ಡಾ| ಶಿವರಾಮ ಕಾರಂತರ 125ನೇ ಜನ್ಮದಿನೋತ್ಸವ- ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ

0


ಮುಂದಿನ ನೂರು ವರ್ಷಗಳಲ್ಲಿಯೂ ಕಾರಂತರು ಪ್ರಸ್ತುತವಾಗುತ್ತಾರೆ- ಡಾ|ಪುರುಷೋತ್ತಮ ಬಿಳಿಮಲೆ
ಕಾರಂತರ ಕೃತಿಗಳನ್ನು ಮುಂದಿನ ಪೀಳಿಗೆಗೆ ಅಂಟಿಸಬೇಕು- ಅಶೋಕ್ ಕುಮಾರ್ ರೈ

ಪುತ್ತೂರು: 20ನೇ ಶತಮಾನದ ಉದ್ದಕ್ಕೂ ಬದುಕಿದ ಎರಡು ಲೇಖಕರು ಕುವೆಂಪು ಮತ್ತು ಕಾರಂತರು. 90ರ ದಶಕದವರೆಗೂ ಬದುಕಿದರು. ಕರ್ನಾಟಕ ಏಕೀಕರಣ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲದ ಇವರಿಬ್ಬರ ತಮ್ಮ ಕೃತಿ, ಚಿಂತನೆಗಳು 21ನೇ ಶತಮಾನದಲ್ಲಿಯೂ ಗಟ್ಟಿ ಹೆಜ್ಜೆ ಇಟ್ಟದೆ. ಇಂದಿಗೂ ಅವರಿಬ್ಬರೂ ಪ್ರಸ್ತುತವಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ|ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ, ಸಹಾಯಕ ಆಯುಕ್ತರ ಕಾರ್ಯಲಯ ಪುತ್ತೂರು ಹಾಗೂ ದ. ಕ. ಜಿಲ್ಲಾಡಳಿತ ಮಂಗಳೂರು ವತಿಯಿಂದ ಬಾಲವನದಲ್ಲಿ ನಡೆದ ಡಾ| ಶಿವರಾಮ ಕಾರಂತರ 125ನೇ ಜನ್ಮ ದಿನೋತ್ಸವ ಮತ್ತು ಡಾ| ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ -2026 ಕಾರ್ಯಕ್ರಮದಲ್ಲಿ ಅವರು ಕಾರಂತರ ಸ್ಮರಣೆ ಮಾಡಿ ಮಾತನಾಡಿದರು.


