ಫಿಲೋಮಿನಾ ಕಾಲೇಜಿನಲ್ಲಿ `ಫಿಲೋ ಬೊಳ್ಳಿ’ ಉದ್ಘಾಟನೆ

0

  • ತುಳು ನಮ್ಮ ಸಾಂಸ್ಕೃತಿಕ ಅಸ್ಮಿತೆಯಾಗಿದೆ-ಭಾಸ್ಕರ ರೈ ಕುಕ್ಕುವಳ್ಳಿ

ಪುತ್ತೂರು: ಭಾರತ ಹಲವು ಸಂಸ್ಕೃತಿಗಳ, ಭಾಷೆಗಳ ವೈವಿಧ್ಯಮಯ ನಾಡು. ತುಳು ಪಶ್ಚಿಮ ಕರಾವಳಿ ಭಾಗದ ಒಂದು ಭಾಷೆ. ಇದು ಸಂವಹನಕ್ಕಷ್ಟೇ ಸೀಮಿತವಾಗಿಲ್ಲ. ಈ ನೆಲದ ಅಸ್ಮಿತೆಯಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಮತ್ತು ಜಾನಪದ ವಿದ್ವಾಂಸರಾದ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ಅವರು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಫಿಲೋ ಬೊಳ್ಳಿ ತುಳು ಸಂಘದ ಕಾರ್ಯಚಟುವಟಿಕೆಗಳನ್ನು ಸಾಂಪ್ರದಾಯಿಕ ಬಗೆಯಲ್ಲಿ ತೆಂಗಿನ ಸಿಂಗಾರ ಅರಳಿಸಿ ಉದ್ಘಾಟಿಸುತ್ತಾ ಮಾತನಾಡಿದರು. ತುಳು ಭಾಷೆ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ದಕ್ಷಿಣ ಭಾರತದ ಬೇರೆ ಬೇರೆ ಪ್ರಾಚೀನ ಭಾಷಾ ಪ್ರಬೇಧಗಳಿವೆ. ಅವೆಲ್ಲವುಗಳ ಹಲವು ಪ್ರಭಾವಗಳನ್ನು ತುಳುವಿನಲ್ಲಿಯೂ ಕಾಣಬಹುದು. ಕರಾವಳಿಯ ಪ್ರದೇಶದಲ್ಲಿ ಬೇರೆ ಬೇರೆ ಧರ್ಮ, ಜಾತಿಯವರಿದ್ದರೂ ಅವರೆಲ್ಲರೂ ತುಳುವನ್ನು ಸಂವಹನ ಭಾಷೆಯಾಗಿ ಒಪ್ಪಿಕೊಂಡಿದ್ದಾರೆ. ಹಲವರ ಮನೆ ಮಾತು ತುಳು. ಎಲ್ಲದರಲ್ಲೂ ತುಳು ಭಾಷೆ ಬೆಸೆದಿದೆ. ಹಾಗಾಗಿ ತುಳು ಇಲ್ಲಿಯ ಸಂಸ್ಕೃತಿ. ನೆಲೆದ ಬದುಕಿನ ಪ್ರತೀಕ. ಆದರೆ ಆಧುನಿಕ ಜೀವನದಲ್ಲಿ ತುಳು ಭಾಷೆಯ ಸೊಗಡನ್ನು, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಘಟನಾತ್ಮಕ ಕಾರ್ಯಗಳ ಅಗತ್ಯ ಇದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಸಾಹಿತ್ಯ ಸಾಂಸ್ಕೃತಿಕ ಆಚರಣೆಗಳಿಗೆ ಜಾತಿ ಮತ್ತು ಧರ್ಮದ ಬಂಧನ ಇರಬಾರದು. ಈ ಎಲ್ಲ ಬಂಧನಗಳನ್ನು ಮೀರಿ ನಾವು ಆಲೋಚಿಸುವ ಅಗತ್ಯವಿದೆ. ತುಳು