







ಪುತ್ತೂರು : ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲೇ ಹೆಸರು ಮಾಡಿರುವ ಕುಂಬ್ರ ವರ್ತಕರ ಸಂಘದ ೨೨ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಅ.10 ರಂದು ಆಚರಿಸಲಾಯಿತು. ಸಂಘ ಸ್ಥಾಪನೆಯಾದ ಸಮಯ ಬೆಳಿಗ್ಗೆ 10 ಗಂಟೆ 10 ನಿಮಿಷ 10ಸೆಕೆಂಡಿಗೆ ಕುಂಬ್ರ ಪೇಟೆಯಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಹಾಗೂ ಬಡ ಮತ್ತು ಅನಾರೋಗ್ಯ ಪೀಡಿತ ಕುಟುಂಬಕ್ಕೆ ರೇಷನ್ ಕಿಟ್ ವಿತರಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಕೆ. ಮಹಮದ್ ಕೂಡುರಸ್ತೆಯವರು,”ಸಂಘವು ಕಳೆದ 22ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ವರ್ತಕರ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ನೆರವಾಗುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಪ್ರಯತ್ನ ಮಾಡಲಾಗುವುದು,” ಎಂದು ಪ್ರಕಟಿಸಿದರು.



ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ ರೈ ಕೊಪ್ಪಳ ಮಾತನಾಡಿ, “ಸಂಘವು ಆರಂಭದ ದಿನಗಳಿಂದಲೂ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ಹಿಂದಿನ ಪದಾಧಿಕಾರಿಗಳ ಪರಿಶ್ರಮ ಹಾಗೂ ಸದಸ್ಯರ ಸಹಕಾರವೇ ಈ ಯಶಸ್ಸಿಗೆ ಕಾರಣ. ಮುಂದಿನ ದಿನಗಳಲ್ಲಿ ಹಳೆಯ ಸದಸ್ಯರ ಜೊತೆಗೆ ಯುವಕರು ಮತ್ತು ಹೊಸ ಮುಖಗಳು ಜವಾಬ್ದಾರಿ ವಹಿಸಿಕೊಂಡು, ಒಗ್ಗಟ್ಟು ಮತ್ತು ಸಮಾಜಸೇವೆಯನ್ನು ಮೂಲ ಉದ್ದೇಶವಾಗಿಸಿ ಸಂಘವನ್ನು ಮುನ್ನಡೆಸಬೇಕು,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ಗೌರವ ಸಲಹೆಗಾರ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಮಾತನಾಡಿ, “ಸಂಘವು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ 22ವರ್ಷ ಪೂರೈಸಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರೂ ಸಮಯ ಬಿಡುವು ಮಾಡಿಕೊಂಡು ಸಂಘದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಗೌರವ ಸಲಹೆಗಾರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, “ವರ್ತಕರ ಆರ್ಥಿಕ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರವನ್ನು ಬಲಪಡಿಸಲು ಸಹಕಾರಿ ಸಂಘ ಸ್ಥಾಪನೆಯ ಚಿಂತನೆ ನಡೆಸಿರುವುದು ಶ್ಲಾಘನೀಯ. ಸಾಮಾಜಿಕ ಸೇವೆಯಿಂದ ಆರ್ಥಿಕ ಸ್ವಾವಲಂಬನೆಯತ್ತ ಸಂಘದ ಹೆಜ್ಜೆ ಸಾಗಲಿ,” ಎಂದು ಆಶಯ ವ್ಯಕ್ತಪಡಿಸಿದರು.
