







ಪುತ್ತೂರು:ಪುತ್ತೂರಿನ ಮೂರು ಕಡೆಗಳಲ್ಲಿ ರೈಲ್ವೇ ಹಳಿಗಳನ್ನು ದಾಟಿ ಸಾಗುವ ರಸ್ತೆಗಳಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಹಳೆಯ ಕಾಲದ ಲೆವೆಲ್ ಕ್ರಾಸಿಂಗ್ ಗೇಟ್ ವ್ಯವಸ್ಥೆಗೆ ಮುಕ್ತಿ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.


ಪುತ್ತೂರು ನಗರ ಸಮೀಪದ ಮುಕ್ವೆ ಗೇಟ್(ಎಲ್.ಸಿ.102), ಪುತ್ತೂರು ಕ್ಲಬ್ ಬಳಿಯ ಬೆದ್ರಾಳ ಗೇಟ್ (ಎಲ್.ಸಿ.103) ಹಾಗೂ ಸಾಮೆತ್ತಡ್ಡ ಬಳಿಯ ಪುತ್ತೂರು ಗೇಟ್(ಎಲ್.ಸಿ.104) ಪ್ರದೇಶಗಳಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ.ಪ್ರಸ್ತುತ ಈ ಮೂರು ಜಾಗಗಳಲ್ಲಿ ರೈಲ್ವೇ ಗೇಟ್ಗಳಿದ್ದು ರೈಲು ಸಂಚಾರದ ಸಂದರ್ಭದಲ್ಲಿ ಗೇಟ್ಗಳನ್ನು ಹಾಕುವುದರಿಂದ ವಾಹನ ಸವಾರರು ಸಾಕಷ್ಟು ಹೊತ್ತು ಕಾದು ಸಂಚರಿಸಬೇಕಾದ ಸ್ಥಿತಿ ಇದೆ.ಇಲ್ಲಿ ಮೇಲ್ಸೇತುವೆ ನಿರ್ಮಾಣಗೊಂಡರೆ ನೇರವಾಗಿ ಸಾಗುವುದಕ್ಕೆ ಅನುಕೂಲವಾಗಲಿದೆ.




