ಕಣಿಯೂರು ಕ್ಷೇತ್ರದಲ್ಲಿ ಮೂರ್ತಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ

0

  • ಊರಿನ ಸ್ವಾಸ್ಥ್ಯಕ್ಕೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಪೂರಕ:ಎಡನೀರು ಶ್ರೀ
  • ಭಕ್ತರ ಮುಷ್ಠಿ ಹಣದಿಂದ ಕ್ಷೇತ್ರ ಈ ಹಂತಕ್ಕೆ ಅಭಿವೃದ್ಧಿಯಾಗಿದೆ: ಕಣಿಯೂರು ಶ್ರೀ
  • ಮಕ್ಕಳಿಗೆ ಧರ್ಮದ ಅರಿವನ್ನು ಮೂಡಿಸುವ ಕಾರ್ಯವಾಗಬೇಕು: ಲಕ್ಷ್ಮೀನಾರಾಯಣ ಅಸ್ರಣ್ಣ
  • ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಲಾಗುವುದು : ರಾಜೇಶ್ ನಾಯ್ಕ್
  • ಧಾರ್ಮಿಕ ಪ್ರಜ್ಞೆ   ಮೂಡಿಸುವ ಕಾರ್ಯ ಕಣಿಯೂರು ಶ್ರೀಗಳಿಂದ ಆಗುತ್ತಿದೆ: ಡಾ.ರಾಜಾರಾಮ ಕೆ.ಬಿ
  • ಜಾತಿ ಧರ್ಮವನ್ನು ಮೀರಿದ ಭಾವನಾತ್ಮಕ ಸಂಬಂಧದ ಬೆಸುಗೆ ಇಲ್ಲಿದೆ: ಜಯಂತ ನಡುಬೈಲ್

ವಿಟ್ಲ: ತಾಯಿಯನ್ನು ಪೂಜಿಸುವ ಧರ್ಮ ನಮ್ಮದು. ಮಾತೃ ಧರ್ಮವನ್ನು ಉಳಿಸಿ ಬೆಳೆಸಿ ತಮ್ಮ ಜೀವನದಲ್ಲಿ ಅಳವಡಿಕೆ ಮಾಡಬೇಕು. ಊರಿನ ಸ್ವಾಸ್ಥ್ಯಕ್ಕೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಪೂರಕವಾಗುತ್ತದೆ. ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಅಂಗವಾಗಿ ಫೆ.6ರಂದು ಮಾತೃಶ್ರೀ ವೇದಿಕೆಯಲ್ಲಿ ನಡೆದ ಧರ್ಮ ಸಭೆಯನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮಾಜದ ಸತ್ಕಾರ್ಯಗಳ ಮೂಲಕ ಸಂಘಟನೆ ಬಲವಾಗುತ್ತದೆ. ಮಾತೃ ಸಂಸ್ಕೃತಿಯನ್ನು ತ್ಯಜಿಸಿ ಬದುಕು ನಡೆಸಲು ಅಸಾಧ್ಯ. ಧಾರ್ಮಿಕ ಶ್ರದ್ಧೆ ಈ ಭಾಗದ ಜನರಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದು ಇಲ್ಲಿ ಸೇರಿರುವ ಭಕ್ತ ಸಮೂಹವನ್ನು ಕಂಡಾಗ ತಿಳಿಯುತ್ತದೆ. ಸ್ವಾಮೀಜಿಯ ನಿಸ್ವಾರ್ಥ ಸೇವೆ ಸುಂದರ ದೇವಾಲಯ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಮುಂದಿನ ದಿನಗಳಲ್ಲಿ ಕಣಿಯೂರು ಕ್ಷೇತ್ರ ಕಾರಣಿಕ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ ಎಂದು ಸ್ವಾಮೀಜಿ ಹೇಳಿದರು.

