ಕೌಕ್ರಾಡಿ ಗ್ರಾಮಸಭೆ

0

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿಸಿರೋಡ್ ನಡುವೆ ನಡೆದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ನೆಲ್ಯಾಡಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೌಕ್ರಾಡಿ ಗ್ರಾಮಸಭೆಯಲ್ಲಿ ನಡೆದಿದೆ.


ಸಭೆ ಅ.೬ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಡಳಿತಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕನ್ಸ್‌ಲ್ಟೆಂಟ್ ಇಂಜಿನಿಯರ್ ಪದ್ಮಪ್ರಸಾದ್ ಅವರು ಮಾಹಿತಿ ನೀಡುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಗೌಡಸಾಗು ಸಹಿತ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮ ಪಂಚಾಯತ್ ರಸ್ತೆಗಳ ಕಾಂಕ್ರೀಟೀಕರಣ ಮಾಡಿಲ್ಲ. ನೆಲ್ಯಾಡಿ ಬಸ್ ನಿಲ್ದಾಣದ ಮುಂಭಾಗ ಯು-ಟರ್ನ್ ಕೊಟ್ಟಿಲ್ಲ, ಪೆರಿಯಶಾಂತಿಯಲ್ಲಿ ಕಾಡಿನ ಮಧ್ಯೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕೆಲವು ಕಡೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ಚರಂಡಿಯಲ್ಲೂ ಹೂಳು ತುಂಬಿಕೊಂಡಿದೆ. ಹೊಸಮಜಲು ಶಾಲೆಯ ಬಳಿ ರಸ್ತೆ ಅಪಾಯಕಾರಿಯಾಗಿದೆ ಸಹಿತ ಹೆದ್ದಾರಿ ಕಾಮಗಾರಿಯಿಂದ ಆಗಿರುವ ವಿವಿಧ ಸಮಸ್ಯೆಯನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪದ್ಮಪ್ರಸಾದ್ ಅವರು, ಗುತ್ತಿಗೆ ಒಪ್ಪಂದದಲ್ಲಿ ಇರುವ ಸಂಪರ್ಕ ರಸ್ತೆಗಳಿಗೆ ಕಾಂಕ್ರಿಟೀಕರಣ ಮಾಡಲಾಗಿದೆ. ಇನ್ನೂ ಅವಕಾಶವಿದೆ. ಗ್ರಾಮಸ್ಥರು ಬೇಡಿಕೆಗಳ ಪಟ್ಟಿ ಕೊಡಿ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಸಲ್ಲಿಸುವುದಾಗಿ ಹೇಳಿದರು. ಗ್ರಾಮಸ್ಥರಾದ ಕೆ.ಇ.ಅಬೂಬಕ್ಕರ್, ವರ್ಗೀಸ್ ಅಬ್ರಹಾಂ, ಕೆ.ಎಂ.ಹನೀಫ್, ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್, ರಫೀಕ್ ಬೈಲು, ಎಂ.ಕೆ.ಇಬ್ರಾಹಿಂ, ನೌಶಾದ್, ವಿಶ್ವನಾಥ, ಜಾನ್ಸನ್ ಕಾಪಿನಬಾಗಿಲು ಮತ್ತಿತರರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ಕುರಿತು ಇಲಾಖಾಧಿಕಾರಿಯವರ ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ಸು ನಿಲ್ದಾಣಕ್ಕೆ ಹೇಗೆ ಬರುವುದು ?:
