ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ

0

ಪುತ್ತೂರು; ಬಹಳಷ್ಟು ಮಹಾತ್ಮರು ತಮ್ಮ ಜೀವನದ ಅನುಭವಗಳನ್ನು ಸಮಾಜಕ್ಕೆ ಧಾರೆ ಎರೆದುಹೋಗಿದ್ದಾರೆ. ಸರಕಾರ ಇಂತಹ ಮಹಾತ್ಮರ ಜಯಂತಿಯನ್ನು ಆಚರಿಸುತ್ತಿದೆ. ಅವರ ಸಾಧನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಸಮಾಜವು ಸನ್ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುವಂತೆ ಸರಕಾರ ಮಹಾತ್ಮರ ಜಯಂತಿ ಆಚರಿಸುತ್ತಿದೆ ಎಂದು ಡಿವೈಎಸ್ಪಿ ಪ್ರಮೋದ್ ಕುಮಾರ್ ಹೇಳಿದರು.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಅ.26ರಂದು ತಾ.ಪಂ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಮಹರ್ಷಿಯವರ ಜಯಂತಿ ದಿನಾಚರಣೆಯ ಸಂಸ್ಮರಣಾ ದೀಪ ಬೆಳಗಿಸಿ ಮಾತನಾಡಿದರು. ಜೀವನದಲ್ಲಿ ತಪ್ಪು ಮಾಡದವರು ಯಾರೂ ಇಲ್ಲ. ತಪ್ಪನ್ನು ತಿದ್ದಿಕೊಳ್ಳುವವರು ಸಮಾಜದಲ್ಲಿ ಅದ್ಬುತ ವ್ಯಕ್ತಿಗಳು, ಮಹಾತ್ಮರೂ ಆಗುತ್ತಾರೆ. ತಪ್ಪನ್ನು ತಿದ್ದಿಕೊಳ್ಳದವರು ಸಮಾಜ ಕಂಠಕರಾಗುತ್ತಾರೆ. ಬೇಡರಾಗಿದ್ದ ವಾಲ್ಮಿಕಿ ಮಹರ್ಷಿಯವರು ನಾರದರ ಪ್ರಭಾವದಿಂದ ತನ್ನ ತಪ್ಪಿನ ಅರಿವಾಗಿ ಜೀವನದಲ್ಲಿ ಪರಿವರ್ತನೆಯಾಗಿ ಸಮಾಜದಲ್ಲಿ ಮಹಾತ್ಮರಾಗಿ ಬೆಳೆದ ಅವರು ಸುಂದರ ರಾಮಾಯಣ ಕೃತಿ ರಚಿಸಿ ಸಮಾಜಕ್ಕೆ ಅರ್ಪಣೆ ಮಾಡಿದವರು. ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಗೆ ಸಾಕಷ್ಟು ಸಂದರ್ಭಗಳು ಎದುರಾಗುತ್ತಿರುತ್ತದೆ. ಅವುಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಜೀವನದಲ್ಲಿ ಒಳ್ಳೆತನವನ್ನು ಪೋಷಿಸಬೇಕು. ಯೋಚನಾ ಶೈಲಿಯನ್ನು ಬದಲಾಯಿಸಿಕೊಳ್ಳುವ ಮುಖಾಂತರ ಸಮಾಜ, ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.


ಸಂಸ್ಮರಣಾ ಉಪನ್ಯಾಸ ನೀಡಿದ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜೀವನ ಮೌಲ್ಯ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಜಗತ್ತಿಗೆ ಸಂದೇಶ ಸಾರಿದವರು.ಸಂಸ್ಕಾರಯುತ ಕುಟುಂಬದಲ್ಲಿ ಹುಟ್ಟಿದ ಅವರು ಬೇಡರಾಗಿ ಬೆಳೆದವರು. ನಂತರ ನಾರದರ ಪ್ರಭಾವದಿಂದ ಆಧ್ಯಾತ್ಮದ ಒಳವು ಪಡೆದ ಅವರು ಸಂಸ್ಕೃತದ ಆದಿಕವಿಯಾಗಿ 24 ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ಗ್ರಂಥ ರಚಿಸಿ ಜಗತ್ತಿಗೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. 2010ರಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಹೇಳಿದರು.


ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಬೇಟೆ ಮಾಡುತ್ತಿದ್ದ ವ್ಯಕ್ತಿಯೋರ್ವ ಮಹಾತ್ಮನಾಗಿ ಪರಿವರ್ತನೆಯಾದ ವಾಲ್ಮೀಕಿ ಮಹರ್ಷಿಯವರ ತ್ಯಾಗ, ಆದರ್ಶಗಳನ್ನು ಮತ್ತೆ ನೆನಪಿಸುವ ಕಾರ್ಯ ಜಯಂತಿ ಆಚರಣೆಯ ಮೂಲಕ ನಡೆಯುತ್ತಿದ್ದು ಇದು ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹರ್ಷಿಯವರ ತತ್ವ, ಜೀವನ ವಿಧಾನಗಳನ್ನು ಅರ್ಥಮಾಡಿಕೊಂಡು ಜೀವನದಲ್ಲ ಅಳವಡಿಸಿಕೊಂಡರೆ ಸಮಾಜದಲ್ಲಿ ಪೊಲೀಸ್ ಇಲಾಖೆಯ ಆವಶ್ಯಕತೆಯಿಲ್ಲ. ಮುಂದಿನ ಕಾಲಘಟ್ಟಕ್ಕೂ ಅವರ ಜೀವನ ಆದರ್ಶಗಳ ಆವಶ್ಯಕತೆಯಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ವಾಲ್ಮೀಕಿ ಸಮುದಾಯದ ಅಭಿವೃದ್ದಿ ಸರಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಮಾನ ಪಡೆಯಬೇಕು ಎಂದು ತಿಳಿಸಿದದರು.


ಸನ್ಮಾನ;
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಾಲ್ಮಿಕಿ ಹಾಗೂ ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಾದ ಆರಾಧನ ನಾಯ್ಕ, ಧೀರಜ್, ಮಾನಸ, ದಿಶಾ ಆರ್. ಅವರನ್ನು ಸನ್ಮಾನಿಸಲಾಯಿತು. ಸಂಸ್ಮರಣಾ ಉಪನ್ಯಾಸ ನೀಡಿದ ಶಂಕರಿ ಪಟ್ಟೆ ಅವರನ್ನು ಗೌರವಸಲಾಯಿತು.


ಶಿಕ್ಷಣ ಸಂಯೋಜಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುನೀತಾ ಕುಮಾರಿ ಸ್ವಾಗತಿಸಿದರು. ವಸತಿ ಶಾಲಾ ಶಿಕ್ಷಕರಾದ ಲಕ್ಷ್ಮೀ ಸನ್ಮಾನಿತರ ಪರಿಚಯ ಮಾಡಿದರು. ಸಂಧ್ಯಾ ವಂದಿಸಿದರು. ಕೊಣಾಲು ವಸತಿ ನಿಲಯದ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here