ಭಕ್ತರ ಮುಷ್ಠಿ ಹಣದಿಂದ ಕ್ಷೇತ್ರ ಈ ಹಂತಕ್ಕೆ ಅಭಿವೃದ್ಧಿಯಾಗಿದೆ: ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ಮಾತೆಯ ಆeಯಂತೆ ಸಮಾಜಕ್ಕಾಗಿ ಮುಂದಿನ ಬದುಕನ್ನು ಮುಡಿಪಾಗಿಡುವ ಸಂಕಲ್ಪ ಮಾಡುತ್ತೇನೆ. ಭಕ್ತರ ಮುಷ್ಠಿ ಹಣದಿಂದ ಕ್ಷೇತ್ರ ಈ ಹಂತಕ್ಕೆ ಅಭಿವೃದ್ಧಿಯಾಗಿದೆ. ಸಾನಿಧ್ಯದ ಬೆಳವಣಿಗೆಗೆ ಸರ್ವರ ಸಹಕಾರ ಸಿಕ್ಕಿದೆ. ತಾಯಿಯ ಪ್ರೇರಣೆಯಂತೆ ಕ್ಷೇತ್ರ ಮುನ್ನಡೆಯುತ್ತಿದೆ ಎಂದರು.

ಮಕ್ಕಳಿಗೆ ಧರ್ಮದ ಅರಿವನ್ನು ಮೂಡಿಸುವ ಕಾರ್ಯವಾಗಬೇಕು: ಕಟೀಲು ಶ್ರೀಕ್ಷೇತ್ರದ ಪ್ರಧಾನಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತನಾಡಿ ನಮ್ಮ ಮಕ್ಕಳಿಗೆ ಧರ್ಮದ ಅರಿವನ್ನು ಮೂಡಿಸುವ ಕಾರ್ಯವಾಗಬೇಕು. ದೇವರನ್ನು ನಿಷ್ಕಲ್ಮಶ ಭಕ್ತಿಯಿಂದ ಪೂಜಿಸಿದರೆ ನೆಮ್ಮದಿ ಸಾಧ್ಯ. ಧರ್ಮದ ಅಡಿಯಲ್ಲಿ ಜೀವನ ನಡೆಸಿದಾಗ ಸಾರ್ಥಕ್ಯ ಸಾಧ್ಯ. ಕ್ಷೇತ್ರದ ಬಗೆಗೆ ಮಹಾಬಲ ಸ್ವಾಮೀಜಿಯವರ ತ್ಯಾಗ ಅಪಾರ ಎಂದರು.

ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಲಾಗುವುದು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಮಾತನಾಡಿ ಸರ್ಕಾರದ ವತಿಯಿಂದ ಈಗಾಗಲೇ ೧೦ಲಕ್ಷ ರೂಪಾಯಿಯನ್ನು ನೀಡಿಲಾಗಿದೆ. ತಡೆಗೋಡೆಯ ವಿಚಾರದಲ್ಲಿ ತಕ್ಷಣ ಇನ್ನೂ 10ಲಕ್ಷ ರೂಪಾಯಿಯನ್ನು ಮಂಜೂರು ಮಾಡುವ ಕಾರ್ಯ ಮಾಡಲಾಗುವುದು. ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಲಾಗುವುದು ಎಂದರು.

