ಕುರಿಯ: ಜಮೀನು ವಿವಾದದಲ್ಲಿ ಮಹಿಳೆಗೆ ಹಲ್ಲೆ ಪ್ರಕರಣ : ಸಹೋದರ ಸೇರಿ ಮೂವರಿಗೆ ಶಿಕ್ಷೆ

0

ಪುತ್ತೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಮಾನಭಂಗವನ್ನುಂಟು ಮಾಡಿದ ಪ್ರಕರಣದಲ್ಲಿ ಸಹೋದರ ಸೇರಿದಂತೆ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಅರುಣ್ ಕುಮಾರ್, ವಿನಯ ಕುಮಾರ್ ಜಿ, ಸುಂದರ ಪಿ ಎಂ ಶಿಕ್ಷೆಗೊಳಗಾದವರು.

ಪ್ರಕರಣದ ವಿವರ:
ಕುರಿಯ ಗ್ರಾಮದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲಂ 447, 504, 506, 323, 354 r/w 34 IPC ಅಡಿ ಪ್ರಕರಣ ದಾಖಲಾಗಿತ್ತು.

ಮಹಿಳೆಯ ತಂದೆ 2019ರಲ್ಲಿ ತಮ್ಮ ಆಸ್ತಿಯನ್ನು ಮೂವರು ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಮಹಿಳೆ ತಮಗೆ ಸಿಕ್ಕಿದ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದರು. ದಿ. 27.12.2022 ರಂದು ಮಧ್ಯಾಹ್ನ 3 ಗಂಟೆಗೆ ತಮ್ಮ ತೋಟದಲ್ಲಿ ಯಾರೋ ಕೆಲಸ ಮಾಡುತ್ತಿರುವುದನ್ನು ನೋಡಿ ತೋಟಕ್ಕೆ ಹೋದಾಗ, ತಮ್ಮ ಅರುಣ್ ಕುಮಾರ್ ರೈ ಮತ್ತು ಅವರ ಕೆಲಸಗಾರರಾದ ವಿನಯ ಹಾಗೂ ಸುಂದರ ಅವರು ತಮ್ಮ ಜಾಗದಲ್ಲಿ ಕಲ್ಲು ಕಂಬ ಹಾಕಿ ತಂತಿ ಬೇಲಿ ಹಾಕುತ್ತಿದ್ದರು. ಅದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ, ಕಾಲಿನಿಂದ ಹೊಟ್ಟೆಗೆ ತುಳಿದು ನೆಲಕ್ಕೆ ದೂಡಿ, ಕುತ್ತಿಗೆ, ಮುಖ, ಬೆನ್ನಿಗೆ ತುಳಿದು, ನೈಟಿ ಎಳೆದು ಹರಿದು ಮಾನಭಂಗ ಮಾಡಿ, ಮುಖಕ್ಕೆ ಗುದ್ದಿದ್ದಾರೆ ಎಂದು ಆರೋಪಿಸಲಾಗಿತ್ತು. ಮಹಿಳೆಯ ಗಂಡ ಬರುತ್ತಿರುವುದನ್ನು ನೋಡಿ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಗಾಯಗೊಂಡ ಆಶಾ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ASCJ & JMFC ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ್ ವೈ ಹೆಚ್ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

1ನೇ ಆರೋಪಿ ಅರುಣ್ ಕುಮಾರ್ ಗೆ ಕಲಂ 323 IPC ಅಡಿಯ ಅಪರಾಧಕ್ಕಾಗಿ 6 ತಿಂಗಳು ಸಾದಾ ಕಾರಾಗೃಹವಾಸ,ಕಲಂ 354 IPC ಅಡಿಯ ಅಒರಾಧಕ್ಕಾಗಿ 2 ವರ್ಷ ಸಾದಾ ಕಾರಾಗೃಹವಾಸ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ತಿಂಗಳು ಕಾರಾಗೃಹವಾಸ ಅನುಭವಿಸುವಂತೆ ಆದೇಶವಾಗಿದೆ. ಮೂವರು ಆರೋಪಿಗಳಿಗೂ ಕಲಂ 506 IPC ಅಡಿಯ ಅಪರಾಧಕ್ಕಾಗಿ 1 ವರ್ಷ ಸಾದಾ ಕಾರಾಗೃಹವಾಸ ಮತ್ತು ತಲಾ 5,000 ರೂ.ದಂಡ ವಿಧಿಸಲಾಗಿದೆ.ದಂಡಪಾವತಿಗೆ ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳು ಕಾರಾಗೃಹವಾಸ ಅನುಭವಿಸುವಂತೆ ಆದೇಶಿಸಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಸುಬ್ರಮಣ್ಯ ಹೆಚ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.

LEAVE A REPLY

Please enter your comment!
Please enter your name here