ಫೆ.12: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಪದಸ್ವೀಕಾರ ಸಮಾರಂಭ

0


ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭವು ಫೆ.12ರಂದು ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತ ಬಾಲವನದ ಬಯಲು ರಂಗಮಂದಿರದಲ್ಲಿ ಅಪರಾಹ್ನ 3.30ಕ್ಕೆ ನಡೆಯಲಿದೆ.

 

ಈ ಬಗ್ಗೆ ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕಾರ್ಯಕ್ರಮವನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಳದ ಧಾರ್ಮಿಕ ಗ್ರಂಥಾಲಯಕ್ಕೆ ಪುಸ್ತಕಗಳ ಹಸ್ತಾಂತರ ನಡೆಯಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೃತಿ ಅನಾವರಣ ನಡೆಯಲಿದ್ದು, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ರಚಿಸಿರುವ `ಹೊಂಗನಸು’ ಕೃತಿಯನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅನಾವರಣಗೊಳಿಸಲಿದ್ದಾರೆ. ಎಸ್.ಜಿ ಕೃಷ್ಣ ರಚಿಸಿರುವ `ದೇವರು ಇಲ್ಲೇ ಇದ್ದಾನೆ’ ಕೃತಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅನಾವರಣ ಮಾಡಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಸಾಹಿತ್ಯ ಲೋಕಕ್ಕೆ ಹೊಸ ಮುಖಗಳ ಪರಿಚಯವಾಗಬೇಕು, ಯುವಜನತೆಯಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲ್ಲದೆ ತಾಲೂಕಿನ ಹಿರಿಯ ಸಾಹಿತಿಗಳು ಸಾಹಿತ್ಯಲೋಕಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿಯೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಾರ್ವಜನಿಕರಿಗೂ ಸಾಹಿತ್ಯ ಕ್ಷೇತ್ರದ ಕಡೆಗೆ ಒಲವನ್ನು ಮೂಡಿಸುವ ನಿಟ್ಟಿನಲ್ಲಿ ಪುಸ್ತಕ ಓದುವ ವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಕೊಳ್ಳಲಾಗಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ ಹಾಗೂ ಕಿರಿಯರ ಚತುರತೆಯನ್ನು ಮೇಳೈಸಿ ಹೊಸತನವನ್ನು ತರುವ ಪ್ರಯತ್ನ ಮಾಡಲಾಗಿದೆ ಎಂದರು.