ಮಂಗಳೂರಿನಿಂದ ಬೆಂಗಳೂರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್ಸುಗಳು ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಎಲ್ಲಿಂದ ಬರಬೇಕು. ಇಲ್ಲಿ ಅಗತ್ಯವಾಗಿ ಯು-ಟರ್ನ್ ಕೊಡಬೇಕಿತ್ತು. ಎಂಜಿರದಲ್ಲಿ ಮಲೆನಾಡು ಹೋಟೆಲ್ ಬಳಿಯೇ ಯು-ಟರ್ನ್ ಕೊಡಲಾಗಿದೆ ಎಂಬ ವಿಚಾರವನ್ನು ವರ್ಗೀಸ್ ಅಬ್ರಹಾಂ ಅವರು ಎನ್‌ಹೆಚ್ ಅಧಿಕಾರಿಯವರ ಗಮನಕ್ಕೆ ತಂದರು. ಹೊಸಮಜಲು ಶಾಲೆ ಬಳಿ ತಡೆಗೋಡೆ ನಿರ್ಮಾಣ, ಶಾಲೆಗೆ ಸಮರ್ಪಕ ರಸ್ತೆ ಸಂಪರ್ಕ, ಸ್ಕೈವಾಕ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಸರ್ವೀಸ್ ರಸ್ತೆ ಅಗಲ ಕಿರಿದು;
ನೆಲ್ಯಾಡಿ ಪೇಟೆಯಲ್ಲಿ ಸರ್ವೀಸ್ ರಸ್ತೆ ಅಗಲ ಕಿರಿದಾಗಿದೆ. ಸಂಬಂಧಪಟ್ಟವರಿಗೆ ಪರಿಹಾರ ಕೊಟ್ಟ ಮೇಲೆ ಇಲಾಖೆ ಜಾಗ ಸ್ವಾಧೀನಪಡಿಸಿಕೊಂಡು ಸಮರ್ಪಕ ಸರ್ವೀಸ್ ರಸ್ತೆ ಮಾಡಬೇಕಿತ್ತು. ಈ ರೀತಿ ಮಾಡದೇ ಇರುವುದರಿಂದ ಈಗ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ವಿಶ್ವನಾಥ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದರು. 5.5 ಮೀ.ನಿಂದ 7 ಮೀ.ತನಕ ಸರ್ವೀಸ್ ರಸ್ತೆ ಅಗಲ ಇರಬೇಕೆಂಬ ನಿಯಮವಿದೆ ಎಂದು ಪದ್ಮಪ್ರಸಾದ್ ತಿಳಿಸಿದರು. ನಿಯಮಾನುಸಾರ ಸರ್ವೀಸ್ ರಸ್ತೆ ಅಗಲೀಕರಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಆಸ್ಪತ್ರೆ ಮೇಲ್ದರ್ಜೆಗೇರಿಸಿ;
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲು ಅರ್ಹವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಯ ತನಕ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರೊಬ್ಬರ ನೇಮಕ ಮಾಡಬೇಕೆಂದು ಗ್ರಾಮಸ್ಥ ಕೆ.ಇ.ಅಬೂಬಕ್ಕರ್ ಅವರು ಒತ್ತಾಯಿಸಿದರು. ಇದಕ್ಕೆ ಇತರೇ ಗ್ರಾಮಸ್ಥರೂ ಧ್ವನಿಗೂಡಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿಶಿರ ಅವರು ಪ್ರತಿಕ್ರಿಯಿಸಿ, ಸದ್ರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಮಂಜೂರು ಆಗಿರುವ 23 ಹುದ್ದೆಗಳ ಪೈಕಿ 12 ಹುದ್ದೆ ಖಾಲಿಯಾಗಿದೆ. ಖಾಯಂ ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್ ಇಲ್ಲ. 7 ಉಪಕೇಂದ್ರಗಳಿಗೆ ಮೂವರು ಪ್ರಾಥಮಿಕ ಸುರಕ್ಷಾಧಿಕಾರಿಗಳು ಮಾತ್ರ ಇದ್ದಾರೆ. ದಿನವೊಂದಕ್ಕೆ 100ಕ್ಕಿಂತ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರುವ ಮೊದಲು ಅಗತ್ಯ ಸಿಬ್ಬಂದಿಗಳ ನೇಮಕ ಆಗಬೇಕಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಹಾಗೂ ನೆಲ್ಯಾಡಿಗೆ 108 ಆಂಬುಲೆನ್ಸ್‌ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಹೊಸ ಅಂಗನವಾಡಿಗೆ ಬೇಡಿಕೆ;
