ ಬಂದಿದೆ. ಎಲ್ಲಾ ಕಲಾಪ್ರೇಮಿಗಳ ಶುಭಹಾರೈಕೆ ನನ್ನ ಮೇಲಿರಲಿ” ಎಂದು ಆರ್ಷಿಯಾ ಮನವಿ ಮಾಡಿದ್ದಾರೆ. ಕರಾವಳಿಯ ಜಾತೀತ್ಯತೆಯನ್ನು ಎತ್ತಿ ಹಿಡಿಯುವ ಈ ಅಪೂರ್ವ ಬೆಳವಣಿಗೆಯನ್ನು ಯಕ್ಷಗಾನ ಅಭಿಮಾನಿಗಳು ಉತ್ಸಾಹದಿಂದ ಸ್ವಾಗತಿಸಿದ್ದಾರೆ.










