ಭಾರತ್ ಸಿನಿಮಾಸ್‌ನಲ್ಲಿ ತೆರೆ ಕಂಡ `ಬನ’ ತುಳು ಚಲನಚಿತ್ರ

0

ಪುತ್ತೂರು:ಈಶಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ಅರ್ಪಿಸುವ, ತುಳುನಾಡಿನ ನಾಗಾರಾಧನೆಯ ಕಥಾ ಹಂದರವನ್ನು ಹೊಂದಿರುವ, ನಿತಿನ್ ರೈ ಕುಕ್ಕುವಳ್ಳಿ ಸಾರಥ್ಯದ ತುಳು ಚಲನ ಚಿತ್ರ `ಬನ’ ಅ.23ರಂದು ಜಿ.ಎಲ್ ವನ್ ಮಾಲ್‌ನ ಭಾರತ್ ಸಿನೇಮಾಸ್‌ನಲ್ಲಿ ಬಿಡುಗಡೆಗೊಂಡಿತು.

ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ತುಳುನಾಡಿನಲ್ಲಿ ನಾಗ ಭೂಮಿಯ ಒಡೆಯ. ಹಿಂದೂ ಸಂಸ್ಕೃತಿಯಲ್ಲಿ ನಾಗಾರಾಧನೆ ಬಹಳಷ್ಟು ಮಹತ್ವವಿದೆ. ನಾಗರಪಂಚಮಿಯಿಂದಲೇ ತುಳುನಾಡಿನ ಹಬ್ಬಗಳು ಪ್ರಾರಂಭವಾಗುವುದು. ತುಳುನಾಡಿನ ನಾಗಾರಾಧನೆಯ ನಾಗನ ಮಹತ್ವವನ್ನು ಬನ ಚಿತ್ರದ ಮೂಲಕ ಪ್ರಪಂಚಕ್ಕೆ ತಿಳಿಸುವ ಕಾರ್ಯವಾಗಿದೆ ಎಂದರು.

ಸ್ವರ್ಣೋದ್ಯಮಿ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ತುಳುವಿನಲ್ಲಿ ಬಹಳಷ್ಟು ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಎಲ್ಲಾ ಚಿತ್ರಗಳು ಹಾಸ್ಯದ ಮೇಲೆ ಹಿಟ್ ಆಗಿದೆ. ಆದರೆ ಬನ ಚಿತ್ರವು ವಿಭಿನ್ನತೆಯಿಂದ ಕೂಡಿದ್ದು ಧಾರ್ಮಿಕ ನಂಬಿಕೆಯ ಜೊತೆಗೆ ಕೌಟುಂಬಿಕ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ. ಕಥಾ ಪ್ರಧಾನವಾದ ಈ ಚಿತ್ರವು ನೂರು ದಿನ ಪ್ರದರ್ಶನ ಕಾಣುವಂತಾಗಲಿ ಎಂದು ಹಾರೈಸಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮದೈವ, ಧರ್ಮ ಚಾವಡಿಯ ಬಳಿಕ ನಿತಿನ್ ರೈ ಕುಕ್ಕುವಳ್ಳಿಯವರ ಬನ ಚಿತ್ರವು ತುಳು ಚಲನ ಚಿತ್ರದಲ್ಲಿ ಹೊಸ ಭಾಷ್ಯ ಬರೆದಿದೆ. ನಂಬಿಕೆಯ ಆಧಾರದಲ್ಲಿ ಬದುಕುವ ಹಿಂದೂಗಳಿಗೆ ಆಚರಣೆಗಳಿಗೆ ಇನ್ನಷ್ಟು ಶಕ್ತಿ ನೀಡಿದೆ. ಆಚರಣೆಗಳ ಮಹತ್ವವನ್ನು ಚಲನಚಿತ್ರದ ಮುಖಾಂತರ ತಿಳಿಸುವ ಕಾರ್ಯ ಮಾಡಿದ್ದು ತುಳು ನಾಡಿಗೆ ಹೆಮ್ಮೆ. ಈ ಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಣ ಮಾಡುವ ಮೂಲಕ ಇನ್ನಷ್ಟು ಮಂದಿಗೆ ವೀಕ್ಷಿಸುವಂತೆ ಪ್ರರೇಣೆ ನೀಡುವಂತೆ ತಿಳಿಸಿದರು.

