







ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.4ರಂದು ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತಾಲೂಕು ಮಾತೃ ಸಮಿತಿ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಸಮುದಾಯ ಭವನದ ಕಾಮಗಾರಿಯ ಪ್ರಗತಿ, ಸಂಘದ ವಿವಿಧ ಕಾರ್ಯಚಟುವಟಿಕೆಗಳ ವರದಿ ಹಾಗೂ ಈವರೆಗಿನ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ಮಂಡಿಸಲಾಯಿತು. ಅಲ್ಲದೆ, ಸಂಘದ ವತಿಯಿಂದ ನಡೆಸಲ್ಪಡುತ್ತಿರುವ ವಿವಿಧ ಸಂಸ್ಥೆಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು.ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕೈಗೊಳ್ಳಲಿರುವ ವಿವಿಧ ಯೋಜನೆಗಳು ಹಾಗೂ ಅಗತ್ಯ ನಿರ್ಧಾರಗಳ ಕುರಿತು ಪ್ರಸ್ತಾವನೆಗಳನ್ನು ಮಂಡಿಸಿ, ಸಭೆಯ ಅನುಮೋದನೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭುವನೇಶ್ವರಿ ಕೆ. ಹೇಮಳ, ಮೋಹನ ಗೌಡ ಏನಾಜೆ ಹಾಗೂ ರಾಷ್ಟ್ರಮಟ್ಟದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಅವರನ್ನು ಗೌರವಿಸಲಾಯಿತು.
ಮಹಾಸಭೆಯ ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪುಯಿಲ, ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ತಾಲೂಕು ಸಲಹಾ ಸಮಿತಿಯ ಹಿರಿಯರಾದ ಜನಾರ್ದನ ಗೌಡ ಪಣೆಮಜಲು, ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ, ಒಕ್ಕಲಿಗ ಸ್ಪಂದನಾ ಸ್ವಸಹಾಯ ಟ್ರಸ್ಟ್ನ ಪ್ರಧಾನ ಸಂಚಾಲಕ ಬಾಲಕೃಷ್ಣ ಕೋಲ್ಪೆ ಸೇರಿದಂತೆ ಸಂಘದ ನಿರ್ದೇಶಕರು, ತಾಲೂಕು ಯುವ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ತಾಲೂಕು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ಥಾಪಕ ಸದಸ್ಯರು ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



ಸಂಘದ ನಿರ್ದೇಶಕ ದಯಾನಂದ ಆಲಡ್ಕ ಸ್ವಾಗತಿಸಿದರು. ನಿರ್ದೇಶಕ ಸರ್ವೋತ್ತಮ ಗೌಡ ಪಂಜೋಡಿ ವಂದಿಸಿದರು.













