







ಪುತ್ತೂರು: ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಚಿನ್ ವಳತ್ತಡ್ಕ ಅವರು ಅರುಣ ಸಾರಥಿ' ತಂಡದಲ್ಲೂ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿ.ಎಂ.ಎಸ್. ಸಂಘಟನೆ ನೋಟಿಸ್ ನೀಡಿದ್ದು, ಇದಕ್ಕೆ ತಾನು ಸ್ಪಷ್ಟನೆ ಸಲ್ಲಿಸಿರುವುದಾಗಿ ಸಚಿನ್ ವಳತ್ತಡ್ಕ ತಿಳಿಸಿದ್ದಾರೆ.


2026ನೇ ಸಾಲಿನ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಸಚಿನ್ ವಳತ್ತಡ್ಕ ಅವರು, ಬಿ.ಎಂ.ಎಸ್. ಸಂಘಕ್ಕೆ ರಾಜೀನಾಮೆ ಸಲ್ಲಿಸದೆ ಅರುಣ ಸಾರಥಿ ಆಟೋ ಚಾಲಕ-ಮಾಲಕರ ಸಂಘ’ದಲ್ಲಿ ಸಮಾನ ಹುದ್ದೆ ಹಾಗೂ ಜವಾಬ್ದಾರಿ ವಹಿಸಿಕೊಂಡಿರುವ ಕುರಿತು ಬಿ.ಎಂ.ಎಸ್. ಸಂಘಟನೆ ವಿವರಣೆ ಕೇಳಿತ್ತು. ಸಂಘದ ನೋಂದಾಯಿತ ಬೈಲಾದಲ್ಲಿ ಅನ್ವಯವಾಗುವ ನಿಯಮಗಳನ್ನು ಪಾಲಿಸುವ ಅಗತ್ಯವಿದ್ದು, ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಕಾರಣಸಹಿತ ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸದಿದ್ದಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಬೈಲಾ ಅನುಮತಿಸುವ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಪರಿಗಣಿಸಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಈ ನೋಟಿಸ್ ಅಂತಿಮ ಆರೋಪ ನಿರ್ಧಾರ ಅಥವಾ ಹುದ್ದೆಯಿಂದ ವಜಾಗೊಳಿಸುವ ಆದೇಶವಲ್ಲ ಎಂದೂ ಸ್ಪಷ್ಟಪಡಿಸಲಾಗಿತ್ತು.



ಇದಕ್ಕೆ ಉತ್ತರಿಸಿರುವ ಸಚಿನ್ ವಳತ್ತಡ್ಕ, ಅರುಣ ಸಾರಥಿ ತಂಡದಲ್ಲಿ ಜವಾಬ್ದಾರಿ ವಹಿಸಿಕೊಂಡಿರುವುದು ಬಿ.ಎಂ.ಎಸ್. ಸಂಘಟನೆಯನ್ನು ಒಡೆಯಲು ಅಥವಾ ದುರ್ಬಲಗೊಳಿಸಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿ.ಎಂ.ಎಸ್. ಸಂಘಟನೆಯ ಬಗ್ಗೆ ತಮಗೆ ಅಪಾರ ಗೌರವವಿದೆ. ಅರುಣ ಸಾರಥಿ ತಂಡವು ಬಡವರು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಈ ತಂಡ ನೋಂದಾಯಿತ ಸಂಘಟನೆಯಲ್ಲ ಎಂಬ ಕಾರಣಕ್ಕೆ ತನ್ನಿಂದ ತಪ್ಪು ಅಥವಾ ಕಾನೂನುಬಾಹಿರ ಕೃತ್ಯ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಎರಡೂ ಸಂಘಟನೆಗಳಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ಉದ್ದೇಶ ಆಟೋ ಚಾಲಕರು ಮತ್ತು ಮಾಲಕರನ್ನು ಒಗ್ಗೂಡಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಸಮಾಜಮುಖಿ ಸೇವೆಯನ್ನು ಇನ್ನಷ್ಟು ವಿಸ್ತರಿಸುವುದಾಗಿದೆ. ಆಧಾರವಿಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಸಚಿನ್ ವಳತ್ತಡ್ಕ ಅವರು ಬಿ.ಎಂ.ಎಸ್. ಕಚೇರಿಗೆ ಉತ್ತರದ ಪತ್ರವನ್ನು ಅ.17ರಂದು ಅಂಚೆ ಮೂಲಕ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಬಿಎಂಎಸ್ನ ಕೋಶಾಧಿಕಾರಿಯೂ ಅರುಣ ಸಾರಥಿಯ ಕೋಶಾಧಿಕಾರಿ
ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಕೋಶಾಧಿಕಾರಿ ಶಿವಪ್ರಸಾದ್ ಅವರು ಕೂಡಾ ಇತ್ತೀಚೆಗೆ ಅರುಣ ಸಾರಥಿ ಆಟೋ ಚಾಲಕ, ಮಾಲಕರ ಸಂಘದ ಕೋಶಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕುರಿತು ಅವರಿಗೂ ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದಿಂದ ನೋಟೀಸ್ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.










