







ಭಕ್ತರಿಂದ ಪ್ರಾರ್ಥನೆ – ಪವಾಡ ಎಂಬಂತೆ ಒಂದೇ ದಿನದಲ್ಲಿ ಕಳವಾದ ಸೊತ್ತು ಪತ್ತೆ


ಪುತ್ತೂರು: ಭಜನಾ ಮಂದಿರವೊಂದರ ಹೊರಭಾಗದಲ್ಲಿಡಲಾಗಿದ್ದ ಧ್ವನಿವರ್ದಕದ ಪರಿಕರ ಹಾಗೂ ಪೆನ್ ಡ್ರೈವ್ ಕಳವಾಗಿ ಬಳಿಕದ ಬೆಳವಣಿಗೆಯಲ್ಲಿ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮರುದಿನವೇ ಪವಾಡವೆಂಬಂತೆ ಕಳವಾದ ವಸ್ತುಗಳೆಲ್ಲವು ಮರಳಿ ಭಜನಾ ಮಂದಿರ ತಲುಪಿದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ನಡೆದಿದೆ.



ಆರ್ಯಾಪು ಗ್ರಾಮದ ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ನವರಾತ್ರಿ ಆರಂಭವಾದ ಬಳಿಕ ಪ್ರತೀ ದಿನ ರಾತ್ರಿ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿತ್ತು. ಅಲ್ಲಿನ ಧ್ವನಿವರ್ಧಕದ ಬಳಕೆಗಾಗಿ ಉಪಯೋಗಿಸುವ ಕೆಲವೊಂದು ಸೊತ್ತುಗಳ ಸಹಿತ ಪೆನ್ ಡ್ರೈವ್ ಅನ್ನು ಹೊರಭಾಗದಲ್ಲಿ ಜೋಡಿಸಿಡಲಾಗಿತ್ತು. ರಾತ್ರಿ ವೇಳೆ ಅದನ್ನು ಅಲ್ಲೇ ಬಿಟ್ಟು ತೆರಳುತ್ತಿದ್ದರು.
ಅ.13ರಂದು ಸಾಯಂಕಾಲ ಧ್ವನಿವರ್ಧಕ ಇಡಲು ಬಂದಾಗ ಅಲ್ಲಿದ್ದ ಸೊತ್ತುಗಳು ಕಳವಾಗಿರುವುದು ಭಕ್ತಾಧಿಗಳ ಗಮನಕ್ಕೆ ಬಂದಿತ್ತು. ಭಜನಾ ಮಂದಿರದ ಪಕ್ಕದಲ್ಲೇ ಮನೆಯೊಂದು ಇದ್ದರೂ ಈ ಸೊತ್ತುಗಳನ್ನು ಯಾರು, ಯಾವಾಗ ಕಳವುಗೈದಿದ್ದಾರೆ ಎಂದು ಅರಿಯದ ಭಕ್ತರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕಳವಾದ ಸೊತ್ತು ಮರಳಿ ಸಿಗುವಂತೆ ದೇವರ ಮೊರೆಹೋಗಿದ್ದರು. ದೇವರ ಪವಾಡವೆಂಬಂತೆ ಅ.15ರಂದು ಸಾಯಂಕಾಲದ ವೇಳೆ ಭಕ್ತಾಧಿಗಳು ಮಂದಿರಕ್ಕೆ ತೆರಳಿದಾಗ ಕಳವುಗೈದ ಸೊತ್ತುಗಳೆಲ್ಲವೂ ಮೊದಲಿದ್ದ ಜಾಗದಲ್ಲೇ ಕಂಡುಬಂದಿತ್ತು. ಈ ಒಂದು ಘಟನೆ ಭಕ್ತರಲ್ಲಿ ಭಯಭಕ್ತಿ ಹುಟ್ಟಿಸಿದ್ದಲ್ಲದೆ ಭಜನಾ ಮಂದಿರದ ಕಾರಣೀಕತೆಯ ನಂಬಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ ಎನ್ನುತ್ತಾರೆ ಮಂದಿರದ ಸಮಿತಿ ಪದಾಧಿಕಾರಿಗಳು.










