







ಪುತ್ತೂರು: ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಮೃತಪಟ್ಟ ಕೆಮ್ಮಾಯಿ ನಿವಾಸಿ ಮೆಸ್ಕಾಂ ಪವರ್ ಮ್ಯಾನ್ ರವಿ ಗೌಡ ಅವರ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡುವುದರ ಜತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಒದಗಿಸುವಂತೆ ಆಗ್ರಹಿಸಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವತಿಯಿಂದ ಅ.9ರಂದು ಪುತ್ತೂರಿನ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲೇ ಸಂಭವಿಸಿದ ದುರಂತದಿಂದ ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡಿರುವ ರವಿ ಗೌಡ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ನೆರವು ನೀಡಬೇಕು. ಕುಟುಂಬದ ಆರ್ಥಿಕ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಹಾರ ಒದಗಿಸುವುದರ ಜತೆಗೆ ಅರ್ಹ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಆಸರೆಯಾಗಬೇಕು ಎಂದು ಸಂಘವು ಮನವಿಯಲ್ಲಿ ಒತ್ತಾಯಿಸಿದೆ.



ಈ ಹಿಂದೆ ಮೃತ ರವಿ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಮುದಾಯದ ಪ್ರಮುಖರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವನ್ನೂ ಹಸ್ತಾಂತರಿಸಿದ್ದರು. ಇದರ ಮುಂದುವರಿದ ಭಾಗವಾಗಿ ಇದೀಗ ಸರ್ಕಾರದ ಗಮನ ಸೆಳೆದು ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ನೆರವು ದೊರಕಿಸಿಕೊಡುವಂತೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಅಧ್ಯಕ್ಷ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಚಿದಾನಂದ ಬೈಲಾಡಿ, ಕೋಶಾಧಿಕಾರಿ ಶ್ರೀಧರ ಕಣಜಾಲು ಹಾಗೂ ಕಾರ್ಯದರ್ಶಿಗಳಾದ ಯತೀಶ್ ದೇವ ಸಂಟ್ಯಾರು ಮತ್ತು ಮೋಹನ್ ಗೌಡ ಬಾಳುಗೋಡು ಉಪಸ್ಥಿತರಿದ್ದರು.










