







ಪುತ್ತೂರು: ಪೆರುವಾಯಿ ಗ್ರಾಮದ ಬದ್ಯಾರ್ನಲ್ಲಿ 10 ಮನೆಗಳ ಜನರು 50 ವರ್ಷಗಳಿಂದ ರಸ್ತೆ ಇಲ್ಲದೆ ಪರದಾಡುತ್ತಿದ್ದರು. ಮನೆ ಕಟ್ಟುವ ಸಾಮಗ್ರಿ, ಕಲ್ಲುಗಳನ್ನು ಕಾಲುದಾರಿಯಲ್ಲಿ ಹೊತ್ತುಕೊಂಡು ಹೋಗುವ ಸ್ಥಿತಿ, ವಾಹನ ಹತ್ತಲು ದೂರ ನಡೆದು ಬರಬೇಕಾದ ಪರಿಸ್ಥಿತಿ ಇತ್ತು. ಖಾಸಗಿ ಜಾಗದ ತಕರಾರಿನಿಂದ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಹಲವು ಜನಪ್ರತಿನಿಧಿಗಳು ಮಾತುಕತೆ ನಡೆಸಿದರೂ ಇತ್ಯರ್ಥವಾಗಿರಲಿಲ್ಲ.


ಶಾಸಕರ ಭೇಟಿ ಬಳಿಕ ಇತ್ಯರ್ಥ
ಕಳೆದ ನಾಲ್ಕು ತಿಂಗಳ ಹಿಂದೆ ಶಾಸಕ ಅಶೋಕ್ ರೈ ಬದ್ಯಾರ್ಗೆ ಭೇಟಿ ನೀಡಿ ರಸ್ತೆಯ ಅಗತ್ಯವನ್ನು ಮನಗಂಡರು. ಮರುದಿನವೇ ಖಾಸಗಿ ಜಾಗದ ಮಾಲೀಕರನ್ನು ಕರೆಸಿ ಮಾತುಕತೆ ನಡೆಸಿದರು. ಎರಡನೇ ಸುತ್ತಿನ ಮಾತುಕತೆಯಲ್ಲಿ ಮಾಲೀಕರು ಮಾನವೀಯ ನೆಲೆಯಲ್ಲಿ ರಸ್ತೆಗೆ ಒಪ್ಪಿಗೆ ನೀಡಿದರು. ಬಳಿಕ ಅನುದಾನ ಬಿಡುಗಡೆ ಮಾಡಿ ಕಳೆದ ವಾರ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿವಾದ ಇತ್ಯರ್ಥಪಡಿಸಿ ಬೇಡಿಕೆ ಈಡೇರಿಸಿದ ಶಾಸಕರಿಗೆ ಬದ್ಯಾರ್ ನಿವಾಸಿಗಳು ಸನ್ಮಾನ ಮಾಡಿದರು.




ಬದ್ಯಾರ್ನವರು ತಮ್ಮ ಕಷ್ಟ ಹೇಳಿಕೊಂಡಿದ್ದರು. 10 ಕುಟುಂಬಗಳು ಸಂಕಷ್ಟದಲ್ಲಿದ್ದವು, ಪಕ್ಕದ ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗದ ಮಾಲೀಕರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ಪುಣ್ಯದ ಕೆಲಸ ಮಾಡಿದ್ದಾರೆ
ಅಶೋಕ್ ರೈ, ಶಾಸಕರು, ಪುತ್ತೂರು
50 ವರ್ಷದಿಂದ ರಸ್ತೆ ಇಲ್ಲದೆ ಪರದಾಡುತ್ತಿದ್ದೇವೆ. ನಾವು ಬಿಜೆಪಿ ಕಾರ್ಯಕರ್ತರಾದರೂ ಹಿಂದಿನ ಬಿಜೆಪಿ ಶಾಸಕರು, ಮುಖಂಡರು ಬೇಡಿಕೆ ಈಡೇರಿಸಿರಲಿಲ್ಲ. ಕೆಲವರು ‘ಬಿಜೆಪಿಯವರ ಕೆಲಸ ಶಾಸಕರು ಮಾಡುವುದಿಲ್ಲ’ ಎಂದು ಛೇಡಿಸಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ಬೇಡಿಕೆ ಈಡೇರಿಸಿದ್ದಾರೆ
– ಜಯರಾಮ, ಫಲಾನುಭವಿ
ಯಾವ ಜನಪ್ರತಿನಿಧಿಯಿಂದಲೂ ಆಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ
ಶೀಲಾ ರೈ, ಫಲಾನುಭವಿ