ಭಾಷೆ ಅನ್ನುವುದು ಇದಕ್ಕೆ ಪೂರಕ. ತುಳು ಆಡುವ ನೆಲದಿಂದ ದೂರದ ಇನ್ನೊಂದು ರಾಜ್ಯಕ್ಕೆ, ಅಥವಾ ರಾಷ್ಟ್ರಕ್ಕೆ ಹೋದಾಗ ತುಳುವಿನ ದನಿ ಕೇಳಿದರೆ ಸಾಕು, ಅದು ನೀಡುವ ಖುಷಿಯ ಅನುಭವ ಅನನ್ಯ ಮತ್ತು ಅದು ಭಾಷೆ ನಮಗೆ ಅರಿವಿಲ್ಲದಂತೆ ಮನದ ಆಳದಲ್ಲಿ ಎಷ್ಟು ಆಳವಾಗಿ ನೆಲೆಯಾಗಿರುತ್ತದೆ ಎಂದು ಹೇಳಿ ಸಂಘದ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ತುಳು ಕವಿ ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ತುಳು ಅಭಿಮಾನಿಗಳು ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕಿ \ ದೀಪಿಕಾ ಸನಿಲ್ ಸ್ವಾಗತಿಸಿದರು. ವಾಣಿಜ್ಯ ವ್ಯವಹಾರ ವಿಭಾಗ ಮುಖ್ಯಸ್ಥರಾದ ಡಾ|ರಾಧಾಕೃಷ್ಣ ಗೌಡ ಪ್ರಸ್ತಾವಿಸಿದರು. ತುಳು ಸಂಘದ ವಿದ್ಯಾರ್ಥಿಗಳ ತಂಡ ಪ್ರಾರ್ಥಿಸಿ, ಉಪನ್ಯಾಸಕ ಪ್ರಶಾಂತ್ ರೈ ಮುಂಡಾಳಗುತ್ತು ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ದಿನಕರ ಆಂಚನ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಾಮರಸ್ಯವನ್ನು ಗಟ್ಟಿಗೊಳಿಸುವ ಸಮರ್ಥ ಭಾಷೆ `ತುಳು’…
ತುಳು ಭಾಷೆ ಅತ್ಯಂತ ಶಕ್ತಿಶಾಲಿಯಾದದ್ದು. ಜನಜೀವನದಲ್ಲಿ ಸಹಜವಾಗಿ ಮಿಳಿತಗೊಂಡ ತುಳು ಭಾಷೆ ರಂಗಸ್ಥಳದಲ್ಲಿ ಅದ್ಭುತವಾಗಿ ಪ್ರಕಟಗೊಳ್ಳುತ್ತದೆ. ಹಾಗಾಗಿಯೇ ತುಳು ರಂಗಭೂಮಿ ಆಧುನಿಕ ಕಾಲಘಟ್ಟದಲ್ಲಿ ಇನ್ನೂ ಉಳಿದುಕೊಂಡಿದೆ. ತುಳು ಸಿನೆಮಾ ಮತ್ತು ನಾಟಕಗಳು ಭಾಷೆಯನ್ನು ಉಳಿಸಲು ನೆರವಾಗಿವೆ. ಸಾಮರಸ್ಯದ ಬದುಕು ಸದಾ ಸುಂದರ. ಎಲ್ಲರೂ ಮಾತನಾಡುವ ತುಳು ಅಂಥ ಸಾಮರಸ್ಯವನ್ನು ಗಟ್ಟಿಗೊಳಿಸುವ ಅತ್ಯಂತ ಸಮರ್ಥ ಭಾಷೆಯಾಗಿದೆ. ಸುಂದರ ರೈ ಮಂದಾರ, ಖ್ಯಾತ ರಂಗ ಕಲಾವಿದರು

LEAVE A REPLY

Please enter your comment!
Please enter your name here