ಸಾಹಿತ್ಯ ಪರಿಷತ್ ಪುತ್ತೂರು ಘಟಕಕ್ಕೆ ಸ್ವಂತ ಕಟ್ಟಡದ ಹಿನ್ನೆಲೆಯ ‘ನೆಲೆ’, ಸಾಹಿತ್ಯ ಕ್ಷೇತ್ರಕ್ಕೆ ಎಲ್ಲ ವಯೋಮಾನದ ನವಸಾಹಿತಿಗಳನ್ನು ಬರಮಾಡಿಕೊಂಡು ಅವರಿಗೆ ವೇದಿಕೆಯನ್ನು ಕಲ್ಪಿಸುವುದು ಹಾಗೂ ಅವರ ಕೃತಿಗಳನ್ನು ಹೊರತರಲು ಸಹಕರಿಸುವ ನೆಲೆಯಲ್ಲಿ `ನವ ಸಾಹಿತಿ’, ತಾಲೂಕಿನಲ್ಲಿರುವ ಹಿರಿಯ ಸಾಹಿತಿಗಳಿಗೆ ಸೂಕ್ತ ಸ್ಥಾನಮಾನ ಬರುವಂತೆ ಅವರ ಕೃತಿಗಳ ಪುನರ್ ಅನಾವರಣ/ ವಿಚಾರಗೋಷ್ಠಿ ನಡೆಸುವ `ಸಾಹಿತ್ಯ ಸ್ಥಾನಮಾನ’, ಹಿರಿಯ ಸಾಹಿತಿಗಳನ್ನು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುವ `ಸಾಹಿತ್ಯ ಸನ್ಮಾನ’, ರೋಟರಿ ವಾಲ್ ಆಫ್ ಕೈಂಡ್ನೆಸ್ ಮಾದರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಪುಸ್ತಕಗಳ ಗೂಡು-ತಮಗೆ ಉಪಯೋಗವಿಲ್ಲದ ಪುಸ್ತಕಗಳನ್ನು ಇಟ್ಟು ಇತರ ಪುಸ್ತಕಗಳನ್ನು ಪಡಕೊಳ್ಳುವ `ಕೊಟ್ಟು ಪಡೆದುಕೋ’, ಶಾಲಾ-ಕಾಲೇಜುಗಳಲ್ಲಿ ಬುಕ್ ಬ್ಯಾಂಕ್ (ತಮಗೆ ಉಪಯೋಗವಿಲ್ಲದ ಪುಸ್ತಕಗಳನ್ನು ಇಟ್ಟು ಇತರ ಪುಸ್ತಕಗಳನ್ನು ಪಡಕೊಳ್ಳುವ `ಬುಕ್ ಬ್ಯಾಂಕ್’, ಬಸ್ಸುನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ, ನಗರದಲ್ಲಿರುವ ಪಾರ್ಕುಗಳಲ್ಲಿ, ಬಸ್ ಸ್ಟಾಪ್‌ಗಳಲ್ಲಿ, ಟೆಂಪೋ ಸ್ಟ್ಯಾಂಡ್, ಆಟೋಸ್ಟ್ಯಾಂಡ್‌ನಲ್ಲಿ ಪುಟ್ಟ ಗ್ರಂಥಾಲಯದ `ಜ್ಞಾನ ಭಂಡಾರ’, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಥೆ, ಕವನಗಳನ್ನು ರಚಿಸುವ ಕುರಿತು ಹಿರಿಯ ಸಾಹಿತಿಗಳಿಂದ ತರಬೇತಿ ನೀಡುವ `ಸಾಹಿತ್ಯ ಶಿಕ್ಷಣ’, ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ `ಬಾಲಸಾಹಿತ್ಯ ಮೇಳ’, ಸಾಹಿತ್ಯಾಸಕ್ತರ ಮನೆಯಲ್ಲಿ ಸಾಹಿತ್ಯ ಸಮ್ಮಿಲನ `ಸಾಹಿತ್ಯ ಮಿಲನ’, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಥೆ-ಕವನ ಸ್ಪರ್ಧೆ `ಸಾಹಿತ್ಯ ಸ್ಪರ್ಧಾ’, ಹೊರರಾಜ್ಯದಿಂದ ಬಂದು ಇಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ಕನ್ನಡದಲ್ಲಿ ಮಾತನಾಡಲು ಕಲಿಸುವ `ಕನ್ನಡ ಮಾತಾಡು’, ಪುತ್ತೂರು ತಾಲೂಕಿನಲ್ಲಿರುವ ೨೨ ಗ್ರಾಮ ಪಂಚಾಯತ್‌ನಲ್ಲಿರುವ ೩೨ ಗ್ರಾಮಗಳ ಶಾಲಾ ಕಾಲೇಜುಗಳ ಅಧ್ಯಾಪಕರು, ಸಾಹಿತ್ಯ ಆಸಕ್ತ ಸಾರ್ವಜನಿಕರನ್ನು ಒಳಗೊಂಡ ಕ್ರಿಯಾ ಸಮಿತಿ ರಚಿಸಿ ಅಲ್ಲಿ ಸಾಹಿತ್ಯ ಸಂಭ್ರಮ ನಡೆಸುವ `ಗ್ರಾಮ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ’ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಉಮೇಶ್ ನಾಯಕ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಮಾಜಿ ಅಧ್ಯಕ್ಷರು, ಸಲಹೆಗಾರರಾದ ವಿ.ಬಿ. ಅರ್ತಿಕಜೆ ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಪುತ್ತೂರು ಉಮೇಶ್ ನಾಯಕ್, ನಿಕಟಪೂರ್ವ ಅಧ್ಯಕ್ಷರು: ಐತಪ್ಪ ನಾಯ್ಕ್, ಕಾರ್ಯದರ್ಶಿಗಳು: ಡಾ ಪೀಟರ್ ವಿಲ್ಸನ್ ಪ್ರಭಾಕರ್, ಹರಿಣಿ ಪುತ್ತೂರಾಯ, ಕೋಶಾಧ್ಯಕ್ಷರು: ಡಾ.ಹರ್ಷ ಕುಮಾರ್ ರೈ ಪದನಿಮಿತ್ತ ಸದಸ್ಯರು: ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿ: ಸುಭೋದ ಪ್ರೌಢಶಾಲೆ ಪಾಣಾಜೆ, ಶ್ರೀಪತಿ ಭಟ್ ಐ. ಮುಖ್ಯೋಪಾಧ್ಯಾಯರು ಮಹಿಳಾ ಪ್ರತಿನಿಧಿ: ಶಂಕರಿ ಶರ್ಮ, ಆಶಾ ಬೆಳ್ಳಾರೆ

