







ಪುತ್ತೂರು: ಪುರಾತನ ಕಾರಣಿಕ ಕ್ಷೇತರ ಇಲ್ಲಿನ ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ 9 ದಿನಗಳ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿರುವ ನವರಾತ್ರಿ ಉತ್ಸವಗಳು ಅ.11ರಂದ ಆರಂಭಗೊಂಡಿತು.


ಬೆಳಿಗ್ಗೆ ಗಣಹೋಮ, ನಾಗ ತಂಬಿಲ, ಪಾಷಾಣಮೂರ್ತಿ ಹಾಗೂ ಗುಳಿಗ ದೈವಗಳಿಗೆ ತಂಬಿಲ ಸೇವೆಯೊಂದಿಗೆ ನವರಾತ್ರಿಯ ಉತ್ಸವಗಳಿಗೆ ಚಾಲನೆ ದೊರೆಯಿತು. ನಂತರ ಸುಳ್ಯಪದವು ಮಹಾಲಕ್ಷ್ಮೀ ಮಹಿಳಾ ಭಜನಾ ತಂಡವರಿಂದ ಭಜನೆ, ಭಕ್ತಾದಿಗಳಿಂದ ತುಲಾಭಾರ ಸೇವೆ, ಜಾಝ್ ಮ್ಯೂಸಿಕ್ ಬೆಳ್ಳಾರೆ ಇವರಿಂದ ಭಕ್ತಿ ಸಂಗೀತ ಸಂಭ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಅಪರಾಹ್ನ ಶ್ರೀದೇವಿ ಯಕ್ಷ ಕಲಾ ವೃಂದ ಬಾಲವನ ಇವರಿಂದ ಮಹಿಷಾ ವಧೆ ಯಕ್ಷಗಾನ ನಡೆಯಿತು. ಸಂಜೆ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಉಪಸ್ಥಿತರಿದ್ದರು. ನೂರಾರು ಮಂದಿ ಭಕ್ತಾದಿಗಳು ಪ್ರಾರಂಭ ದಿನದ ಉತ್ಸವದಲ್ಲಿ ಭಾಗವಹಿಸಿದ್ದರು.




ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಜೊತೆಗೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ. ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಅ.17ರಂದು ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, ಅ.18ರಂದು ಗಣಹೋಮ, ಸುಬ್ರಹ್ಮಣ್ಯ ಕಾರಂತ ಉಡುಪಿ ಇವರಿಂದ ದೇವಿ ಪಾರಾಯಣದೊಂದಿಗೆ ಚಂಡಿಕಾ ಯಾಗ, ಅ.19ರಂದು ಆಯುಧ ಪೂಜೆ, ವಾಹನ ಪೂಜೆ, ಅ.20ರಂದು ತುಲಾಭಾರ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.










