ದೆಹಲಿಯ ಆರ್.ಡಿ ಪೆರೇಡ್‌ನಲ್ಲಿ ಭಾಗಿಯಾಗಿ ಹಿಂತಿರುಗಿದ ಫಿಲೋಮಿನಾದ ಕಿರಣ್‌ರವರಿಗೆ ಸ್ವಾಗತ-ಸನ್ಮಾನ

0

ಪುತ್ತೂರು: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯಲ್ಲಿ ನಡೆದ ಪಥ ಸಂಚಲನದಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಡೈರೆಕ್ಟರೇಟಿನಿಂದ ಆಯ್ಕೆಯಾಗಿ ಭಾಗವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿ ಮತ್ತು ಎನ್‌ಸಿಸಿ ಕೆಡೆಟ್ ಆಗಿರುವ ಜ್ಯೂನಿಯರ್ ಅಂಡರ್ ಆಫೀಸರ್ ಕಿರಣ್‌ರವರಿಗೆ ಕಾಲೇಜಿನ ವತಿಯಿಂದ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ, ಯಶಸ್ಸು ಅನ್ನುವುದು ಸುಲಭವಾಗಿ ಸಿಗದು. ಶಿಸ್ತು ಮತ್ತು ಪ್ರಯತ್ನದಿಂದಷ್ಟೇ ಸಾಧ್ಯ. ವಿದ್ಯಾರ್ಥಿಗಳ ಗುರಿ ಜ್ಞಾನಾರ್ಜನೆ. ಅದಕ್ಕಾಗಿ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಫಿಲೋಮಿನಾ ಕಾಲೇಜಿನ ಎನ್‌ಸಿಸಿ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಅತ್ತ್ಯುತ್ತಮ ತರಬೇತಿ ಸಿಗುತ್ತಿದೆ. ಪ್ರತಿ ವರ್ಷ ಕಾಲೇಜಿನಿಂದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿರುವುದು ಅಭಿಮಾನ ಪಡಬೇಕಾದ ಸಂಗತಿಯಾಗಿದೆ. ಕಿರಣ್‌ರವರ ಸಾಧನೆ ಕಾಲೇಜಿನ ಕೀರ್ತಿಗೆ ಇನ್ನೊಂದು ವಿಶೇಷ ಗರಿ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಕಿರಣ್‌ರವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು. ಕಾಲೇಜು ಜ್ಞಾನದ ಕೇಂದ್ರ, ವಿದ್ಯೆಯ ದೇಗುಲ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ರಂಗದಲ್ಲಿ ಹಲವಾರು ಗೊಂದಲಗಳನ್ನು ಕಾಣುತ್ತಿರುವುದು ವಿಷಾದನೀಯ. ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ವಿದ್ಯಾರ್ಜನೆ ಮಾಡಬೇಕು. ವದಂತಿಗಳಿಗೆ ಕಿವಿ ಕೊಡಬಾರದು. ಕಾಲೇಜಿನ ಶಿಸ್ತು ಮತ್ತು ನಿಬಂಧನೆಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ನೂತನ ಉಪ ಪ್ರಾಂಶುಪಾಲರಾಗಿ ನೇಮಕಗೊಂಡ ಪ್ರೊ|ದಿನಕರ ರಾವ್‌ರವರನ್ನು ಅಭಿನಂದಿಸಲಾಯಿತು. ಕಿರಣ್ ಅವರ ತಂದೆ ಕೇಶವ ನಾಯಕ್, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಉಪನ್ಯಾಸಕ ಪ್ರೊ|ಪ್ರಶಾಂತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಎನ್‌ಸಿಸಿ ಘಟಕದ ಅಧಿಕಾರಿ ಲೆ|ಜೋನ್ಸನ್‌ಡೆವಿಡ್ ಸಿಕ್ವೆರಾ ಕಾರ್ಯಕ್ರಮವನ್ನು ಸಂಘಟಿಸಿದರು.

ಪ್ರತಿ ಡೈರೆಕ್ಟರೇಟ್‌ನಿಂದ 57ಕೆಡೆಟ್..
ಭಾರತದಲ್ಲಿ ಒಟ್ಟು 17 ಡೈರೆಕ್ಟರೇಟ್ ಎನ್.ಸಿ.ಸಿ ಘಟಕಗಳಿದ್ದು ಅದರಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಒಂದು. ವಿವಿಧ ಭಾಗಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಮಂದಿಯಲ್ಲಿ ಮಂಗಳೂರು ಗ್ರೂಪಿನ `೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ’ಯಲ್ಲಿ ಕಿರಣ್‌ರವರು ಓರ್ವರಾಗಿದ್ದರು. ಭಾರತದಲ್ಲಿ ಸುಮಾರು ೧೩ ಲಕ್ಷಕ್ಕೂ ಅಧಿಕ ಕೆಡೆಟ್‌ಗಳಿದ್ದು ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು ೨೩೦೦ಕ್ಕೂ ಮಿಕ್ಕಿ ಕೆಡೆಟ್‌ಗಳು ಮಾತ್ರ ಪೆರೇಡ್‌ನಲ್ಲಿ ಭಾಗವಹಿಸಲು ಅವಕಾಶ ಪಡೆಯಲು ಅರ್ಹರಾಗಿದ್ದರು ಮತ್ತು ಪ್ರತೀ ವರ್ಷ ಡೈರೆಕ್ಟರೇಟ್‌ನಿಂದ ೧೧೧ ಕೆಡೆಟ್‌ಗಳು ನವದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದರು. ಆದರೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ೫೭ ಕೆಡೆಟ್‌ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಲಭಿಸಿರುತ್ತದೆ. ಕಿರಣ್‌ರವರು ಕೇವಲ ೩೦ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಕಲಿತುಕೊಳ್ಳುವ ಮೂಲಕ ಜನವರಿ ೨೭ ರಂದು ನಡೆಯುವ ಪ್ರಧಾನ ಮಂತ್ರಿ ರ್‍ಯಾಲಿಯ ಸಾಂಸ್ಕೃತಿಕ ವಿಭಾಗದಲ್ಲಿನ ಯಕ್ಷಗಾನದಲ್ಲಿ ಭಾಗವಹಿಸಿರುತ್ತಾರೆ. ಕಿರಣ್‌ರವರು ಮಡಿಕೇರಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಾಂಸ್ಕೃತಿಕ, ಡ್ರಿಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ೭೦ ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here