







ಪುತ್ತೂರು : ಕಡಬ ತಾಲೂಕಿನ ಸವಣೂರು ಗ್ರಾಮದ ಕನ್ನಡಕುಮೇರು ಎಂಬಲ್ಲಿ ಬೈಕೊಂದು ವಿದ್ಯುತ್ ಕಂಬದ ಸ್ಟೇ ವೈಯರ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.


ಸಾವನ್ನಪ್ಪಿರುವ ಯುವಕನನ್ನು ಕಡಬ ತಾಲೂಕಿನ ಕುದ್ಮಾರು ಗ್ರಾಮದ ದೇವರಗುಡ್ಡೆ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ಧನಂಜಯ (26) ಎಂದು ಗುರುತಿಸಲಾಗಿದೆ. ಈತ ರಾತ್ರಿ ಬೆಳ್ಳಾರೆ ಕಡೆಯಿಂದ ಸವಣೂರು ಮಾರ್ಗವಾಗಿ ಮೋಟಾರ್ ಸೈಕಲ್ನಲ್ಲಿ ಧನಂಜಯ ಅವರು ತನ್ನ ಸ್ನೇಹಿತ ರೋಷನ್ ಎಂಬವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದಾಗ ಕನ್ನಡಕುಮೇರು ಎಂಬಲ್ಲಿ ಬೈಕ್ ಚಾಲನೆಯ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವೈಯರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಧನಂಜಯ ಅವರ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.



ಅಪಘಾತದಿಂದ ಸಹಸವಾರ ರೋಷನ್ ಅವರಿಗೂ ಗಾಯಗಳಾಗಿವೆ. ಮೃತನ ಸಹೋದರ ಪುರುಷೋತ್ತಮ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕಣ ದಾಖಲಿಸಿಕೊಂಡಿದ್ದಾರೆ. ಆರಂಭದಲ್ಲಿ ಕೊಲೆ ಶಂಕೆ ವ್ಯಕ್ತವಾಗಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಬಳಿಕ ಹತ್ತಿರದ ಸಿಸಿ ಕ್ಯಾಮರಾ ಪುಟೇಜ್ ಪರಿಶೀಲಿಸಿದಾಗ ಅಪಘಾತದ ಸುಳಿವು ಸ್ಪಷ್ಟವಾಗಿ ದೊರೆತಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್, ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಬೆಳ್ಳಾರೆ ಠಾಣಾ ಉಪನಿರೀಕ್ಷಕ ಈರಯ್ಯ ಡಿ.ಎನ್. ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.










