







ಪುತ್ತೂರು: ಎಂಬಿಎ ವಿದ್ಯಾರ್ಥಿಗಳು ಬರೀ ಉದ್ಯಮಾಡಳಿತದ ಬಗ್ಗೆ ತಿಳಿದುಕೊಂಡರೆ ಸಾಲದು ಬದಲಾಗಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದ ಅರಿವೂ ಇರಬೇಕು. ಅಂತೆಯೇ ಎಂಸಿಎ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಆಡಳಿತದ ಬಗ್ಗೆಯೂ ಅರಿತುಕೊಳ್ಳಬೇಕು. ಹೀಗಾದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು ಎಂದು ಬೆಂಗಳೂರಿನ ಎಚ್ಆರ್ಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಲಾಶಾ ಗಾಂವ್ಕರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗಗಳ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾನು ಕಲಿಯುತ್ತಿರುವ ವಿಷಯಗಳ ಅಗತ್ಯತೆ ಏನು ಅದನ್ನು ಎಲ್ಲಿ ಬಳಸಿಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕು ಇದರಿಂದ ಸಾಮಾಜಿಕ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದರು. ಉತ್ತಮ ಹವ್ಯಾಸಗಳು ಜೀವನದಲ್ಲಿ ಆವಶ್ಯಕ. ಕಷ್ಟದ ಸಂದರ್ಭದಲ್ಲಿ ಹವ್ಯಾಸಗಳು ಕೈಹಿಡಿದ ಅನೇಕ ಉದಾಹರಣೆಗಳನ್ನು ಉಲ್ಲೇಖಿಸಬಹುದು ಎಂದು ನುಡಿದರು.



ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಮಾತನಾಡಿ ಕೃತಕ ಬುದ್ದಿಮತ್ತೆ, ಸ್ವಯಂಚಾಲನೆ, ಡಿಜಿಟಲೀಕರಣ, ಜಾಗತಿಕ ಜಾಲಗಳಿಂದಾಗಿ ಕಳೆದ ಹತ್ತಿಪ್ಪತ್ತು ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಬದಲಾವಣೆಗಳು ವ್ಯಾಪಕವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಬದಲಾವಣೆಗಳನ್ನು ಎಷ್ಟು ಬೇಗ ಕಲಿತು ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಏಳಿಗೆ ನಿರ್ಧಾರವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಅನೇಕ ಚಟುವಟಿಕೆಗಳನ್ನು ನಡೆಸುತ್ತದೆ ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಕೂಳೂರು ಸುಬ್ರಮಣ್ಯ ಭಟ್ ಮಾತನಾಡಿ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಸ್ನಾತಕೋತ್ತರ ಪದವಿಯನ್ನು ಪಡೆದರೂ ಕಲಿಕೆ ಮುಗಿಯುವುದಿಲ್ಲ ಬದಲಾಗಿ ಜೀವನದ ಕೊನೆಯವರೆಗೂ ನಾವು ಕಲಿಯುತ್ತಲೇ ಇರಬೇಕು ಎಂದು ಹೇಳಿದರು.




ನಮ್ಮ ಪ್ರತಿಕ್ಷಣದ ಏಳಿಗೆಯಲ್ಲಿಯೂ ಮಾತಾಪಿತರು, ಗುರುಹಿರಿಯರ ಕೊಡುಗೆ ಇದೆ ಅವರನ್ನು ಸದಾ ಸ್ಮರಿಸುತ್ತಾ ಸಮಾಜದ ಉದ್ಧಾರಕ್ಕೆ ನಮ್ಮಕೈಲಾದ ಸಹಾಯವನ್ನು ಮಾಡಬೇಕು ಎಂದರು. ಆಡಳಿತ ಮಂಡಳಿಯ ನಿರ್ದೇಶಕ ಮನೋಜ್ ಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಂಬಿಎ ಮತ್ತು ಎಂಸಿಎ ವಿಭಾಗಗಳ ಕಳೆದ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ.ಕೆ ಸ್ವಾಗತಿಸಿ, ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ಮ ನೋಹರ್ ಶಿಂಧೆ ವಂದಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ರಾವ್ ಮತ್ತು ಜಾಹ್ನವಿ ಕಾರ್ಯಕ್ರಮ ನಿರ್ವಹಿಸಿದರು.