ಕುವೆಂಪುರವರ ಭಾಷೆಯ ಬರೆದ ವಿಚಾರಗಳು ಇಂದಿಗೂ ಚರ್ಚೆಯ ವಿಷಯವಾಗಿದೆ. ಅವರು ಧರ್ಮವನ್ನು ಪರಿಷ್ಕರಿಸುವುದನ್ನು ವಿರೋಧಿಸಿದರು. ಧರ್ಮದ ಕೆಟ್ಟ ವ್ಯಾಖ್ಯಾನ ತಿರಸ್ಕರಿಸಿದರು. ಮುಂದಿನ 250 ವರ್ಷಕ್ಕೂ ಮಾರ್ಗದರ್ಶನ ನೀಡುವ ಶಕ್ತಿ ನೀಡಿದವರು ಎಂದರು. ಇಂದು ಬಡವರ ಭೂಮಿ ಬಹುರಾಷ್ಟ್ರೀಯ ಕಂಪೆನಿಗೆ ಹೋಗುತ್ತಿದೆ. ದೇಶದಲ್ಲಿ ಶೇ.7ರಷ್ಟು ಜನರಲ್ಲಿ ದೇಶದ ಶೇ.54ರಷ್ಟು ಭೂಮಿ ಇದೆ. ಇದಕ್ಕೆ ಪ್ರಸ್ತುತವಾಗಿರುವುದು ಡಾ|ಶಿವರಾಮ ಕಾರಂತರು ಬರೆದ ಚೋಮನ ದುಡಿ ಕೃತಿ. ಇದರಲ್ಲಿ ಇಲ್ಲಿನ ನೆಲದ ಸಮಸ್ಯೆ ತಿಳಿಸಿದರು. ಅವರ ಇನ್ನೊಂದು ಕ್ಷೇತ್ರ ಪರಿಸರ. ಇಂದು ಪರಿಸರ ಎಲ್ಲಡೆ ನಾಶವಾಗುತ್ತಿದೆ. ನದಿಗಳನ್ನು ತಿರುಗಿಸಲಾಗುತ್ತಿದೆ. ಕೆರೆ ಅತಿಕ್ರಮಣವಾಗುತ್ತಿದೆ. ಇದಕ್ಕೆ ಪ್ರಸ್ತುತವಾಗಿರುವುದು ಅವರ ಇನ್ನೊಂದು ಕೃತಿ ಬೆಟ್ಟದ ಜೀವ. ಜೈವಿಕವಾದ ಕಾಡು ಎಷ್ಟು ಮುಖ್ಯ ಎಂಬುದನ್ನು ಬೆಟ್ಟದ ಜೀವದಲ್ಲಿ ತಿಳಿಸಿದ್ದಾರೆ. 21ನೇ ಶತಮಾನದಲ್ಲಿ ಸಲ್ಲುವ ತಂತ್ರವನ್ನು ತನ್ನ ಕಾದಂಬರಿಗಳಲ್ಲಿ ಅಳವಡಿಸಿದ್ದಾರೆ. ಯಕ್ಷಗಾನವನ್ನು ಆಗಿನ ಕಾಲದಲ್ಲಿ ರೆಕಾರ್ಡ್ ಮಾಡುವ ಕೆಲಸ ಮಾಡಿದ್ದಾರೆ. ದೇಶ ವಿದೇಶದಲ್ಲಿಯೂ ಯಕ್ಷಗಾನ ಪಸರಿಸಿದ್ದಾರೆ. ಆದುದರಿಂದ ಮುಂದಿನ ನೂರು ವರ್ಷಗಳಲ್ಲಿಯೂ ಕಾರಂತರು ಪ್ರಸ್ತುತವಾಗಿ ಹೋಗುತ್ತಾರೆ. ಕಾರಂತರು ಮತ್ತು ಕುವೆಂಪುರವರು ಕನ್ನಡದ ಕಣ್ಣುಗಳು ಎಂದರು.