ಮಹಾವೀರ ಆಸ್ಪತೆಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ತುಳುನಾಡಿನ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಬನ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರ ಮಂದಿರದಲ್ಲೇ ವೀಕ್ಷಣೆ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಚಲನ ಚಿತ್ರ ನಿರ್ಮಿಸಲು ಶಕ್ತಿ ನೀಡಬೇಕು. ವಿತರಕರಾಗಿರುವ ಬಾಲಕೃಷ್ಣ ಶೆಟ್ಟಿಯವರ ಮೂಲಕ ಪ್ರದರ್ಶನ ಕಂಡಿರುವ ಚಿತ್ರಗಳು ಬಹಳಷ್ಟು ಯಶಸ್ಸು ಕಂಡಿದ್ದು ಪುತ್ತೂರು ತುಳು ಚಲನ ಚಿತ್ರಗಳ ಕೇಂದ್ರವಾಗಿ ಬೆಳೆಯಲಿ ಎಂದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ನನ್ನ ಊರಿನ ಅದ್ಬುತ ಪ್ರತಿಭೆಯಾಗಿರುವ ನಿತಿನ್ ರೈ ಕುಕ್ಕುವಳ್ಳಿಯವರ ಮೂಲಕ 3ನೇ ಚಿತ್ರ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ತುಳುನಾಡಿನ ಸೌಂಧರ್ಯ, ನಂಬಿಕೆ, ಸಂಸ್ಕೃತಿಗಳನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯವಾಗಿದೆವೀ ಚಿತ್ರವನ್ನು ಮೊಬೈಲ್ ಟವಿಯಲ್ಲಿ ವೀಕ್ಷಿಸದೇ ಚಿತ್ರ ಮಂದಿರದಲ್ಲೇ ವೀಕ್ಷಿಸಿ ಕಲಾವಿದರನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದರು.

ತುಳು ಚಲನ ಚಿತ್ರ ನಟ ಸುಂದರ ರೈ ಮಂದಾರ ಮಾತನಾಡಿ, ಕೇವಲ 16 ದಿನಗಳಲ್ಲಿಯೇ ಚಿತ್ರ ಶೂಟಿಂಗ್ ಪೂರ್ಣಗೊಳಿಸುವ ಮೂಲಕ ನಿತಿನ್ ರೈ ಅದ್ಬುತ ಸಾಹಸ ಮಾಡಿದ್ದಾರೆ. ಚಿತ್ರ ತಂಡದಲ್ಲಿ ಬ್ಯಾನರ್ ಕಲಾವಿದರಿಲ್ಲ. ಪುತ್ತೂರಿನವರೇ ಆಗಿರುವ ಹೊಸ ಕಲಾವಿದರು ತಂಡದಲ್ಲಿರುವುದು ನಮಗೆ ಹೆಮ್ಮೆ. ಕಾಡು ಉಳಿಸಿ, ಸಂಸ್ಕೃತಿ ಬೆಳೆಸುವ ಸಂದೇಶವು ಬನ ಚಿತ್ರದಲ್ಲಿ ನೀಡುತ್ತಿದೆ ಎಂದರು.

ಹೊಟೇಲ್ ಉದ್ಯಮಿ, ರತ್ನಶೀ ಗ್ರೂಪ್ ಆಫ್ ಹೊಟೇಲ್‌ನ ಮ್ಹಾಲಕ ಜಯಂತ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ತುಳುನಾಡಿನ ಪುರಾತನ ಧಾರ್ಮಿಕ ಆಚರಣೆಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಿದ ಬನ ಚಿತ್ರವು ಧರ್ಮದ ಅರಿವು ಮೂಡಿಸುವ ಕಾರ್ಯ ಮಾಡಿದೆ. ಈ ಚಿತ್ರದ ಮೂಲಕ ದೇಶಕ್ಕೆ ಆರಾಧನೆಯ ಮಹತ್ವ ತಿಳಿಯಲು ಸಹಕಾರಿಯಾಗಿದೆ ಎಂದರು.

ನ್ಯೂ ಮಾನಕ ಜ್ಯುವೆಲ್ಲರ್ಸ್ ನ ಮ್ಹಾಲಕ ಸಿದ್ದನಾಥ ಖಂದಾರೆ, ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸ್ಯಾಕ್ಸೋಫೋನ್ ವಾದಕ ಪಿ.ಕೆ ಗಣೇಶ್, ಕಲಾವಿದ ಸುಬ್ಬು ಸಂಟ್ಯಾರ್, ಬೂಡಿಯಾರ್ ಹೊಸಮನೆ ಶ್ರೀಚಕ್ರರಾಜರಾಜೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಧನುಷ್ ಹೊಸಮನೆ, ಚಿತ್ರ ತಂಡದ ವಿಜಯಹರಿ, ರೇಣುಕಾ, ಅರುಣ್‌ಕುಮಾರ್ ರೈ, ರಜಾಕ್ ಪುತ್ತೂರು, ಭಾರತ್ ಸಿನೇಮಾಸ್‌ನ ವ್ಯವಸ್ಥಾಪಕ ಜಯರಾಮ ವಿಟ್ಲ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

ಚಿತ್ರ ತಂಡದ ಶರತ್ ಆಳ್ವ ಕೂರೇಲು ಸ್ವಾಗತಿಸಿ, ವಂದಿಸಿದರು. ಪದ್ಮರಾಜ್ ಬಿ.ಸಿ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು. ಚಲನ ಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುದ್ಕಾಡಿ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here