ಧಾರ್ಮಿಕ ಪ್ರe ಮೂಡಿಸುವ ಕಾರ್ಯ ಶ್ರೀಗಳಿಂದ ಆಗುತ್ತಿದೆ: ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ರವರು ಮಾತನಾಡಿ ಧಾರ್ಮಿಕ ಪ್ರe ಮೂಡಿಸುವ ಕಾರ್ಯ ಕಣಿಯೂರು ಶ್ರೀಗಳಿಂದ ಆಗುತ್ತಿದೆ. ಬದುಕಿ ಉಳಿದರೆ ಬದುಕು ಜೀವ ಉಳಿದರೆ ಜೀವನ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ನೈತಿಕ ಶಿಕ್ಷಣದ ಮೂಲಕ ನಮ್ಮ ಮಕ್ಕಳನ್ನುಉತ್ತಮ ಪ್ರಜೆಯನ್ನಾಗಿಸಲು ಸಾಧ್ಯ. ಮಕ್ಕಳಿಗೆ ಭಾರತೀಯ ಆಚಾರವನ್ನು ಬಿಂಬಿಸುವ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಒಂದೇ ಮನಸ್ಸಿನಿಂದ ಸೇರಿದರೆ ಅಲ್ಲಿ ಭಾವನಾತ್ಮಕ ಬೆಸುಗೆ ನಿರ್ಮಾಣವಾಗುತ್ತದೆ ಎಂದರು.

ಜಾತಿ ಧರ್ಮವನ್ನು ಮೀರಿದ ಭಾವನಾತ್ಮಕ ಸಂಬಂಧದ ಬೆಸುಗೆ ಇಲ್ಲಿದೆ: ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ಜಯಂತ ನಡುಬೈಲುರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಣಿಯೂರಿನಲ್ಲಿ ಜಾತಿ ಧರ್ಮವನ್ನು ಮೀರಿದ ಭಾವನಾತ್ಮಕ ಸಂಬಂಧದ ಬೆಸುಗೆಯಿದೆ. ಶ್ರೀಗಳ ನಿರಂತರ ತಪಸ್ಸಿನ ಫಲ ಇಂದು ಕ್ಷೇತ್ರದ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಇಲ್ಲಿರುವ ಎಲ್ಲರೂ ನಮ್ಮದೆನ್ನುವ ಭಾವದಲ್ಲಿ ಸಾರ್ಥಕ ಸೇವೆಯನ್ನು ಮಾಡುತ್ತಿರುವುದನ್ನು ಕಂಡಾಗಲೇ ಮನಸ್ಸಿಗೆ ಆನಂದವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಬಂಟ್ವಾಳ ತಾಲೂಕು ಹಾಗೂ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆಯ ವತಿಯಿಂದ ಗೌರವಿಸಲಾಯಿತು.