ಕಾರಂತರ ಕೃತಿಗಳನ್ನು ಮುಂದಿನ ಪೀಳಿಗೆಗೆ ಅಂಟಿಸಬೇಕು:
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಶಿವರಾಮ್ ಕಾರಂತರಿಂದ ಪುತ್ತೂರುಗೆ ಹೆಮ್ಮೆ ಬಂದಿದೆ. ಪುತ್ತೂರಿನಲ್ಲಿ 40 ವರ್ಷ ಕಾಲ ಜೀವನ ಮಾಡಿದುದರಿಂದ ಈ ಪ್ರಶಸ್ತಿ ನೀಡುವ ಅವಕಾಶ ಸಿಕ್ಕಿದೆ. ಅವರು ಪುತ್ತೂರಿಗೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಪ್ರಶಸ್ತಿ ಪ್ರದಾನದಲ್ಲಿ ಭಾವನೆಗಳು ಅಡಗಿದೆ. ಈ ಸಂದರ್ಭವನ್ನು ಮುಂದಿನ ಪೀಳಿಗೆಗೆ ತೋರಿಸಬೇಕು. ಈ ಕಾರ್ಯಕ್ರಮಕ್ಕೆ ಶಿಕ್ಷಕರು, ಮಕ್ಕಳು ಬರುವ ಹಾಗೆ ಆಗಬೇಕು. ಇನ್ನಷ್ಟು ಸಾಹಿತಿಗಳು ಸೃಷ್ಟಿಯಾಗಬೇಕು. ಅವರ ಕೃತಿಗಳು ಮಕ್ಕಳಿಗೆ ತಿಳಿಕೊಡಬೇಕು, ಹೊಸ ತಲೆಮಾರಿಗೆ ಅಂಟಿಸಬೇಕು. ಯುವ ಪೀಳಿಗೆಗೆ ಕೊಡಬೇಕು ಎಂದರು. ಪ್ರಶಸ್ತಿ ಸ್ವೀಕರಿಸಿದ ಎಸ್‌ಕೆ ಆನಂದ್ ಒಳ್ಳೆಯ ವ್ಯಕ್ತಿ. ಎಷ್ಟೋ ಜನರಿಗೆ ಉದ್ಯೋಗ ನೀಡಿದ್ದಾರೆ. ಅವರ ಉದ್ಯಮಗಳು ದೂರದ ಕಲ್ಕತ್ತಾದವರೆಗೂ ಹೋಗಿದೆ. ಹಾಗಾಗಿ ಅವರು ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದರು. ಬಾಲವನ ಅಭಿವೃದ್ಧಿ ಆಗಬೇಕು. ಇಲ್ಲಿ ವಾಕಿಂಗ್ ಟ್ರ್ಯಾಕ್, ಸಾಹಿತಿಗಳಿಗೆ ಬರೆಯಲು ಪ್ರಶಾಂತವಾದ ಧ್ಯಾನ ಮಂದಿರ ನಿರ್ಮಾಣದ ಯೋಚನೆ ಇದೆ. ಅವರ ಹೆಸರಿನ ವೃತ್ತ, ದ್ವಾರ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತೇವೆ ಎಂದ ಅವರು ಪುತ್ತೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕ ಸ್ಥಾಪನೆಗೆ ಚರ್ಚೆ ಆಗುತ್ತಿದೆ. ಮೆಡಿಕಲ್ ಕಾಲೇಜು ಆಗುತ್ತದೆ. ಯಾವುದೇ ಸಂಶಯ ಬೇಡ. ಎಂದು ಹೇಳಿ ಪುತ್ತೂರು ಅಭಿವೃದ್ಧಿ ನನ್ನ ಕನಸು. ನಿಮ್ಮ ಮಾರ್ಗದರ್ಶನ ಇರಲಿ ಎಂದರು.

ಕಾರಂತರ ಚಿಂತನೆಗಳನ್ನು ಅನುಷ್ಠಾನಗೊಳಿಸಿದವರು:
ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕ ನಾರಾಯಣ ಭಟ್ ರಾಮಕುಂಜರವರು ಬಾಲವನ ಪ್ರಶಸ್ತಿ ಸ್ವೀಕರಿಸಲಿರುವ ಎಸ್.ಕೆ.ಆನಂದ್‌ರವರ ಅಭಿನಂದನಾ ಮಾತನಾಡಿ ನಮ್ಮ ಮಣ್ಣಲ್ಲಿ ಬೆಳೆದ ಪ್ರತಿಭೆ. ಒಂದು ಮರ ಉರುಳಿಸಲು ಒಂದು ನಿಮಿಷ ಸಾಕು. ಅದೇ ಮರ ಬೆಳೆಸಲು ಹಲವು ವರ್ಷ ಬೇಕು. ಇದಕ್ಕೆ ಪರ್ಯಾಯವಾಗಿ ಎಸ್.ಕೆ. ಆನಂದ್‌ರವರು 20 ವರ್ಷಗಳ ಹಿಂದೆಯೇ ಕಾಂಕ್‌ವುಡ್ ಚಿಂತನೆ ಹುಟ್ಟು ಹಾಕಿದರು. ಎಂಟೆಕ್ ಪದವಿ ಮುಗಿಸಿ ಬಳಿಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಬಳಿಕ ತನ್ನ ತಂದೆಯವರು ಹುಟ್ಟು ಹಾಕಿದ ಮಾಸ್ಟರ್ ಪ್ಲಾನರಿ ಸಂಸ್ಥೆ ಕಟ್ಟಿ ಬೆಳೆಸಿ ಹಲವಾರು ಮಂದಿಗೆ ಉದ್ಯೋಗ ಕೊಟ್ಟರು. ಇವರ ಮಕ್ಕಳು ಕೂಡ ಸಿವಿಲ್ ಇಂಜಿನಿಯರ್ ಮುಗಿಸಿ ಅಪ್ಪನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಾರಂತರ ಚಿಂತನೆಗಳನ್ನು ಅನುಷ್ಠಾನಗೊಳಿಸಿದವರು. ಕಾರಂತರ ಗೌರವ ಉಳಿಸಿದರು ಎಂದ ಅವರು ಅವರಿಗೆ ದೇಶದ ಉನ್ನತ ಪ್ರಶಸ್ತಿ ಸಿಗುವಂತಾಗಲು ಶಾಸಕರು ಪ್ರಯತ್ನಿಸಬೇಕು ಎಂದರು.