ಪರಿಚಯ
ಪುತ್ತೂರು ಉಮೇಶ್ ನಾಯಕ್
ಜಯಾ ಮತ್ತು ಜಗನ್ನಾಥ ನಾಯಕ್ ಅವರ 4ನೇ ಮಗನಾದ ಇವರು ಪ್ರಾಥಮಿಕ ಶಿಕ್ಷಣವನ್ನು ಮೈದೆವುಸ್ ಶಾಲೆ, ಪ್ರೌಢಶಿಕ್ಷಣವನ್ನು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ, ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಪೂರೈಸಿ ರುತ್ತಾರೆ. ಪ್ರಸ್ತುತ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಇಲ್ಲಿ ಕನ್ನಡ ಎಂ. ಎ ವಿದ್ಯಾರ್ಥಿಯಾಗಿರುತ್ತಾರೆ. ಇವರು ಪತ್ನಿ ರೂಪಶ್ರೀ ನಾಯಕ್ ಹಾಗೂ ಪುತ್ರ ಸಾತ್ವಿಕ್ ನಾಯಕ್ ಜೊತೆ ದರ್ಬೆಯಲ್ಲಿ ವಾಸವಾಗಿದ್ದಾರೆ.

ಉಮೇಶ್ ನಾಯಕ್

ಸಮಿತಿಯ ಸದಸ್ಯರು: ಕುಂಬ್ರ ದುರ್ಗಾ ಪ್ರಸಾದ್ ರೈ, ಡಾ.ಶ್ರೀಧರ್ ಎಚ್ ಜಿ, ಕುಸುಮ ರಾಜ್, ಡಾ.ವಿಜಯಕುಮಾರ್ ಮೊಳೆಯಾರ, ಹಾಜಿ ಅಬೂಬಕರ್ ಆರ್ಲಪದವು, ಬಾಬು ಎಂ, ಸುಬ್ಬಪ್ಪ ಕೈಕಂಬ, ಶಾಂತಾ ಪುತ್ತೂರು, ಯಶಸ್ವಿನಿ ಪಲ್ಲತ್ತಾರು, ಉದಯಕುಮಾರ್ ಯು ಎಲ್.