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಯಕ್ಷದ್ರುವ ಪಟ್ಲ  ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಓ. ಶ್ಯಾಮ್ ಭಟ್, ಹೃದಯ ತಜ್ಞ ಡಾ. ಶ್ಯಾಮ್ ಭಟ್, ಎಂ. ಪಿ. ದಯಾನಂದ ಶೆಟ್ಟಿ ಗುಬ್ಯ, ಪ್ರಕಾಶ್ ಅಂಚನ್, ಅಂಬಾರು ಶ್ರೀ ಸದಾಶಿವ ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ, ಶ್ರೀ ಚಾಮುಂಡೇಶ್ವರೀ ದೇವೀ ಸೇವಾ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲಮಂಟಮೆ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಾತೇಶ್ ಭಂಡಾರಿ ವಂದಿಸಿದರು. ಟ್ರಸ್ಟಿ ರೇಣುಕಾ ಲೋಕೇಶ್ ಪಜೀರು ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮ: ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆ.6ರಂದು ಬೆಳಗ್ಗೆ ಗಣಪತಿಹೋಮ, ಕಲಶಾಽವಾಸಹೋಮ ಬ್ರಹ್ಮಕಲಶಪೂಜೆ, ಶಿಖರಕಲಶಪೂಜೆ ನಡೆದು 9.28೮ರ ಮೀನ ಲಘ್ನ ಸುಮುಹೂರ್ತದಲ್ಲಿ ಶ್ರೀ ಚಾಮುಂಡೇಶ್ವರೀ ದೇವಿಯ ಮೂರ್ತಿಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ಪೂಜೆ ನಡೆಯಿತು. ಬಳಿಕ ನಿತ್ಯ ನೈಮಿತ್ತಿಕ ನಡಾವಳಿಗಳ ನಿರ್ಣಯ, ನಿವೇದನೆ, ಸಪ್ತಶತಿ ಪಾರಾಯಣ, ಗುಳಿಗ ಪ್ರತಿಷ್ಠೆ ಕಲಶಾಭಿಷೇಕ, ವಿಶೇಷ ದ್ರವ್ಯ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಕ್ಷೇತ್ರದ ನಾಗ ಸಾನಿಧ್ಯದಲ್ಲಿ ಸಾನಿಧ್ಯಕಲಶ ಪೂಜೆ, ಸಾನಿಧ್ಯಕಲಶಾಭಿಷೇಕ, ನಾಗಪೂಜಾ ತಂಬಿಲಾದಿಗಳು, ರಕ್ತೇಶ್ವರೀ ಅಣ್ಣಪ್ಪ ಸ್ವಾಮಿ ಸಾನಿಧ್ಯದಲ್ಲಿ ಕಲಸಜಾಭಿಷೇಕ ನಡೆಯಿತು. ಮಧ್ಯಾಹ್ನ ಸರ್ವಾಲಂಕಾರ ಸಹಿತ ಮಹಾಪೂಜೆ, ಪರಿವಾರ ಸಾನಿಧ್ಯಗಳಲ್ಲಿ ತಂಬಿಲಾದಿಗಳು, ಕ್ರಿಯಾದಕ್ಷಿಣಾದಿಗಳು, ಮಹಾಮಂತ್ರಾಕ್ಷತೆ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ರಂಗಪೂಜೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಫೆ.6ರಂದು ನವಕರ್ನಾಟಕ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಾಯಾರು ಮತ್ತು ದಿ. ತಾಲ್ತಾಜೆ ಸುಬ್ರಾಯ ಭಟ್ ಪ್ರತಿಷ್ಠಾನದಿಂದ ಮೇಧಿನಿ ನಿರ್ಮಾಣ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಾಯಂಕಾಲ ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಜ್ಞಾನಗುರುರಾಜ್ ಪುತ್ತೂರು ಇವರಿಂದ ಜ್ಞಾನ ಗಾನಾಂಜಲಿ, ನೃತ್ಯ ಕಲಾವಿದೆ ಕವಿತಾ ಸುಧಾಕರ್ ಮತ್ತು ತಂಡದವರಿಂದ ಭರತನಾಟ್ಯಾಂಜಲಿ ನಡೆಯಿತು. ರಾತ್ರಿ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಸನಾತನ ನೃತ್ಯಾಂಜಲಿ ಭರತ ನಾಟ್ಯ, ದೇಶಭಕ್ತಿ, ಜಾನಪದ ನೃತ್ಯ ವೈವಿದ್ಯ ನಡೆಯಿತು.

ಇಂದು ಚಂಡಿಕಾಯಾಗ
ಇಂದು ಚಂಡಿಕಾಯಾಗ ಫೆ.7ರಂದು ಬೆಳಗ್ಗೆ ಚಂಡಿಕಾಯಾಗ ಪ್ರಾರಂಭ, ಮಧ್ಯಾಹ್ನ ಪೂರ್ಣಾಹುತಿ, ಸುಹಾಸಿನಿ ಪೂಜೆ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಭ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2ಗಂಟೆಯಿಂದ ಶ್ರೀ ಚಾಮುಂಡೇಶ್ವರೀ ಯಕ್ಷಗಾನ ಕಲಾವೃಂದ ಕಣಿಯೂರು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ 8ಗಂಟೆಯಿಂದ ಶ್ರೀ ವಿನಾಯಕ ಯಕ್ಷಗಾನ ಕಲಾತಂಡ ಕರೆಕಾಡು ಮೂಲ್ಕಿ ಇವರಿಂದ ‘ಶಾಂಭವೀ ವಿಲಾಸ’ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here