ಡಾ|ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಮಾತನಾಡಿ ಶಿವರಾಮ ಕಾರಂತರು ನಮಗೆ ನಿಸರ್ಗವೇ ಪಾಠಶಾಲೆಯಾಗಿತ್ತು. ನಮ್ಮನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು. ಇದು ನಮಗೆ ಉತ್ತಮ ಅನುಭವ ನೀಡಿತು. ಕೈ ಕೆಸರಾದರೂ ಸಾಧನೆ ಮಾಡಿದ್ದಾರೆ. ಅವರು ಕೈ ಹಾಕದ ಕ್ಷೇತ್ರವೇ ಇಲ್ಲ. ಯಕ್ಷಗಾನವನ್ನು ಬೇರೆ ಬೇರೆ ದೇಶದಲ್ಲಿ ಕುಣಿತದ ಮೂಲಕ ಪ್ರಸ್ತುತ ಪಡಿಸಿದರು ಎಂದರು.


ಪುತ್ತೂರು ಕಸಾಪ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ಡಾ|ಶಿವರಾಮ ಕಾರಂತರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪುತ್ತೂರಿನ ಹೆಬ್ಬಾಗಿಲಿನಲ್ಲಿ ಕಾರಂತರ ಮೂರ್ತಿ ಸ್ಥಾಪಿಸಿ ಅದರ ವೃತ್ತಕ್ಕೆ ಡಾ| ಶಿವರಾಮ ಕಾರಂತ ವೃತ್ತ ಎಂದು ನಾಮಕರಣ ಮಾಡುವಂತೆ ತಿಳಿಸಿದರು.

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರಂತರ ಕರ್ಮಭೂಮಿ ನಮಗೆ ಹೆಮ್ಮೆಯ ತಾಣ ಇಲ್ಲಿ ಸುಮಾರು ಪುಸ್ತಕ ರಚಿಸಿದ್ದಾರೆ. ಕಾರಂತರು ಕೆಲಸ ಮಾಡಿದ ೧೦ ಕ್ಷೇತ್ರದಲ್ಲಿ ಪ್ರತಿ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿನೀಡಲಾಗುತ್ತದೆ ಎಂದರು.