21.24 ಕೋ.ರೂ. ಅನುದಾನ:
ಮುಕ್ವೆ, ಪುತ್ತೂರು ಕ್ಲಬ್ ಬಳಿ ಹಾಗೂ ಸಾಮೆತ್ತಡ್ಕ ಗೇಟ್ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ 21.24 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಕಳೆದ ಹಲವು ವರ್ಷಗಳ ಬೇಡಿಕೆಯಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಕಳೆದ ಜೂನ್ ತಿಂಗಳಲ್ಲಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿಯ ಶಿಲಾನ್ಯಾಸಕ್ಕೆ ಆಗಮಿಸಿದ್ದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಈ ವಿಚಾರವನ್ನು ತಿಳಿಸಿದ್ದರು.ಪ್ರಸ್ತುತ ಅದರ ಪ್ರಕ್ರಿಯೆಗಳು ಪೂರ್ಣಗೊಂಡು ಶೀಘ್ರ ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ ಎನ್ನಲಾಗಿದೆ.ಮೂರು ರೈಲ್ವೇ ಮೇಲ್ಸೇತುವೆಗಳ ಕಾಮಗಾರಿ ಒಟ್ಟು 21,24,65,೦೦೦ ರೂ. ವೆಚ್ಚದಲ್ಲಿ ನಡೆಯಲಿದ್ದು,2028ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಪುತ್ತೂರು ನಗರದ ಸಾಮೆತ್ತಡ್ಕ ಹಾಗೂ ಪುತ್ತೂರು ಕ್ಲಬ್ ಬಳಿ ರಸ್ತೆಗಳು ಮೇಲ್ಭಾಗದಲ್ಲಿದ್ದು,ರೈಲ್ವೇ ಹಳಿಯು ಆಳದಲ್ಲಿರುವುದರಿಂದ ಮೇಲ್ಸೇತುವೆಗೆ ರಸ್ತೆಗಳನ್ನು ಹೆಚ್ಚು ಎತ್ತರಿಸಬೇಕಾದ ಅಗತ್ಯವಿಲ್ಲ.ಇರುವ ರಸ್ತೆಗಳನ್ನೇ ನೇರವಾಗಿ ಸಂಪರ್ಕಿಸಲು ಅನುಕೂಲವಾಗಲಿದೆ.ಆದರೆ ಮುಕ್ವೆ ಗೇಟ್ ಬಳಿ ರಸ್ತೆ ಹಾಗೂ ರೈಲ್ವೇ ಹಳಿ ಸಮನಾಂತರದಲ್ಲಿರುವುದರಿಂದ ಈ ಭಾಗದಲ್ಲಿ ರಸ್ತೆಯನ್ನು ಎತ್ತರಿಸಬೇಕಿರುವುದು ಅನಿವಾರ್ಯವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
ಜಿಲ್ಲೆಯ ಎಲ್ಲಾ ಲೆವೆಲ್ ಕ್ರಾಸಿಂಗ್ಗಳಿಗೆ ಅನುದಾನ
ಪುತ್ತೂರು ಭಾಗದಲ್ಲಿ ಮೂರು ರೈಲ್ವೇ ಮೇಲ್ಸೇತುವೆಗಳ ನಿರ್ಮಾಣಕ್ಕಾಗಿ ಈಗಾಗಲೇ ಅನುದಾನ ಮಂಜೂರಾಗಿ ಶೀಘ್ರ ಕಾಮಗಾರಿ ಆರಂಭಗೊಳ್ಳುತ್ತದೆ.
ದ.ಕ.ಜಿಲ್ಲೆಯ ಎಲ್ಲಾ ಲೆವೆಲ್ ಕ್ರಾಸಿಂಗ್ಗಳನ್ನು ಗುರುತಿಸಿ ಮುಂದೆ ಹಂತ ಹಂತವಾಗಿ ಓವರ್ಬ್ರಿಡ್ಜ್ ಅಥವಾ ಅಂಡರ್ಪಾಸ್ ರೈಲ್ವೇ ನಿರ್ಮಾಣಕ್ಕೆ ಅನುದಾನ ಒದಗಿಸುವ ಕಾರ್ಯ ಮಾಡಲಾಗುವುದು
-ಕ್ಯಾ|ಬ್ರಿಜೇಶ್ ಚೌಟ, ದ.ಕ.ಸಂಸದರು

ಬಹುತೇಕ ಲೆವೆಲ್ ಕ್ರಾಸಿಂಗ್ಗಳಿಗೆ ಮುಕ್ತಿ
ಪ್ರಸ್ತುತ ನಿರ್ಮಾಣಗೊಳ್ಳುವ ಮೂರು ರೈಲ್ವೇ ಮೇಲ್ಸೇತುವೆಗಳು ಕೂಡ ಕಬಕ-ಪುತ್ತೂರು ಹಾಗೂ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಗಳ ಮಧ್ಯೆ ನಿರ್ಮಾಣಗೊಳ್ಳುತ್ತಿದೆ.ಈ ಎರಡು ನಿಲ್ದಾಣಗಳ ಮಧ್ಯೆ ಈಗಾಗಲೇ ಕಡಬ ತಾಲೂಕಿನ ಕೋಡಿಂಬಾಳ, ಬಜಕೆರೆ, ಪುತ್ತೂರು ತಾಲೂಕಿನ ನರಿಮೊಗರಿನ ಪುರುಷರಕಟ್ಟೆ ಹಾಗೂ ಗಡಿಪಿಲದಲ್ಲಿ ಸುಮಾರು 24 ಕೋಟಿ ರೂ.ವೆಚ್ಚದಲ್ಲಿ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇಲ್ಸೇತುವೆಗಳ ನಿರ್ಮಾಣದ ಮೂಲಕ ಈ ಭಾಗದಲ್ಲಿ ಬಹುತೇಕ ಲೆವೆಲ್ ಕ್ರಾಸಿಂಗ್ಗಳಿಗೆ ಮುಕ್ತಿ ಸಿಗುವಂತಾಗಿದೆ.