ಸಂಘದ ಸ್ಥಾಪಕ ಕಾರ್ಯದರ್ಶಿ ಸಂಶುದ್ದೀನ್ ಎ.ಆರ್.ರವರು ಮಾತನಾಡಿ, ಕಳೆದ 22 ವರ್ಷಗಳಲ್ಲಿ ಸಂಘವು ಮಾಡಿದ ಸೇವಾ ಕಾರ್ಯಗಳ ಪಟ್ಟಿಯನ್ನು ನಾವು ಎಐ ಮುಂದೆ ಇಟ್ಟಾಗ ಅದು ನೀಡಿದ ಉತ್ತರ ನಮ್ಮನ್ನು ಆಶ್ವರ್ಯಚಕಿತಗೊಳಿಸಿತ್ತು ನೀವು ಕಾರ್ಯಕ್ರಮಗಳನ್ನು ನಡೆಸುವ ಹಂತವನ್ನು ದಾಟಿದ್ದೀರಿ, ಇನ್ನೇನಿದ್ದರೂ ನೀವು ಇತಿಹಾಸ ನಿರ್ಮಿಸುವ ಹಂತದಲ್ಲಿದ್ದೀರಿ’ ಎಂದು ಎ.ಐ ಹೇಳಿದ ಈ ಮಾತು ನಮಗೆ ಬಹಳಷ್ಟು ಪ್ರೇರಣೆಯನ್ನು ನೀಡಿತು ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಮೇಲ್ವಿನ್ ಮೊಂತೆರೋ ವಂದಿಸಿದರು. ಸಂಘದ ಉಪಾಧ್ಯಕ್ಷ ಸದಾಶಿವ ಕುಂಬ್ರ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ರೇಷ್ಮಾ ಮೇಲ್ವಿನ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.ಪ್ರಮುಖರಾದ ಕೆ. ಲಕ್ಷ್ಮಣ ಕಾಯಕಲ್ಪ, ಪದ್ಮನಾಭ ಆಚಾರ್ಯ, ಹನೀಫ್ ತರಕಾರಿ, ಹನೀಫ್ ಶೇಖಮಲೆ, ಸಂತು ಟೈಲರ್, ಬಷೀರ್ ಕೌಡಿಚ್ಚಾರ್ ಸೇರಿದಂತೆ ಹಲವು ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಬಡ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ ಸ್ಥಾಪನಾ ದಿನಾಚರಣೆಯ ನೆನಪಲ್ಲಿ ಅನಾರೋಗ್ಯದಿಂದಿರುವ ಕುರಿಯ ಮಾವಿನಕಟ್ಟೆ ಮನೆಯ ಭಾರತಿ ವಿ.ಶೆಟ್ಟಿಯವರ ಮನೆಗೆ ಭೇಟಿ ನೀಡಿದ ವರ್ತಕರ ನಿಯೋಗವು ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಿತು. ಈ ಸಂದರ್ಭದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳು ಅಲ್ಲದೆ ಸ್ಥಳೀಯರಾದ ಗ್ರಾಪಂ ಮಾಜಿ ಸದಸ್ಯ ಯಾಕೂಬ್ ಕುರಿಯ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಸಹಕಾರಿ ಬ್ಯಾಂಕ್ ಸ್ಥಾಪನೆಯ ಚಿಂತನೆ ವರ್ತಕರ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿವರ್ತಕರ ಸಹಕಾರಿ ಸಂಘ’ದ ಸ್ಥಾಪನೆಯ ಚಿಂತನೆ ಇದೆ.ಈಗಾಗಲೇ ಬೇರೆ ಬೇರೆ ಸಹಕಾರಿ ಸಂಘಗಳು ಇವೆ ಆದರೆ ವರ್ತಕರ ಹೆಸರಿನಲ್ಲಿಯೂ ಒಂದು ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿದರೆ ಇದರಿಂದ ವರ್ತಕರಿಗೆ ಬಹಳಷ್ಟು ಪ್ರಯೋಜನವಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕುಂಬ್ರ ವರ್ತಕರ ಸಂಘದಿಂದ ಈ ಒಂದು ಸಹಕಾರಿ ಸಂಘ ಸ್ಥಾಪನೆಯ ಚಿಂತನೆ ಇದೆ. ಇದಕ್ಕೆ ವರ್ತಕರ, ಗ್ರಾಹಕರ ಸಹಕಾರ ಅತೀ ಅಗತ್ಯ. ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ










