ನೆಲ್ಯಾಡಿ: ಮೊಬೈಲ್ ನೆಟ್‌ವರ್ಕ್ ಸ್ಥಗಿತ-ಜನರ ಪರದಾಟ

0

ನೆಲ್ಯಾಡಿ: ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಬೆನ್ನಲ್ಲೇ ಮೊಬೈಲ್ ನೆಟ್‌ವರ್ಕ್ ಸಹ ಕೈಕೊಟ್ಟ ಪರಿಣಾಮ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ನಾಲ್ಕು ಗಂಟೆಗೂ ಅಧಿಕ ಕಾಲ ಪರದಾಡಿದ ಘಟನೆ ಅ.3ರಂದು ನಡೆದಿದೆ.


ನೆಲ್ಯಾಡಿ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಮತ್ತು ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ 33/11 ಕೆ.ವಿ. ನೆಲ್ಯಾಡಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ವಿದ್ಯುತ್ ಅವಲಂಬಿತವಾಗಿರುವ ಹಲವು ಸೇವೆಗಳಿಗೆ ತೊಂದರೆ ಉಂಟಾಗಿತ್ತು. ಆದರೆ ಮಧ್ಯಾಹ್ನ ಸುಮಾರು 3 ಗಂಟೆಯ ಬಳಿಕ ವಿದ್ಯುತ್ ಸಮಸ್ಯೆಯ ಜತೆಗೆ ಮೊಬೈಲ್ ನೆಟ್‌ವರ್ಕ್ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಎದುರಾಯಿತು. ಮೊಬೈಲ್ ಟವರ್‌ನಲ್ಲಿದ್ದ ಜನರೇಟರ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಬ್ಯಾಕಪ್ ವ್ಯವಸ್ಥೆಯೂ ಕಾರ್ಯನಿರ್ವಹಿಸದೆ ನೆಟ್‌ವರ್ಕ್ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ. ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿದ್ದರಿಂದ ಕರೆ ಮಾಡುವುದು, ಕರೆ ಸ್ವೀಕರಿಸುವುದು, ಮೊಬೈಲ್ ಡೇಟಾ ಬಳಸುವುದು ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿದ್ದವು. ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಸಾರ್ವಜನಿಕರು ಆತಂಕಕ್ಕೊಳಗಾದರು. ವ್ಯಾಪಾರ-ವಹಿವಾಟು, ಆನ್‌ಲೈನ್ ಪಾವತಿ, ಬ್ಯಾಂಕಿಂಗ್ ಸೇರಿದಂತೆ ಮೊಬೈಲ್ ಸಂಪರ್ಕದ ಮೇಲೆ ಅವಲಂಬಿತವಾಗಿರುವ ದೈನಂದಿನ ಚಟುವಟಿಕೆಗಳಿಗೂ ಅಡಚಣೆ ಉಂಟಾಯಿತು.


ವಿದ್ಯುತ್ ಕಡಿತದ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದರಿಂದ ಮೊಬೈಲ್ ಸೇವೆ ಕೂಡ ಸ್ಥಗಿತಗೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಮುಖ ವಾಣಿಜ್ಯ ಹಾಗೂ ಸಂಚಾರ ಕೇಂದ್ರವಾಗಿರುವ ನೆಲ್ಯಾಡಿಯಲ್ಲಿ ಇಂತಹ ಸಂದರ್ಭಗಳಲ್ಲಿ ತುರ್ತು ಸಂಪರ್ಕ ವ್ಯವಸ್ಥೆ ಸುಗಮವಾಗಿರುವಂತೆ ಮೊಬೈಲ್ ಸೇವಾ ಸಂಸ್ಥೆಗಳು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here