







ನೆಲ್ಯಾಡಿ: ಕರ್ನಾಟಕ ಸರಕಾರ, ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಜಾನಪದ ಕಲಾವಿದರಿಗೆ ನೀಡುವ 2026-27ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಬಜತ್ತೂರು ಗ್ರಾಮದ ಕಾಂಚನ ನಿವಾಸಿ, ದೈವನರ್ತಕ ಸುಬ್ಬಣ್ಣ ಪಂಡಿತ್ ಅವರು ಆಯ್ಕೆಯಾಗಿದ್ದಾರೆ.
ಬಜತ್ತೂರು ಗ್ರಾಮದ ಕಾಂಚನ ಕುಡ್ತಡ್ಕ ನಿವಾಸಿಯಾಗಿರುವ 65 ಹರೆಯದ ಸುಬ್ಬಣ್ಣ ಪಂಡಿತ್ ಅವರು ತನ್ನ 15ನೇ ವಯಸ್ಸಿನಲ್ಲೇ ತಂದೆ ದಿ| ದುಗ್ಗ ಕಾಂಚನ ಅವರ ಮೂಲಕ ದೈವ ನರ್ತನ ಸೇವೆ ಆರಂಭಿಸಿದ್ದರು. ಆರಂಭದಲ್ಲಿ ಆಟಿ ಕಳೆಂಜ, ಸುಗ್ಗಿದ ಪುಣ್ಣಮೆ ಕೊರಗ ನೇಮದ ಮೂಲಕ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿ ಮಾರಿ ಓಡಿಸುವ ಕಾಯಕ ಮಾಡುತ್ತಿದ್ದರು. 18ನೇ ವರ್ಷದಲ್ಲಿ ದೈವ ನರ್ತನ ಆರಂಭಿಸಿದ ಸುಬ್ಬಣ್ಣ ಪಂಡಿತ್ ಅವರು ಕಲ್ಲುರ್ಟಿ, ಗುಳಿಗ, ಪಂಜುರ್ಲಿ, ಕಲ್ಕುಡ, ಜುಮಾದಿ ಬಂಟ, ಮಲರಾಯ, ಬಸ್ತಿ, ರಾಜನ್ ದೈವದ ನರ್ತನ ಸೇವೆ ಮಾಡುತ್ತಿದ್ದು, 65ರ ಹರೆಯದಲ್ಲೂ ಅವರು ದೈವ ನರ್ತಕರಾಗಿದ್ದಾರೆ. ಕಾಂಚನ ಮಣಿಕ್ಕಳ ನಾಗಬ್ರಹ್ಮ, ಗೋಳಿತ್ತೊಟ್ಟು ಪೆರಣ ಬೈಲು, ಪಡ್ಪು ಶಿರಾಡಿ ದೈವಸ್ಥಾನ, ಮುಗೇರಡ್ಕ ದೈವಸ್ಥಾನ, ಗೋಳಿತ್ತೊಟ್ಟು ಶಿರಾಡಿ ಗುಡ್ಡೆ, ಮುಗೇರಡ್ಕ ಅಂತರಗುತ್ತು, ನಾಗೋಜಿ, ನೆಕ್ಕಿಲಾಡಿ ಅಂಬೆಲ, ಪುತ್ತೂರು ಪಾಂಗಳಾಯಿ ಸೇರಿದಂತೆ ವಿವಿಧ ಕಡೆಗಳಲ್ಲಿ ಇವರು ದೈವ ನರ್ತನ ಸೇವೆ ನೀಡುತ್ತಿದ್ದಾರೆ. ಶ್ರವಣಬೆಳಗೊಳ ಸೇರಿದಂತೆ ಹೊರ ಜಿಲ್ಲೆಯಲ್ಲೂ ದೈವ ನರ್ತನ ಸೇವೆ ನೀಡುತ್ತಿದ್ದಾರೆ.
ಇವರ ಪತ್ನಿ ಗಿರಿಜಾ ಅವರೂ ದೈವದ ಪರಿಚಾರಕರಾಗಿ ಸೇವೆ ಮಾಡುತ್ತಿದ್ದಾರೆ. ಹಿರಿಯ ಪುತ್ರ ನವೀನ ಅವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ದೈವ ನರ್ತಕರೂ ಆಗಿದ್ದಾರೆ. ಇನ್ನೋರ್ವ ಪುತ್ರ ಜಯರಾಮ ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮತ್ತೋರ್ವ ಪುತ್ರ ಚಂದ್ರಶೇಖರ ಅವರು ತಂದೆಯ ಜೊತೆಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಸುಬ್ಬಣ್ಣ ಪಂಡಿತ್ ಸಹಿತ 31 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಹಾಗೂ ಇಬ್ಬರು ಜಾನಪದ ವಿದ್ವಾಂಸರಿಗೆ ತಜ್ಞ ಪ್ರಶಸ್ತಿ ಘೋಷಿಸಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿರುವ ಕಲಾವಿದರಿಗೆ 25 ಸಾವಿರ ರೂ.ನಗದು ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲದ ಜೊತೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಶೃತಿ ಎಂ. ಘೋಷಿಸಿದ್ದಾರೆ.















