







ಯಕ್ಷಗಾನ ಕರ್ನಾಟಕದ ರಾಜಕಲೆಯಾಗಿ ಮೆರೆಯಬೇಕು: ತಲ್ಲೂರು ಶಿವರಾಮ ಶೆಟ್ಟಿ ಆಶಯ


ಬೆಂಗಳೂರು: ಯಕ್ಷಗಾನ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕಲೆ. ಹಿರಿಯರ ಶ್ರಮದಿಂದ ಬೆಳೆದು ಬಂದಿದೆ. ಪ್ರತಿ ರಾಜ್ಯದಲ್ಲಿ ರಾಜಕಲೆ ಇರುವಂತೆ ಕರ್ನಾಟಕದಲ್ಲಿ ಯಕ್ಷಗಾನವೇ ರಾಜಕಲೆಯಾಗಿ ಮೆರೆಯಬೇಕು ಎಂಬುದು ನನ್ನ ಆಶಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.



ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2026ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಯಕ್ಷಗಾನವನ್ನು ಕಲಾ ರೂಪವಾಗಿ ಉಳಿಸಬೇಕಾದವರು ನಾವೇ, ಮುಂದೆ ಕೊಂಡೊಯ್ಯಬೇಕಾದವರೂ ನಾವೇ. ಯಕ್ಷಗಾನದ ಡಿಜಿಟಲ್ ರೂಪಗಳನ್ನು ಸಂರಕ್ಷಿಸಬೇಕು, ಕಲಾವಿದರ ಮಾಹಿತಿ ಡಿಜಿಟಲೀಕರಣವಾಗಬೇಕು. ಸರ್ಕಾರ ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದು, ಕಾರ್ಯ ಚಾಲ್ತಿಯಲ್ಲಿದೆ. ಯಕ್ಷಗಾನ ಮ್ಯೂಸಿಯಂಗಳನ್ನು ಆನ್ಲೈನ್ ಮಾಡಿದರೆ ಮುಂದಿನ ತಲೆಮಾರು ಯಕ್ಷಗಾನದತ್ತ ಬರಲು ಸಾಧ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂಧರಾ ಮಾತನಾಡಿ, ಯಕ್ಷಗಾನ ಅಯಸ್ಕಾಂತದಂತೆ ಸೆಳೆಯುವ ಕಲೆ, ಪರಿಪೂರ್ಣ ಶ್ರೀಮಂತಿಕೆಯ ಕಲೆ ಎಂದರು.
ಪ್ರಶಸ್ತಿ ಪುರಸ್ಕೃತರು:
ಪಾರ್ತಿಸುಬ್ಬ ಪ್ರಶಸ್ತಿ (1 ಲಕ್ಷ ನಗದು + ಫಲಕ): ಯಕ್ಷಗಾನ ಪ್ರಸಂಗಕರ್ತ ಹಾಗೂ ಸ್ತ್ರೀವೇಷಧಾರಿ ಎಂ.ಕೆ. ರಮೇಶ್ ಆಚಾರ್ಯ. “ಯಕ್ಷಗಾನ ಕರಾವಳಿ ಗಂಡುಕಲೆ ಎಂಬ ಶಬ್ದ ನನಗೆ ಇಷ್ಟವಾಗುವುದಿಲ್ಲ. ಭರತನಾಟ್ಯ ಭಾರತದ ಕಲೆ ಹೇಗೋ, ಹಾಗೆ ಯಕ್ಷಗಾನ ಕರ್ನಾಟಕದ ಕಲೆ ಎನ್ನಬೇಕು” ಎಂದು ಅವರು ಹೇಳಿದರು.
ಗೌರವ ಪ್ರಶಸ್ತಿ (50 ಸಾವಿರ ನಗದು): ಜಪ್ಪು ದಯಾನಂದ ಶೆಟ್ಟಿ (ತೆಂಕು ವೇಷ), ಸಿರಿಬಾಗಿಲು ರಾಮಕೃಷ್ಣ ಮಯ್ಯ (ತೆಂಕು ಭಾಗವತ), ಪದ್ಮನಾಭ ಉಪಾಧ್ಯ (ತೆಂಕು ಮದ್ದಳೆ), ಮಹಾಬಲ ದೇವಾಡಿಗ (ಬಡಗು ವೇಷ), ದೊಡ್ಡ ಮಲ್ಲಯ್ಯ ಎಸ್.ಕೆ. (ಮೂಡಲಪಾಯ ಭಾಗವತ).
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ (25 ಸಾವಿರ ನಗದು):
ರಾಘವೇಂದ್ರ ಅಸ್ರಣ್ಣ, ಪೂರ್ಣಿಮಾ ಯತೀಶ್ ರೈ (ಪುತ್ತೂರು), ದುರ್ಗಾಪರಮೇಶ್ವರಿ ಕುಕ್ಕಿಲ, ಉಜಿರೆ ನಾರಾಯಣ ಪೂಜಾರಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಹೆರಿಯ ನಾಯ್ಕ, ರಾಮಕೇಶವ ಗೌಡ ಗುಣವಂತೆ, ಪಡ್ರೆ ಕುಮಾರ, ಸುರೇಶ ಕುಪ್ಪೆಪದವು, ಇ. ಶಿವಣ್ಣ (ತುಮಕೂರು).
ದತ್ತಿನಿಧಿ ಪ್ರಶಸ್ತಿ: ಭೀಮಣ್ಣ (ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ), ಪ್ರೊ. ಎಂ.ಎನ್. ವೆಂಕಟೇಶ್ (ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ).
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಅಸ್ರಣ್ಣ, ತಿಂಗಳಿಗೆ 75 ರೂ. ಸಂಬಳದಲ್ಲಿ ತಿರುಗಾಟ ಆರಂಭಿಸಿದ್ದನ್ನು ಸ್ಮರಿಸಿದರು. ಉಜಿರೆ ನಾರಾಯಣ ಪೂಜಾರಿ 55 ವರ್ಷಗಳ ತಿರುಗಾಟದ ಅನುಭವ ಹಂಚಿಕೊಂಡರು. ಪೂರ್ಣಿಮಾ ಯತೀಶ್ ರೈ ಅವರು, ಮಹಿಳೆಯರ ಸಾಧನೆಯನ್ನು ಗುರುತಿಸಿದ್ದು ಸ್ಫೂರ್ತಿದಾಯಕ ಎಂದರು. ಯಕ್ಷಗಾನ ಅಕಾಡೆಮಿ ಸದಸ್ಯರಾದ ರಾಘವ ಹೆಚ್ ಅವರು ಆಶಯ ಭಾಷಣವನ್ನೂ, ಸತೀಶ್ ಅಡಪ ಸಂಕಬೈಲ್ ಅವರು ಧನ್ಯವಾದ ಸಮರ್ಪಿಸಿದರು.










