







ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.21ರ ವಿಜಯದಶಮಿಯಂದು ನವರಾತ್ರಿ ಉತ್ಸವದ ಸಂಭ್ರಮಾಚರಣೆಗೆ ತೆರೆ ಬಿದ್ದಿದೆ.
ಅ.11ರಂದು ಹಸಿರು ಹೊರೆ ಕಾಣಿಕೆ ಅರ್ಪಣೆಯೊಂದಿಗೆ ನವರಾತ್ರಿ ಉತ್ಸವದ ಸಂಭ್ರಮಕ್ಕೆ ಚಾಲನೆ ನೀಡಲಾಗಿತ್ತು. ಆ ಬಳಿಕ ಪ್ರತೀ ದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅನ್ನಸಂತರ್ಪಣೆಯೊಂದಿಗೆ ನಡೆದಿತ್ತು. ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ, ಮಹಿಳಾ ಸಮಿತಿಯವರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ಅ.21ರಂದು ಬೆಳಿಗ್ಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಬಿಷೇಕ, ಶ್ರೀದೇವಿಗೆ ಮಹಾ ಅಲಂಕಾರ, ತ್ರಿಮಧುರ ನೈವೇದ್ಯ, ಕ್ಷೀರ ಪಾಯಸ ಸೇವೆ, ಲಲಿತಾ ಸಹಸ್ರನಾಮ ಪಾರಾಯಣ, ಅಕ್ಷರಾಭ್ಯಾಸ, ತುಲಾಭಾರ ಸೇವೆ, ಆಯುಧ ಪೂಜೆ, ತೆನೆ ತುಂಬಿಸುವುದು, ಶ್ರೀ ಸತ್ಯನಾರಾಯಣ ಪೂಜೆ, ಶ್ರೀದೇವಿಗೆ ಮಹಾಪೂಜೆ, ಮಧ್ಯಾಹ್ನ ಹೊಸ ಅಕ್ಕಿ ಊಟ ‘ಸಾಮೂಹಿಕ ಪುದ್ವಾರ್’, ಸಂಜೆ ಶ್ರೀ ದುರ್ಗಾಪೂಜೆ, ಹರಕೆ ಬಂದ ಸೀರೆಗಳ ಏಲಂ, ರಾತ್ರಿ ದೀಪೋತ್ಸವ ಮತ್ತು ಶ್ರೀದೇವಿಗೆ ರಂಗಪೂಜೆ ನಡೆಯಿತು.



ಬಳಿಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್ ನೆಕ್ಕಿಲಾಡಿ, ಉದ್ಯಮಿ ಬಾಲಕೃಷ್ಣ ಗೌಡ ಬಾರ್ತಿಕುಮೇರು, ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಯ್ಕ ಮಠಂತಬೆಟ್ಟು ಮತ್ತು ವೀರಪ್ಪ ಗೌಡ ಪಿಲಿಗುಂಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಸಂತೋಷ್ ರೈ ಕೆದರಿಕಂಡೆಗುತ್ತು ಸ್ವಾಗತಿಸಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ್ ನಾಯಕ್ ಮೋನಡ್ಕ ವಂದಿಸಿದರು. ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಕರುಣಾಕರ ಸಾಮಾನಿ ಸಂಪಿಗೆದಡಿ ಕಾರ್ಯಕ್ರಮ ನಿರೂಪಿಸಿದರು.










