ಬಾಳಿಲ: 25 ವರ್ಷಗಳ ಬಳಿಕ ಶಾಲಾ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

0

ಪುತ್ತೂರು: ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಶಾಲೆಯಲ್ಲಿ 1997-2000ನೇ ಸಾಲಿನ ವಿದ್ಯಾರ್ಥಿಗಳ ಬ್ಯಾಚ್‌ನ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಅಕ್ಟೋಬರ್ 3ರಂದು ನಡೆಯಿತು.

ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ.) ಅಧ್ಯಕ್ಷ ರಾಧಾಕೃಷ್ಣರಾವ್ ಯು. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಗಳ ಸಂಚಾಲಕ ಪಿ.ಜಿ.ಎಸ್.ಎನ್. ಪ್ರಸಾದ್ ಉದ್ಘಾಟಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಬಿ.ವಿ. ಶಗ್ರಿತ್ತಾಯ, ನಿವೃತ್ತ ಮುಖ್ಯಶಿಕ್ಷಕರಾದ ಜತ್ತಪ್ಪ ಎ., ನಿವೃತ್ತ ಶಿಕ್ಷಕರಾದ ಕೆ. ನಾರಾಯಣ ಭಟ್, ಶ್ರೀನಿವಾಸ ರೈ, ಶಾಲಾ ಸಿಬ್ಬಂದಿಗಳಾದ ಕೆ.ವಿ. ಶರ್ಮ ಬಾಳಿಲ, ಕೃಷ್ಣಪ್ಪ ಮೂಲ್ಯ, ಪದ್ಮಯ ಗೌಡ ಜೆ., ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ. ಪುರಂದರ ನಾರಾಯಣ ಭಟ್, ನಿವೃತ್ತ ಮುಖ್ಯಶಿಕ್ಷಕರಾದ ಎಂ.ಎಸ್. ಶಿವರಾಮ ಶಾಸ್ತ್ರಿ, ಯಶೋಧರ ಎನ್., ಸಹಶಿಕ್ಷಕಿ ಭಾರತಿ ಹಾಗೂ ಮುಖ್ಯಶಿಕ್ಷಕ ಉದಯಕುಮಾರ್ ರೈ ಎಸ್. ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ 1997-2000ನೇ ಬ್ಯಾಚ್‌ನ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಸಂಗ್ರಹಿಸಿದ ರೂ. 1,20,000 ದೇಣಿಗೆಯನ್ನು ಬ್ಯಾಚ್ ಪರವಾಗಿ ಪ್ರಶಾಂತ್ ಶೇಡಿಕರೆ ಅವರು ಶಾಲೆಯ ಭೌತಿಕ ಅಭಿವೃದ್ಧಿಗಾಗಿ ಹಸ್ತಾಂತರಿಸಿದರು. ಮುಂದೆಯೂ ಶಾಲೆಯ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಬ್ಯಾಚ್‌ನ ವಿದ್ಯಾರ್ಥಿಗಳು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಎ.ಎಂ., ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಹರಿಣಾಕ್ಷಿ ಬಿ., ರಕ್ಷಕ-ಶಿಕ್ಷಕ ಸಮಿತಿ ಅಧ್ಯಕ್ಷ ರಮೇಶ್ ಕಾಚಿಲ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಕಾಯಾರ, ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಜೊತೆ ಕಾರ್ಯದರ್ಶಿ ಭಾರತೀ ಶಂಕರ ಅದಾಳ, ವಿದ್ಯಾಸಂಸ್ಥೆಗಳ ಶಿಕ್ಷಕ-ಸಿಬ್ಬಂದಿ ವರ್ಗ ಹಾಗೂ ಪ್ರಸ್ತುತ ಹತ್ತನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

1997-2000ನೇ ಬ್ಯಾಚ್‌ನ ವಿದ್ಯಾರ್ಥಿಗಳಾದ ಪ್ರಿಯಾ ಮತ್ತು ಅಪರ್ಣಾ ತಂಡ ಪ್ರಾರ್ಥಿಸಿದರು. ಇದೇ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಇದೀಗ ಕೀರ್ತಿಶೇಷರಾಗಿರುವ ಶಿಕ್ಷಕರ ಪುಣ್ಯಸ್ಮರಣೆ ನೆರವೇರಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಬ್ಯಾಚ್‌ನ ವಿದ್ಯಾರ್ಥಿ ಡಾ. ಮಹೇಶ್ ಪದ್ಯಾಣ ಪ್ರಾಸ್ತಾವಿಕ ಮಾತನಾಡಿದರು. ಮಹಮ್ಮದ್ ಶರೀಫ್ ಬಾಳಿಲ ಸನ್ಮಾನ ಪತ್ರ ವಾಚಿಸಿದರು. ಮುಖ್ಯಶಿಕ್ಷಕ ಉದಯಕುಮಾರ್ ರೈ ಎಸ್. ಸ್ವಾಗತಿಸಿದರು. ಬ್ಯಾಚ್‌ನ ವಿದ್ಯಾರ್ಥಿ ಡಾ. ಸಚಿನ್ ನಡ್ಕ ವಂದಿಸಿದರು. ಕಾರ್ಯಕ್ರಮವನ್ನು ಅದೇ ಬ್ಯಾಚ್‌ನ ವಿದ್ಯಾರ್ಥಿಗಳಾದ ಮಧು ಪಿ.ಆರ್. ಮತ್ತು ಅವಿನಾಶ್ ಕೆ.ಎಸ್. ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಇದೇ ಬ್ಯಾಚ್‌ನ ವಿದ್ಯಾರ್ಥಿ, ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಸ್ತುತ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಕಲ್ಯಾಣ ಕರ್ನಾಟಕ ವಿಭಾಗದ ಧಾರವಾಡದಲ್ಲಿ ವಿಭಾಗ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಹರ್ಷ ನೆಟ್ಟಾರು, ಪ್ರಸ್ತುತ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು.

ಊಟ-ಉಪಹಾರಗಳೊಂದಿಗೆ ಸ್ನೇಹ, ಪ್ರೀತಿ ಹಾಗೂ ಆತ್ಮೀಯತೆಯನ್ನು ಹಂಚಿಕೊಂಡ ಹಳೆಯ ವಿದ್ಯಾರ್ಥಿಗಳು, ಮಧ್ಯಾಹ್ನದ ಬಳಿಕ ಕಳೆದ 25 ವರ್ಷಗಳ ಜೀವನಯಾನದ ನೆನಪುಗಳನ್ನು ಪರಸ್ಪರ ಮೆಲುಕು ಹಾಕಿದರು. ಬಳಿಕ ವಿವಿಧ ಮೋಜಿನ ಆಟಗಳು ಹಾಗೂ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here