ಶಾಂತಿಬೆಟ್ಟು ಭಾಗದ ಮಕ್ಕಳು ನೆಲ್ಯಾಡಿಯ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಾರೆ. ಇಲ್ಲಿ ಸಾಕಷ್ಟು ಮಕ್ಕಳಿದ್ದು ಶಾಂತಿಬೆಟ್ಟುನಲ್ಲಿ ಅಂಗನವಾಡಿ ಕೇಂದ್ರ ಆರಂಭಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಇಸ್ಮಾಯಿಲ್ ಹೇಳಿದರು. ಎಂ.ಕೆ.ಇಬ್ರಾಹಿಂ, ರಫೀಕ್ ಬೈಲು ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಸಿಡಿಪಿಒ ಹರೀಶ ಅವರು, ಹೊಸ ಅಂಗನವಾಡಿ ಕೇಂದ್ರ ಆರಂಭಿಸುವುದರಿಂದ ಪಕ್ಕದ ಅಂಗನವಾಡಿಗೂ ತೊಂದರೆಯಾಗಬಾರದು. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಕೌಕ್ರಾಡಿ ಚರ್ಚ್ ಅಂಗನವಾಡಿ ಕೇಂದ್ರದಲ್ಲಿ 2022-23ನೇ ಸಾಲಿನಲ್ಲಿ ಶೌಚಾಲಯ ನಿರ್ಮಾಣಕ್ಕೆ 40 ಸಾವಿರ ರೂ.ಅನುದಾನ ಮಂಜೂರು ಆಗಿದ್ದರು ಕಾಮಗಾರಿ ನಡೆದಿಲ್ಲ. ಪ್ರತಿ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸುತ್ತಿದ್ದೇವೆ ಎಂದು ಜಾನ್ಸನ್ ಕಾಪಿನಬಾಗಿಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಹರೀಶ್ ಅವರು, ೨೦೨೪-೨೫ನೇ ಸಾಲಿನಲ್ಲಿ ಅನುದಾನ ಬಿಡುಗಡೆಗೊಂಡಿದ್ದು ಹ್ಯಾಬಿಟ್ಯುಡ್ ಸಂಸ್ಥೆಯವರಿಗೆ ಗುತ್ತಿಗೆ ಆಗಿದೆ. ಫಾಲೋಅಪ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹೊಸಮಜಲು ಶಾಲಾ ಕಟ್ಟಡ ದುರಸ್ತಿಗೊಳಿಸಿ;
ಹೊಸಮಜಲು ಸರಕಾರಿ ಶಾಲೆಯಲ್ಲಿ 78 ಮಕ್ಕಳಿದ್ದು ಕೊಠಡಿಗಳ ಕೊರತೆ ಇದೆ. ಅಲ್ಲದೇ ಕಟ್ಟಡವೂ ದುರಸ್ತಿಯಾಗಬೇಕಿದೆ. ಶಾಲೆಗೆ ಸರಿಯಾದ ಮೂಲ ಸೌಕರ್ಯವೂ ಇಲ್ಲ. ಶಾಲೆಗೆ ಸಂಪರ್ಕಿಸುವ ರಸ್ತೆ ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ಕಡಿತಗೊಂಡಿದ್ದು ಈಗ ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲ. ಇಲ್ಲಿ ತಡೆಗೋಡೆಯೂ ಆಗಬೇಕೆಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಬಾಣಜಾಲು ಒತ್ತಾಯಿಸಿದರು. ಕೆ.ಇ.ಅಬೂಬಕ್ಕರ್ ಹಾಗೂ ಇತರೇ ಗ್ರಾಮಸ್ಥರೂ ಇದಕ್ಕೆ ಪೂರಕವಾಗಿ ಮಾತನಾಡಿದರು. ಈ ಬಗ್ಗೆ ಚರ್ಚೆ ನಡೆದು ಶಾಲೆಗೆ ಕೊಠಡಿ, ಆವರಣಗೋಡೆ ನಿರ್ಮಾಣಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ಪದವಿ ಕಾಲೇಜು ಸ್ಥಳಾಂತರಕ್ಕೆ ವಿರೋಧ;
ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಬಂದ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಡಬಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ನೆಲ್ಯಾಡಿಯಿಂದ ಪದವಿ ಕಾಲೇಜು ಸ್ಥಳಾಂತರ ಆಗಬಾರದು. ನೆಲ್ಯಾಡಿಯಲ್ಲಿಯೇ ಈ ಕಾಲೇಜು ಉಳಿಸಬೇಕು ಎಂದು ಅಬೂಬಕ್ಕರ್ ಸಿದ್ದೀಕ್ ಒತ್ತಾಯಿಸಿದರು. ಇದಕ್ಕೆ ಇತರೇ ಗ್ರಾಮಸ್ಥರು ಬೆಂಬಲ ಸೂಚಿಸಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ನಿಲ್ದಾಣಕ್ಕೆ ಬಸ್‌ಗಳು ಬರಲಿ;
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾದ ಬಳಿಕ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಇದರಿಂದ ಶಾಲಾ ಮಕ್ಕಳು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಂಗಳೂರು ಹಾಗೂ ಬೆಂಗಳೂರಿಗೆ ತೆರಳುವ ಬಸ್‌ಗಳು ಕಡ್ಡಾಯವಾಗಿ ನಿಲ್ದಾಣಕ್ಕೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿ, ಬಸ್‌ನಿಲ್ದಾಣದ ಸಮೀಪ ಯು-ಟರ್ನ್ ಇಲ್ಲದೇ ಇರುವುದರಿಂದ ಸಮಸ್ಯೆ ಉಂಟಾಗಿದೆ. ಆದರೂ ಬಸ್‌ಗಳು ನಿಲ್ದಾಣಕ್ಕೆ ಬರುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಬಸ್ ನಿಲ್ದಾಣ ಪ್ರವೇಶ ಭಾಗದಲ್ಲಿ ಯು-ಟರ್ನ್ ನೀಡದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಬಿಲ್ಲು ಬಾಕಿ ಮನ್ನಾ ಮಾಡಿ;
ಮೆಸ್ಕಾಂಗೆ ಗ್ರಾಮ ಪಂಚಾಯಿತಿ ಲಕ್ಷಾಂತರ ರೂ.ಬಿಲ್ಲು ಬಾಕಿ ಉಳಿಸಿಕೊಂಡಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡು ವಿದ್ಯುತ್ ಬಿಲ್ಲು ಬಾಕಿ ಮನ್ನಾ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಗ್ರಾಮ ಪಂಚಾಯತ್‌ನಲ್ಲಿ ಜೆರಾಕ್ಸ್ ಯಂತ್ರವಿದ್ದರೂ 5310 ರೂ.ಜೆರಾಕ್ಸ್‌ಗೆ ಪಾವತಿ ಮಾಡಿರುವುದಕ್ಕೆ ಗ್ರಾಮಸ್ಥರಾದ ರಫೀಕ್ ಬೈಲು, ಸಿದ್ದೀಕ್ ಅವರು ಆಕ್ಷೇಪ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮೋಹನ್‌ಕುಮಾರ್ ಅವರು, ಒಂದೇ ದಿನ ಬಲ್ಕ್ ಆಗಿ ಜೆರಾಕ್ಸ್ ತೆಗೆದಲ್ಲಿ ಜೆರಾಕ್ಸ್ ಯಂತ್ರ ಕೆಟ್ಟುಹೋಗುತ್ತದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಹೊರಗಡೆ ಜೆರಾಕ್ಸ್ ತೆಗೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ನೆಲ್ಯಾಡಿಯಲ್ಲಿ ಆಟೋ ರಿಕ್ಷಾಗಳಿಗೆ ಪಾರ್ಕಿಂಗ್‌ಗೆ ಜಾಗ ಗುರುತಿಸಿಕೊಡಬೇಕೆಂದು ರಿಕ್ಷಾ ಚಾಲಕರು ಮನವಿ ಮಾಡಿದರು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ ಕೆ., ಮೇಲ್ವಿಚಾರಕಿ ಪುಷ್ಪಾವತಿ, ಉಪವಲಯಾರಣ್ಯಾಧಿಕಾರಿ ವಿನಯಕುಮಾರ್, ಕೆಎಸ್‌ಆರ್‌ಟಿಸಿಯ ಕೆ.