







ನೆಲ್ಯಾಡಿ: ಮಂತ್ರಾಲಯಕ್ಕೆ ತೆರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿಗಳಿದ್ದ ಇನ್ನೋವಾ ಕಾರು ಹಾಗೂ ಫೋರ್ಡ್ ಎಂಡೆವರ್ ಕಾರು ನಡುವೆ ರಾಷ್ಟ್ರಿಯ ಹೆದ್ದಾರಿ 73ರ ಸಬ್ಬೇನಹಳ್ಳಿ ಸಮೀಪ ಡಿಕ್ಕಿ ಸಂಭವಿಸಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿಶಿಲ ನಿವಾಸಿಯೊಬ್ಬರು ಮೃತಪಟ್ಟು, ಇತರೇ ಪ್ರಯಾಣಿಕರು ಗಾಯಗೊಂಡ ಘಟನೆ ಸೆ.29ರಂದು ನಸುಕಿನ ಜಾವ 3.40ರ ವೇಳೆ ನಡೆದಿದೆ. ಈ ಮಧ್ಯೆ ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಮದ್ಯ ಸೇವಿಸಿರುವ ಬಗ್ಗೆ ತಿಳಿಸಿದ್ದರೂ ಪೊಲೀಸರು ಎಫ್‌ಐಆರ್‌ನಲ್ಲಿ ಈ ವಿಚಾರ ಉಲ್ಲೇಖಿಸಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ.


ಅಪಘಾತಕ್ಕೀಡಾದ ಇನ್ನೋವಾದಲ್ಲಿ ಪ್ರಯಾಣಿಸುತ್ತಿದ್ದ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇನ್ನೋವಾ ಚಾಲಕ ರಘು, ಪ್ರಯಾಣಿಕರಾದ ಶಿಶಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಧೀನ್, ಸತೀಶ, ದೀಪಕ್ ಅಲಿಯಾಸ್ ತಿರುಮಲೇಶ್ವರ ಹಾಗೂ ಶೋಭಿತ್ ಅಲಿಯಾಸ್ ನಾಗರಾಜ್ ಎಂಬವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇವರೆಲ್ಲರೂ ಸೆ.29ರಂದು ನಸುಕಿನ ಜಾವ 1.30ಕ್ಕೆ ಸ್ನೇಹಿತ ವಸಂತಕುಮಾರ್ ಅವರ ಮಾಲಕತ್ವದ ಇನ್ನೋವಾ ಕಾರುನಲ್ಲಿ ಶಿಶಿಲದಿಂದ ಮಂತ್ರಾಲಯಕ್ಕೆ ಹೊರಟ್ಟಿದ್ದು, ನಸುಕಿನ ಜಾವ 3.40ಕ್ಕೆ ರಾಷ್ಟ್ರೀಯ ಹೆದ್ದಾರಿ 73ರ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಬ್ಬೇನಹಳ್ಳಿ ಸಮೀಪ ಮೂಡಿಗೆರೆ ಕಡೆಯಿಂದ ಬಂದ ಫೋರ್ಡ್ ಎಂಡೆವರ್ ಕಾರು ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದೀಪೇಶ್ ಹಾಗೂ ಸುಧೀನ್ ಅವರಿಗೆ ಬಣಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಸುಧೀನ್ ಅವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿತ್ತು. ದೀಪೇಶ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ವೈದ್ಯರ ಸಲಹೆಯಂತೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪೇಶ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ದೀಪೇಶ್ ತಾಯಿ ಕಮಲ, ಸಹೋದರರಾದ ದೀಪಕ್, ದೀಕ್ಷಿತ್ ಅವರನ್ನು ಅಗಲಿದ್ದಾರೆ.



ಪೊಲೀಸರಿಗೆ ದೂರು;
ಘಟನೆ ಕುರಿತು ಇನ್ನೋವಾ ಕಾರು ಚಾಲಕ ರಘು ಅವರು ಅ.೧ರಂದು ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾ ಅಪರಾಧ ಸಂಖ್ಯೆ 54/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಹಾಗೂ 125(ಎ) ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳ ಚಿಕಿತ್ಸೆಯ ಕಾರಣದಿಂದ ಆಸ್ಪತ್ರೆಯಲ್ಲಿದ್ದುದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ಚಾಲಕ ರಘು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮದ್ಯಸೇವಿಸಿ ಕಾರು ಚಾಲನೆ;
ಫೋರ್ಡ್ ಎಂಡೆವರ್ ಕಾರು ಚಾಲಕ ಆಲ್ದೂರು ನಿವಾಸಿ ಸುಂದರೇಶ್ ಅವರ ಪುತ್ರ ಅಮೋಘ್ ಡಿ.ಎಸ್. ಮದ್ಯ ಸೇವಿಸಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ತಪ್ಪು ಬದಿಯಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಅಮೋಘ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಬಗ್ಗೆ ಬಣಕಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಅವರಿಗೆ ತಿಳಿಸಿದ್ದೆವು. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದರೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವಿಚಾರವನ್ನು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಅವರು ನಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ವಿಚಾರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೂ ತರಲಾಗಿದೆ. ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ ಎಂದು ಗಾಯಾಳುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.