ಉದ್ಯಮ ಕ್ಷೇತ್ರ: ದರ್ಬೆ ಯಲ್ಲಿರುವ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದ ಮಾಲಕರಾಗಿರುವ ಇವರು ಕಳೆದ 28 ವರ್ಷದಿಂದ ಶ್ರೀರಾಮ್ ಶೇರ್ ಅಂಡ್ ಫೈನಾನ್ಸಿಯಲ್ ಕನ್ಸಲ್ಟೆಂಟ್ ಎಂಬ ಶೇರು ಉದ್ಯಮವನ್ನು ನಡೆಸುತ್ತಿದ್ದಾರೆ. ಪುತ್ತೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಕಾರ್ಯಕಾರಿಣಿ ಸಮಿತಿಯ ಸಕ್ರಿಯ ಸದಸ್ಯರಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರ: ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಇದರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿ ಕೇಂದ್ರ ಯಶಸ್ ಇದರ ಸಂಚಾಲಕರಾಗಿ,ರೋಟರಿ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್- ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ ಇದರ ಸಂಚಾಲಕರಾಗಿಯೂ, ಬೀರಮಲೆ ಯಲ್ಲಿರುವ ಪ್ರಜ್ಞಾಶ್ರಮ ಇದರ ವಿಶ್ವಸ್ತ ಮಂಡಳಿಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರ: ರೋಟರಿ ಕ್ಲಬ್ ಪುತ್ತೂರು ಯುವ ಇದರ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಇತರ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಪ್ರಸ್ತುತ ಝೋನಲ್ ಲೆಫ್ಟಿನೆಂಟ್ ಆಗಿರುತ್ತಾರೆ. 2020-21 ರಲ್ಲಿ 14 ಮಂದಿ ಅನಾಥ ನಿರ್ಗತಿಕರನ್ನು ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಮೂವರು ಎಚ್.ಐ.ವಿ ಪೀಡಿತ ಮಕ್ಕಳನ್ನು ಎಚ್.ಐ.ವಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದ್ದಾರೆ. ಮಣಿಪಾಲದ ಪ್ಯಾರಾ ಒಲಂಪಿಕ್ ಅಂತರಾಷ್ಟ್ರೀಯ ಈಜುಗಾರ್ತಿ ಅರ್ಚನ ಜೈ ವಿಟ್ಟಲ್, ಮೈಸೂರಿನ ಕೀಪ್ಯಾಡ್ ಕಲಾವಿದ ಗಣೇಶ್ ಭಟ್ ಹಾಗೂ ಸಹೋದರ ಲಿಮ್ಕಾ ದಾಖಲೆ ಸುರೇಶ್ ನಾಯಕ್ ಸೇರಿದಂತೆ ಮೂವರು ವಿಕಲಚೇತನ ಪ್ರತಿಭೆಗಳನ್ನು ವಿಶ್ವ ಅಂಗವಿಕಲರ ದಿನಾಚರಣೆಯ ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಹೋದರ ಸುರೇಶ್ ನಾಯಕ್ ಜೊತೆ ದೇಶದಾದ್ಯಂತ 500ಕ್ಕೂ ಅಧಿಕ ಉಚಿತ ಜಾದು ಪ್ರದರ್ಶನ ನೀಡಿ ಬುದ್ಧಿಮಾಂದ್ಯತೆ ಹಾಗೂ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಮೂಡಿಸಿದ್ದಾರೆ. ಈ ಸೇವೆಗಾಗಿ 2021 Rotary Unsung Hero ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಹಿತ್ಯ ಕ್ಷೇತ್ರ: ಇವರು ಉದಯೋನ್ಮುಖ ಯುವ ಕವಿಯಾಗಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣ ಸಂಗ್ರಹದ ಸ್ವಯಂಭೂ ಮಹಾಲಿಂಗೇಶ್ವರ ಎಂಬ ಕೃತಿಯನ್ನು ರಚಿಸಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ಇದು ಪ್ರಕಟಗೊಂಡಿರುತ್ತದೆ. ಕನಸಿನ ಕವನಾಮೃತ ಮತ್ತು ಮನಸ್ಸಿನ ಭಾವಾಮೃತ ಎಂಬ ಎರಡು ಕವನ ಸಂಕಲನ ಗಳನ್ನು ರಚಿಸಿರುತ್ತಾರೆ. ಭಕ್ತಿಗೀತೆಗಳ ೩ ಧ್ವನಿ ಸುರುಳಿಗಳನ್ನು ರಚಿಸಿರುತ್ತಾರೆ. ಇವುಗಲ್ಲಿ ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದಲ್ಲಿ ಲಿಂಗರೂಪಿ ಎಂಬ ಭಕ್ತಿಗೀತೆಗಳ ಧ್ವನಿ ಸುರುಳಿ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಕುರಿತಾದ ಸ್ವಯಂಭೂ ಮಹಾಲಿಂಗೇಶ್ವರ ಎಂಬ ಭಕ್ತಿಗೀತೆಗಳ ಧ್ವನಿಸುರಳಿ, ಡಾ ಹರ್ಷಕುಮಾರ್ ರೈ ನಿರ್ದೇಶನದಲ್ಲಿ ಅ ಕ್ಷೇತ್ರ ಗಾನವೈಭವ ಎಂಬ ಭಕ್ತಿಗೀತೆಗಳ ಧ್ವನಿಸುರಳಿ ರಚನೆಯಾಗಿ ಕಳೆದ ಐದು ವ?ಗಳಿಂದ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾಗಿರುತ್ತಾರೆ.