ಶಿವರಾಮ ಕಾರಂತರ ಭಾವಚಿತ್ರಕ್ಕೆ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಮೂಕಜ್ಜಿಯ ಕನಸುಗಳು ಕೃತಿಗೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ಶಿಕ್ಷಕ ಪ್ರಶಾಂತ್ ಅನಂತಾಡಿಯವರು ಕಾರಂತರ ಸ್ಮರಣೆ ಮಾಡಿದ ಡಾ|ಪುರುಷೋತ್ತಮ ಬಿಳಿಮಲೆಯವರ ಪರಿಚಯ ಮಾಡಿದರು. ಶಿಕ್ಷಕಿ ಶ್ರೀಲತಾ ಎಸ್.ಕೆ.ಆನಂದ್‌ರವರ ಸನ್ಮಾನ ಪತ್ರ ವಾಚಿಸಿದರು. ಎಸ್.ಕೆ.ಆನಂದ್‌ರವರು ಬರೆದ ಕವನವನ್ನು ಹಿರಿಯ ಗಾಯಕ ಪಾಂಡುರಂಗನಾಯಕ್ ಹಾಡಿದರು. ನೋಟರಿ ವಕೀಲ ಎಂ.ಪಿ.ಅಬೂಬಕ್ಕರ್ ಕಾರಂತರ ಕವನ ವಾಚಿಸಿದರು. ಬೆಳಿಗ್ಗೆ ವೀರಮಂಗಲ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಂದ ಸ್ವಾಗತವಾದನ, ಮುಕ್ರಂಪಾಡಿ ಆರಾಧನಾ ಮಹಿಳಾ ನೃತ್ಯ ತಂಡದಿಂದ ನೃತ್ಯ ಲಹರಿ, ನಾಟ್ಯರಂಗ ಪುತ್ತೂರು ಕಲಾವಿದೆಯರಿಂದ ನಾಟ್ಯ ಲಹರಿ ನಡೆಯಿತು.


ವಿದುಷಿ ಪವಿತ್ರ ರೂಪೇಶ್, ವಿದುಷಿ ಸುಧಾ ಕೆ., ಸ್ಮಿತಾಶ್ರೀ ಬಿ. ಪ್ರಾರ್ಥಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅರಿಯಡ್ಕ ವಂದಿಸಿದರು. ಉಪ್ಪಿನಂಗಡಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಹರಿಪ್ರಸಾದ್ ಎನ್. ಕಾರ್ಯಕ್ರಮ ನಿರೂಪಿಸಿದರು.

ಎಸ್.ಕೆ.ಆನಂದ್‌ರವರಿಗೆ ರಾಜ್ಯಮಟ್ಟದ ಬಾಲವನ ಪ್ರಶಸ್ತಿ ಪ್ರದಾನ
ಹಿರಿಯ ವೃಕ್ಷ ಸಂರಕ್ಷಕರು ಮತ್ತು ಮಾಸ್ಟರ್ ಪ್ಲಾನರಿ ಮಾಲಕರಾದ ಎಸ್.ಕೆ.ಆನಂದ್‌ರವರಿಗೆ ಪರಿಸರ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಬಾರಿಯ ಡಾ|ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಎಸ್.ಕೆ ಆನಂದರವರು ಮಾತನಾಡಿ ನಾನು ಹೈಸ್ಕೂಲ್ ಓದುತ್ತಿರುವಾಗ ಕಾರಂತರ ಮನೆಗೆ ಹೋಗಿದ್ದೆ. ನುಡಿದಂತೆ ನಡೆವ ಅದ್ಬುತ ವ್ಯಕ್ತಿ. ಬಾಲವನಕ್ಕೆ ಮರುಜೀವ ಕೊಟ್ಟವರು ಎ.ಸಿ ಹರ್ಷ ಗುಪ್ತರವರು. ಇವರು ಇಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿದರು. ನಾನು ಎಂಟೆಕ್ ಪದವಿ ಮುಗಿಸಿ ಕಾಂಕ್‌ವುಡ್ ಹೊಸ ಆವಿಷ್ಕಾರ ಆರಂಭ ಮಾಡಿದೆ. ತೊಟ್ಟಿಲಿನಿಂದ ಮಸಣದವರೆಗೂ ನಮಗೆ ಕೆಲಸ ಮಾಡಲು ತುಂಬಾ ಇದೆ. ಬಿಡುವಿರದ ಕೆಲಸ ನಮ್ಮದಾಗಬೇಕು. ನನಗೆ ನನ್ನ ಕೆಲಸದಲ್ಲಿ ತೃಪ್ತಿ ಇದೆ ಎಂದರು.


LEAVE A REPLY

Please enter your comment!
Please enter your name here