ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದ ವಿದ್ಯಾರ್ಥಿಗಳು : ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದ ಶಾಸಕ ಅಶೋಕ್ ರೈ

0

ಪುತ್ತೂರು:ಅ.3 ರಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬಸ್ ಸಮಸ್ಯೆಯ ಬಗ್ಗೆ ಶಾಸಕರ ಗಮನಸೆಳೆದಿದ್ದರು. ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಇತ್ಯರ್ಥಪಡಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದರು. ಅ.5 ರಂದು ಸೋಮವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕಚೇರಿಗೆ ಕರೆಸಿದ ಶಾಸಕರು ಅವರ ಜೊತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಪರಿಹಾರ ಒದಗಿಸಿದ್ದಾರೆ.


ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಬಸ್ ಸಮಸ್ಯೆಯ ಬಗ್ಗೆ ಶಾಸಕರ ಗಮನಸೆಳೆದಿದ್ದರು. ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ನಾವು ಬೊಳುವಾರು ಕಾಲೇಜಿಗೆ ಬರುವಲ್ಲಿ ಮಂಗಳೂರಿಗೆ ತೆರಳುವ ಸ್ಟೇಟ್ ಬ್ಯಾಂಕ್ ಬಸ್ಸಿನವರು ನಮ್ಮನ್ನು ಹತ್ತಲು ಬಿಡುವುದಿಲ್ಲ, ಬೇರೆ ಬಸ್ಸಲ್ಲಿ ಹೋಗಿ ಎಂದು ಹೇಳುತ್ತಾರೆ. ವಿಟ್ಲ, ಉಪ್ಪಿನಂಗಡಿ ಬಸ್ಸಿಗೆ ಹತ್ತಿದರೆ ಅವರು ಕೂಡಾ ಅದೇ ರೀತಿ ಹೇಳುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ನಗರದಲ್ಲಿ ಸಿಟಿ ಬಸ್ ಓಡಿಸುವ ಕೆಲಸ ಮಾಡಬೇಕು. ಬಸ್ಸಿನ ಕೊರತೆ ಇದ್ದಲ್ಲಿ ತಿಳಿಸಿ ಹೆಚ್ಚುವರಿ ಬಸ್ ತರಿಸುತ್ತೇನೆ. ಬೆಳಿಗ್ಗೆ ಕಾಲೇಜು ವಿದ್ಯಾರ್ಥಿಗಳು ಹೊರಡುವ ವೇಳೆ ಪುತ್ತೂರಿನಿಂದ ಬೊಳುವಾರು, ನೆಹರೂನಗರ, ದರ್ಬೆ, ಮುಕ್ರಂಪಾಡಿ ರೌಂಡ್ಸ್ ಆಗಿ ಬರುವ ವ್ಯವಸ್ಥೆಯನ್ನು ಮಾಡಬೇಕು ಇದರಿಂದ ನಗರದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಖಚಿತ ಭರವಸೆ ನೀಡಿದರು.ಉಳಿದಂತೆ ಪುಣಚ, ಪಾಣಾಜೆ, ಈಶ್ವರಮಂಗಲದ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.

ಸಂಪ್ಯದಲ್ಲಿ ಬಸ್ ನಿಲ್ಲಿಸುತ್ತೇವೆ
ಸುಳ್ಯ ಕಡೆಯಿಂದ ಬರುವ ಬಸ್ಸುಗಳು ಸಂಪ್ಯದಲ್ಲಿ ಬಸ್ ನಿಲ್ಲಿಸುವುದೇ ಇಲ್ಲ. ಬಸ್ ಖಾಲಿ ಇದ್ದರೂ ನಿಲ್ಲಿಸುವುದಿಲ್ಲ . ಆ ಕಡೆಯಿಂದ ಇತರೆ ಬಸ್ಸುಗಳು ಫುಲ್ ಆಗಿರುತ್ತದೆ ಬಸ್ ನಿಲ್ಲಿಸುವ ವ್ಯವಸ್ಥೆ ಮಾಡಿ ಎಂದು ಶಾಸಕರಲ್ಲಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ವಿಚಾರವನ್ನು ಅಧಿಕಾರಿಗಳ ಬಳಿ ಶಾಸಕರು ತಿಳಿಸಿದಾಗ ಸಂಪ್ಯದಲ್ಲಿ ನಾಳೆಯಿಂದಲೇ ಬಸ್ಸು ನಿಲ್ಲಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಈ ವೇಳೆ ವಿಭಾಗೀಯ ನಿಯಂತ್ರಣಾಧಿಕಾರಿ ಹರಿಬಾಬು, ವಿಭಾಗೀಯ ಸಂಚಲನಾಧಿಕಾರಿ ಜೈಶಂತ್, ಡಿಪೋ ಮೆನೆಜರ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here