ಕಾರ್ಯದರ್ಶಿ ಹರಿಣಿ ಪುತ್ತೂರಾಯ
MSc,MBA ಪದವೀಧರೆಯಾದ ಇವರು ಕಳೆದ 21 ವರುಷಗಳಿಂದ ಶೈಕ್ಷಣಿಕ ಕ್ಷ್ಮೇತ್ರದಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಸುಳ್ಯ ಕೆ.ವಿ. ಜಿ ಸಮೂಹ ಸಂಸ್ಥೆಗಳಲ್ಲಿ ಒಂದಾದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಸಾಹಿತ್ಯ ದಲ್ಲಿ ಅಪಾರ ಆಸಕ್ತಿ ಇರುವ ಇವರು ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.ಜೇಸಿಐ, ರೋಟರಿ ಕ್ಲಬ್ ಗಳ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರಾಗಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ.

ಹರಿಣಿ ಪುತ್ತೂರಾಯ

ಕೋಶಾಧ್ಯಕ್ಷ -ಡಾ ಹರ್ಷ ಕುಮಾರ್ ರೈ
ಪುತ್ತೂರು ತಾಲೂಕಿನ ಮಾಡಾವಿನವರಾದ ಇವರು ,ವೃತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿನ್ಯಾಸಗಾರರು,ಮಂಗಳೂರಿನ ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕ ರಾಗಿದ್ದಾರೆ. ಜನ್ಮ ಫೌಂಡೇಶನ್ ಟ್ರಸ್ಟ್ ಇದರ ಮೂಲಕ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದಾರೆ. ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕನ್ನಡ ಭಾಷೆ -ಕಲೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಹಲವು ಕಿರುಚಿತ್ರಗಳನ್ನು ನಿರ್ಮಿಸಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ ಕನ್ನಡ ಭಕ್ತಿಗೀತೆಗಳ ಧ್ವನಿಮುದ್ರಿಕೆಗಳನ್ನು ನಿರ್ಮಾಣ ಮಾಡಿ ಅಂತರರಾಷ್ಟ್ರೀಯಮಟ್ಟದಲ್ಲಿ ಬಿಡುಗಡೆ ಮಾಡಿಸಿ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.

 

ಡಾ.ಹರ್ಷ ಕುಮಾರ್ ರೈ

ಕಾರ್ಯದರ್ಶಿ- ಡಾ ಪೀಟರ್ ವಿಲ್ಸನ್ ಪ್ರಭಾಕರ್
ಎಂ.ಎ, ಪಿ ಎಚ್ ಡಿ ಪದವೀಧರರಾದ ಇವರು ಪುತ್ತೂರಿನಲ್ಲಿ ನಡೆದ 18ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಸುದಾನ ಶಾಲೆಯಲ್ಲಿ ಕಾರ್ಯದರ್ಶಿಯಾಗಿ ಸುದಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸುಮಾರು ೨೭ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ಇರುವರು 1983 ರಲ್ಲಿ ನವ ಭಾರತದಲ್ಲಿ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಇಂದಿಗೆ 500ಕ್ಕೂ ಅಧಿಕ ಲೇಖನಗಳನ್ನು ಪತ್ರಿಕೆಯಲ್ಲಿ ನೀಡಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದ ಮೂಲಕ ಪಿಎಚ್ಡಿ ಮಾಡುವ ಅಧ್ಯಾಪಕರುಗಳಿಗೆ ಮಾರ್ಗದರ್ಶಕರಾಗಿದ್ದಾರೆ. ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ೨೫೦ಕ್ಕೂ ಅಧಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ ಅನುಭವ ಇವರದು.

ಡಾ ಪೀಟರ್ ವಿಲ್ಸನ್ ಪ್ರಭಾಕರ್

LEAVE A REPLY

Please enter your comment!
Please enter your name here