ಭಾಸ್ಕರ ಶೆಟ್ಟಿ, ಸಂಚಾರ ನಿಯಂತ್ರಕ ಭುಜಂಗ ಜಯ, ತೋಟಗಾರಿಕೆ ಇಲಾಖೆಯ ರವಿರಾಜ ರೈ, ಪೊಲೀಸ್ ಇಲಾಖೆಯ ದಯಾನಂದ, ಕೃಷಿ ಇಲಾಖೆಯ ವಿಖ್ಯಾತ್ ಎಂ., ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪದ್ಮಪ್ರಸಾದ್, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಯು.ಎಂ., ಶಿಕ್ಷಣ ಇಲಾಖೆಯ ದೇವಕಿ ಟಿ.ಜಿ., ಮೆಸ್ಕಾಂ ಕಿರಿಯ ಇಂಜಿನಿಯರ್ ರಾಮಣ್ಣ ಹೆಚ್., ವಿಆರ್‌ಡಬ್ಲ್ಯು ಕಾರ್ಯಕರ್ತ ಸುನೀಲ್ ಪಿ.ವಿ., ಮತ್ತಿತರರು ಇಲಾಖಾವಾರು ಮಾಹಿತಿ ನೀಡಿದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ದೇವಿಕಾ ವಂದಿಸಿದರು. ಸಿಬ್ಬಂದಿ ಕಸ್ತೂರಿ ಜಮಾಖರ್ಚು ವಿವರ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಕಳಪೆ ಚಪ್ಪಲ್ ವಿತರಣೆ;
ಸರಕಾರಿ ಶಾಲೆಗಳಿಗೆ ಈ ವರ್ಷ ವಿತರಣೆಯಾಗಿರುವ ಚಪ್ಪಲ್ ಕಳಪೆಯಾಗಿದೆ. ಪ್ಲಾಸ್ಟಿಕ್ ಚಪ್ಪಲ್ ವಿತರಣೆ ಮಾಡಿದ್ದು ಮಕ್ಕಳು ಇದನ್ನು ಉಪಯೋಗ ಮಾಡುತ್ತಿಲ್ಲ, ಇದು ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥ ಇಲ್ಯಾಸ್ ಅವರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್‌ಪಿ ದೇವಕಿ ಟಿ.ಜಿ.ಅವರು, ಕಳೆದ ವರ್ಷ ಸ್ಥಳೀಯವಾಗಿ ಟೆಂಡರ್ ನೀಡಲಾಗಿತ್ತು. ಆದರೆ ಈ ವರ್ಷ ರಾಜ್ಯದಲ್ಲಿ ಒಬ್ಬರಿಗೆ ಮಾತ್ರ ಟೆಂಡರ್ ಕೊಟ್ಟಿದ್ದಾರೆ. ಇದರಿಂದಾಗಿ ಸಮಸ್ಯೆಯಾಗಿದೆ. ಈ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಸರಕಾರಿ ಶಾಲೆಯೊಂದರಲ್ಲಿ ಶೇ.70ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳಿದ್ದಲ್ಲಿ ಆ ಶಾಲೆಯನ್ನು ಮೌಲನಾ ಆಜಾದ್ ಶಾಲೆಯಾಗಿ ಪರಿವರ್ತಿಸಲು ಅವಕಾಶವಿದೆ ಎಂದು ಸಿಆರ್‌ಪಿ ದೇವಕಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಹುತೇಕ ಇಲಾಖಾಧಿಕಾರಿಗಳು ಹಾಜರು;
ಕೌಕ್ರಾಡಿ ಗ್ರಾ.ಪಂ.ನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಸೆ.19ರಂದು ನಿಗದಿಯಾಗಿತ್ತು. ಈ ಸಭೆಗೆ ರಾಷ್ಟ್ರೀಯ ಹೆದ್ದಾರಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಸಭೆಯನ್ನು ಅ.6ಕ್ಕೆ ಮುಂದೂಡಲಾಗಿತ್ತು. ಈ ಬಾರಿ ಬಹುತೇಕ ಇಲಾಖೆಯ ಅಧಿಕಾರಿಗಳು ಸಭೆಗೆ ಆಗಮಿಸಿದ್ದು ಸಂಜೆ 4 ಗಂಟೆ ತನಕ ಗ್ರಾಮಸಭೆ ನಡೆಯಿತು.

LEAVE A REPLY

Please enter your comment!
Please enter your name here