







ಅದ್ದೂರಿಯಾಗಿ ನಡೆದ ನಾಡಹಬ್ಬ ,ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ ,ಕುಣಿತ ಭಜನಾ ಮೆರವಣಿಗೆ


ಸವಣೂರು: ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.20ರಂದು ನಡೆಯಿತು.




ಕಾರ್ಯಕ್ರಮದಲ್ಲಿ ಅ.20ರಂದು ಬೆಳಿಗ್ಗೆ ಉದಯ ಕುಮಾರ್ ಸರ್ವೆ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಶ್ರೀ ದೇವಿಯ ಪ್ರತಿಷ್ಟೆ, ಗಣ ಹೋಮ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ಈಶ್ವರ ಗೌಡ ಕುಂತೂರು ಅವರು ಧಾರ್ಮಿಕ ಉಪನ್ಯಾಸ ನೀಡಿ,ಶಾರದೋತ್ಸವವನ್ನು ನಿರಂತರ 22 ವರ್ಷಗಳಿಂದ ಶ್ರದ್ಧೆಯಿಂದ ನಡೆಸುತ್ತಿರುವುದು ಈ ಸಂಘದ ಶ್ರಮಕ್ಕೆ, ಈ ಊರಿನ ಒಗ್ಗಟ್ಟಿಗೆ ಸಾಕ್ಷಿ.ಶಾರದೆ ಎಂದರೆ ವಿದ್ಯೆ. ವಿದ್ಯೆ ಇಲ್ಲದ ಬದುಕು ಕತ್ತಲೆ. ಆ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುವವಳೇ ಶಾರದಾಂಬೆ.
ಈ ಜ್ಞಾನದ ದೇವಿಯನ್ನು ಸವಣೂರಿನಲ್ಲಿ ಆರಾಧಿಸುವ ಮೂಲಕ ಇಡೀ ಊರಿಗೆ ವಿದ್ಯಾಮಾತೆಯ ಅನುಗ್ರಹ ದೊರಕುವಂತೆ ಮಾಡಿದ ಶಾರದಾಂಬಾ ಸೇವಾ ಸಂಘದ ಕಾರ್ಯ ನಿಜಕ್ಕೂ ಅನುಕರಣೀಯ. ಅವರು ದೇವಿ ಪ್ರತಿಷ್ಠಾಪನೆಯ ಜೊತೆಗೆ ಧಾರ್ಮಿಕ ಸಭೆ, ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆಯ ಮೂಲಕ ಊರಿನ ಎಲ್ಲಾ ಜಾತಿ, ಎಲ್ಲಾ ವರ್ಗದವರನ್ನು ಒಂದುಗೂಡಿಸುತ್ತಿದ್ದಾರೆ. ಇದೇ ನಿಜವಾದ ಸಾರ್ವಜನಿಕ ಉತ್ಸವ.ಆಚರಣೆಗಳ ಹಿಂದಿನ ಮೂಲ ಉದ್ದೇಶಗಳನ್ನು ಅರಿಯುವ ಕಾರ್ಯ ಜನತೆ ಮಾಡಿಕೊಂಡು ಐಕ್ಯ ಮನಸಿನಿಂದ ದೇವತಾರಾಧನೆ ಮಾಡಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಸರ್ವೆ ಮಾತನಾಡಿ, 22 ವರ್ಷಗಳ ಹಿಂದೆ ಸವಣೂರು ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಊರಿನ ಸಮಾನ ಮನಸ್ಕ ಯುವಕರು ಶಾರದೋತ್ಸವವನ್ನು ಸವಣೂರು ಶಾಲೆಯಲ್ಲೇ ಮಾಡಿದ್ದರು.ಅಲ್ಲಿಂದ ನಿರಂತರವಾಗಿ ಎಲ್ಲರನ್ನೂ ಸೇರಿಸಿಕೊಂಡು ಈಗ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯುತ್ತಿದೆ.ಈ ಸುಂದರ ವೇದಿಕೆ, ಈ ಹೂವಿನ ಅಲಂಕಾರ, ಈ ಶಿಸ್ತಿನ ಕಾರ್ಯಕ್ರಮವನ್ನು ನೋಡಿದರೆ, ಈ ಸಂಘದ ಹಿಂದೆ ಎಷ್ಟು ಜನರ ಶ್ರಮ ಇದೆ ಎಂದು ಅರಿವಾಗುತ್ತದೆ ಎಂದರು.

ಸನ್ಮಾನ
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಶ್ರೀನಿವಾಸ ಆಚಾರ್ಯ ,ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಸುಬ್ಬಣ್ಣ ರೈ ಖಂಡಿಗ,ಪುತ್ತೂರು ತಾಲೂಕು ಕಚೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಪಿ.ಮಲ್ಲಿ ಸೋಮನಾಥ ಕನ್ಯಾಮಂಗಲ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ವಸಂತ ರೈ ಸೊರಕೆ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಪ್ಪ ಗೌಡ ಅಡಿಲು ವಂದಿಸಿದರು.

ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ , ಬಾಲಚಂದ್ರ ರೈ ಕೆರೆಕೋಡಿ , ಮಾಜಿ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ,ಬಾಲಕೃಷ್ಣ ನಾಯ್ಕ ಕೆಡೆಂಜಿ , ವಸಂತ ಗೌಡ ಬೆದ್ರಂಪಾಡಿ, ಅಂಗಾರ ಬೇರಿಕೆ,ಚರಣ್ ಗೌಡ ಇಡ್ಯಾಡಿ ಅತಿಥಿಗಳನ್ನು ಗೌರವಿಸಿದರು.
ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕೋಡಿ , ಸದಸ್ಯರಾದ ಜಯರಾಮ ರೈ ಮೂಡಂಬೈಲು, ಶಾರದಾ ಮಾಲೆತ್ತಾರು ಸನ್ಮಾನ ಪತ್ರ ವಾಚಿಸಿದರು. ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಸಂಜೆ ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪದ್ಮಾವತಿ ಕ್ರಿಯೇಷನ್ಸ್ ಸವಣೂರು ಇವರಿಂದ ಭಕ್ತಿ ಭಾವ ಗಾಯನ ನಡೆಯಿತು. ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಶಾರದಾ ಮೂರ್ತಿಯ ವಿಜೃಂಭಣೆಯ ಶೋಭಾಯಾತ್ರೆಯು ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಶ್ರೀಶಾರದಾ ಮೂರ್ತಿಯ ಜಲಸ್ಥಂಬನ ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು , ಉಪಾಧ್ಯಕ್ಷರಾದ ಕುಂಞ ನಲಿಕೆ, ಕೋಶಾಧಿಕಾರಿ ಎಂ.ಟಿ.ಗಿರಿಧರ ಗೌಡ ಮೆದು, ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಇಂದ್ರ, ಗೌರವ ಸಲಹೆಗಾರರಾದ ಎನ್.ಸುಂದರ ರೈ ಸವಣೂರು, ರಾಜರಾಮ ಪ್ರಭು ಅಶ್ವಿನಿ ಫಾರ್ಮ್ಸ್ ಸವಣೂರು, ಎ.ಆರ್.ಚಂದ್ರ ಎಡಪತ್ಯ,ಡಾ.ಸುಬ್ರಹ್ಮಣ್ಯ ಭಟ್, ಡಾ.ಶ್ಯಾಮ ಸುಂದರ ಕೆ.,ವೆಂಕಟೇಶ ಕೊಯಕ್ಕು ಡೆ, ಪ್ರವೀಣ್ ನಾಯಕ್ ಕಂಪ, ರಾಜ್ ದೀಪಕ್ ಜೈನ್ ಕುದ್ಮಾರು ,ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವೈಭವದ ಶೋಭಾಯಾತ್ರೆ :
ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀಶಾರದಾ ಮೂರ್ತಿಯ ವಿಜೃಂಭಣೆಯ ಶೋಭಾಯಾತ್ರೆಯು ವಿನಾಯಕ ಮಂದಿರದಿಂದ ಹೊರಟು ಬಸದಿಯ ಮುಂಭಾಗದ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಶ್ರೀಶಾರದಾ ಮೂರ್ತಿಯ ಜಲಸ್ಥಂಬನ ನಡೆಯಿತು. ಶಾರದ ಉತ್ಸವದಲ್ಲಿ ಕೇರಳ ಚೆಂಡೆ ಮೇಳ ವಿಶೇಷ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ವಿವಿಧ ತಂಡಗಳಿಂದ ಕುಣಿತ ಭಜನೆ
ಮೆರವಣಿಗೆಯಲ್ಲಿ ಶ್ರೀ ಲಕ್ಷ್ಮೀ ಪಾವನ ಭಜನಾ ಮಂಡಳಿ ಮರ್ಕಂಜ, ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಮಂಡಳಿ ಸರ್ವೆ, ಶ್ರೀ ಮಹಾವಿಷ್ಣು ಕುಣಿತ ಭಜನಾ ತಂಡ ಮುಗೇರು ಸವಣೂರು, ಶ್ರೀ ಪಂಚಲಿಂಗೇಶ್ವರ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡ ಬರೆಪ್ಪಾಡಿ, ಶ್ರೀ ಮಾರಿಯಮ್ಮ ಕುಣಿತ ಭಜನಾ ತಂಡ ಮುಂಡತಡ್ಕ, ಶ್ರೀ ಸುಬ್ರಹ್ಮಣೇಶ್ವರ ಕುಣಿತ ಭಜನಾ ತಂಡ ಶಾಂತಿಮೊಗರು ತಂಡಗಳಿಂದ ಕುಣಿತ ಭಜನೆ ನಡೆಯಿತು.
ಗಮನ ಸೆಳೆದ ಹಗ್ಗಜಗ್ಗಾಟ ದೋಸೆ ಹಬ್ಬ
ಶೋಭಾಯಾತ್ರೆಯ ಮಾರ್ಗದಲ್ಲಿ ಪೆರಿಯಡ್ಕ ಬಸ್ ತಂಗುದಾಣದ ಬಳಿ ಶ್ರೀ ಆದಿಶಕ್ತಿ ಭಜನಾ ಮಂಡಳಿ ಪೆರಿಯಡ್ಕ-ಆದಿಶಕ್ತಿ ಉತ್ಸವ ಸಮಿತಿ ಪೆರಿಯಡ್ಕ ಇದರ ವತಿಯಿಂದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಉಚಿತವಾಗಿ ಬಗೆ ಬಗೆಯ ದೋಸೆಗಳನ್ನು ವಿತರಿಸುವ ದೋಸೆಹಬ್ಬವು ಶಾರದೋತ್ಸವದ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ
ಶಾರದೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.










