ದೇವಸ್ಥಾನದ ಬಳಿಯ ನೂತನ ರಸ್ತೆ ನಿರ್ಮಾಣ ವಿಚಾರ : ಟೆಂಡರ್ ಪ್ರಕ್ರಿಯೆ ನಿಲ್ಲಿಸುವಂತೆ ದೇವಸ್ಥಾನದ ಸಂರಕ್ಷಣಾ ವೇದಿಕೆಯಿಂದ ಮನವಿ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಪೂರಕವಾಗಿ ನಿರ್ವಾತ ತಂತ್ರಜ್ಞಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಿಲ್ಲಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆಯಿಂದ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.


ಪುತ್ತೂರು ನಗರಸಭಾ ವ್ಯಾಪ್ತಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 30 ಅಡಿ ಅಗಲದ ಸುಮಾರು 1000 ಮೀಟರ್ ಉದ್ದದ ಸಾರ್ವಜನಿಕ ರಸ್ತೆ ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ದಾಖಲಿಸಿರುತ್ತೇವೆ. ಸದ್ರಿ ದಾವೆಯು W.P.No.27256/2026 ದಿನಾಂಕ:10/09/2026ರ ಆದೇಶದಲ್ಲಿ ಅರ್ಜಿದಾರರ ಮನವಿ ಆಕ್ಷೇಪಗಳನ್ನು ಆಲಿಸಿ ನಿಯಮಾನುಸಾರ ವಿಚಾರಣೆ ನಡೆಸಿ ಮುಂದಿನ ಆದೇಶ ಹೊರಡಿಸಬೇಕು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಸದ್ರಿ ಉದ್ದೇಶಿತ ಸಾರ್ವಜನಿಕ ರಸ್ತೆ ನಿರ್ಮಾಣದ ಬಗ್ಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರು ಇದುವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮಿತಿ ಅಥವಾ ಕಾರ್ಯನಿರ್ವಹಣಾಧಿಕಾರಿಗೆ ಯಾವುದೇ ಅನುಮತಿಯನ್ನು ನೀಡಿಲ್ಲ. ಈ ನಡುವೆ ಸದ್ರಿ ದೇವಸ್ಥಾನದ ಬಳಿ ಹಿಂದಿನ ಗಣೇಶ್ ಪ್ರಸಾದ್ ಹೋಟೇಲ್‌ನಿಂದ ಮಡಿವಾಳಕಟ್ಟೆವರೆಗಿನ ಹೊಸ ಕಾಂಕ್ರೀಟ್ ರಸ್ತೆಗೆ ಪೂರಕವಾಗಿ ನಿರ್ವಾತ ತಂತ್ರಜ್ಞಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಮೇಲಿನ ಉಲ್ಲೇಖದಲ್ಲಿ ತಿಳಿಸಿದಂತೆ ತಾವು ಟೆಂಡರ್ ಪ್ರಕಟಣೆ ಹೊರಡಿಸಿರುವುದು ನಮ್ಮ ಗಮನಕ್ಕೆ ತಿಳಿದು ಬಂದಿರುತ್ತದೆ.
ಸದ್ರಿ ದೇವಾಲಯದ ಜಮೀನುಗಳು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ/ ದೇವಸ್ಥಾನದ ಒಡೆತನದಲ್ಲಿ ಇರುವಾಗ ಸದ್ರಿ ದೇವಸ್ಥಾನದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಮಾಡಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರ ಅನುಮತಿ ಕಡ್ಡಾಯವಾಗಿದೆ. ಇದುವರೆಗೆ ಇಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರು ಅನುಮತಿ ನೀಡಿಲ್ಲ. ಈ ಬಗ್ಗೆ ಭಕ್ತಾದಿಗಳ ಆಕ್ಷೇಪ ಮತ್ತು ಕೋರ್ಟ್ ನಿರ್ದೇಶನ ಇರುವಾಗ ನ್ಯಾಯಾಂಗ ಮತ್ತು ಕಾರ್ಯಾಂಗದ ಆದೇಶವಲ್ಲದೇ ಶಾಸಕಾಂಗದ ಒತ್ತಡ ಮತ್ತು ಒತ್ತಾಯಕ್ಕೆ ಮಣಿದು ತಾವು ಕೋರ್ಟ್ ಆದೇಶವನ್ನು ಉಲ್ಲಂಸಿ ಮುಂದುವರಿದಲ್ಲಿ ನಾವು ಇದನ್ನು ನ್ಯಾಯಾಲಯದ ಗಮನಕ್ಕೂ ತರಲಿದ್ದೇವೆ.
ಆದ್ದರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉದ್ದೇಶಿತ ನೂತನ ಸಾರ್ವಜನಿಕ ರಸ್ತೆ ನಿರ್ಮಾಣ ಕಾಮಗಾರಿ ವಿರುದ್ಧ ಸಾರ್ವಜನಿಕ ದೂರು/ಆಕ್ಷೇಪದ ವಿಚಾರಣೆಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರ ಸಮಕ್ಷಮ ಇತ್ಯರ್ಥ ಆಗುವವರೆಗೆ ಮೇಲಿನ ಉಲ್ಲೇಖದ ತಮ್ಮ ಕಾರ್ಯಾಲಯದ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಭಕ್ತಾಧಿಗಳಾದ ತಾವು ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here