ಕಾವು: ನವೋದಯ ಒಕ್ಕೂಟದ ಸದಸ್ಯರಿಗೆ ಉಚಿತ ಜೇನುಪೆಟ್ಟಿಗೆ ವಿತರಣೆ

0

ಶೇ.೧೦೦ ಸಾಲ ವಸೂಲಾತಿಗೆ ಅಭಿನಂದನೆ:
೨೦೨೧-೨೨ನೇ ಆರ್ಥಿಕ ವರ್ಷದಲ್ಲಿ ಸಾಲ ವಸೂಲಾತಿಯಲ್ಲಿ ಶೇ.೧೦೦ ಸಾಧನೆ ಮಾಡಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ತಮ್ಮ ಭಾಷಣದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪರವಾಗಿ ಅಭಿನಂದನೆ ಸಲ್ಲಿಸಿದರು. ತಾಲೂಕಿನ ೧೯ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೇ.೧೦೦ ಸಾಧನೆ ಮಾಡಿದ ತಾಲೂಕಿನ ಏಕೈಕ ಸಂಘವಾಗಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಒಕ್ಕಲುಸಮೇತ ೫೦ ಜೇನುಪೆಟ್ಟಿಗೆ ವಿತರಣೆ:
ಕಾವು ನವೋದಯ ಒಕ್ಕೂಟದ ಒಂದು ಗುಂಪಿಗೆ ಒಂದರಂತೆ ಒಟ್ಟು ೫೦ ಗುಂಪುಗಳಿಗೆ ಒಕ್ಕಲು ಸಮೇತವಾಗಿ ೫೦ ಜೇನುಪೆಟ್ಟಿಗೆ ವಿತರಣೆ ಮಾಡಲಾಯಿತು.

ಕಾವು: ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್‌ರವರ ಹುಟ್ಟುಹಬ್ಬದ ಸಲುವಾಗಿ ಕಾವು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಒಟ್ಟು ೫೦ ಗುಂಪುಗಳಿಗೆ ಉಚಿತ ಜೇನು ಪೆಟ್ಟಿಗೆ ವಿತರಣಾ ಸಮಾರಂಭವು ಎ.೯ರಂದು ಸಂಜೆ ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಡಾ.ಎಂ.ಎನ್ ರಾಜೇಂದ್ರಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಸಲುವಾಗಿ ವೈಯುಕ್ತಿಕ ನೆಲೆಯಲ್ಲಿ ಉಚಿತವಾಗಿ ಜೇನುಪೆಟ್ಟಿಗೆ ವಿತರಣೆ ಮಾಡಲು ಪುತ್ತೂರು ತಾಲೂಕನ್ನು ಆಯ್ಕೆ ಮಾಡಿ ಅದರಲ್ಲೂ ಕಾವು ನವೋದಯ ಒಕ್ಕೂಟವನ್ನು ಆಯ್ಕೆ ಮಾಡಿ ಇವತ್ತು ತಾಲೂಕು ಮಟ್ಟದ ಕಾರ್ಯಕ್ರಮವಾಗಿ ಒಟ್ಟು ೫೦ ಗುಂಪುಗಳಿಗೆ ಒಕ್ಕಲುಸಮೇತವಾಗಿ ೫೦ ಜೇನು ಪೆಟ್ಟಿಗೆ ವಿತರಣೆ ಆಗಿದೆ, ನವೋದಯ ಸದಸ್ಯರುಗಳು ಉಚಿತವಾಗಿ ಪಡೆದುಕೊಂಡಂತ ಒಂದು ಪೆಟ್ಟಿಗೆಯಿಂದ ಇನ್ನೂ ಹೆಚ್ಚಿನ ಪೆಟ್ಟಿಗೆಯಾಗಿ ಪರಿವರ್ತಿಸಿ ಉದ್ಯಮವನ್ನಾಗಿ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಜೇನುಪೆಟ್ಟಿಗೆ ವಿತರಣೆ ಮಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಡಾ. ಎಂ.ಎನ್ ರಾಜೇಂದ್ರ ಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಸಲುವಾಗಿ ನವೋದಯ ಸದಸ್ಯರಿಗೆ ಜೇನುಪೆಟ್ಟಿಗೆ ವಿತರಿಸಬೇಕೆಂದು ತೀರ್ಮಾನಿಸಿದಾಗ ದ.ಕ ಮತ್ತು ಉಡುಪಿ ಜೆಲ್ಲೆಗಳ ಪೈಕಿ ಅತ್ಯುತ್ತಮವಾಗಿ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಕಾವು ನವೋದಯ ಒಕ್ಕೂಟವನ್ನು ಆಯ್ಕೆ ಮಾಡಿ ಇವತ್ತು ೫೦ ಜೇನುಪೆಟ್ಟಿಗೆಯನ್ನು ವಿತರಣೆ ಮಾಡುತ್ತಿದ್ದೇವೆ, ಜತೆಗೆ ಜೇನುಪೆಟ್ಟಿಗೆ ಪಡೆದುಕೊಂಡವರಿಗೆ ಅದರ ನಿರ್ವಹಣೆಯ ಮಾಹಿತಿ ಪಡೆಯಲು ಒಂದು ದಿನದ ಮಾಹಿತಿ ಶಿಬಿರವನ್ನು ನೀಡುವುದಾಗಿ ಹೇಳಿದರು. ಇನ್ನು ಮುಂದೆಯೂ ನವೋದಯ ಸದಸ್ಯರಿಗೆ ಸಹಕಾರ ಸಂಘಗಳ ಮೂಲಕ ನಬಾರ್ಡ್‌ನಿಂದ ಜೆಎಲ್‌ಜಿ ಮೂಲಕ ಒಂದು ಗುಂಪಿಗೆ ರೂ.೨೦ಲಕ್ಷದವರೆಗೆ ಸಾಲ ಪಡೆಯುವ ಅವಕಾಶ ಬರಲಿದೆ ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ.ರವರು ಮಾತನಾಡಿ ನಬಾರ್ಡ್ ಮೂಲಕ ನವೋದಯ ಸದಸ್ಯರಿಗಾಗಿ ಬರಲಿರುವ ಜೆಎಲ್‌ಜಿ ಸ್ಕೀಮ್‌ನ ಬಗ್ಗೆ ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ಒಕ್ಕೂಟದ ಎಲ್ಲಾ ಸದಸ್ಯರಿಗೂ ಪ್ರಯೋಜನ ಸಿಗುವಂತಾಗಲು ನಮ್ಮ ಸಹಕಾರ ನೀಡುವುದಾಗಿ ಹೇಳಿದರು.
ಒಕ್ಕೂಟದ ಮಾಜಿ ಕಾರ್ಯದರ್ಶಿ ಹರಿಣಾಕ್ಷಿ ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡರವರು ಸ್ವಾಗತಿಸಿದರು, ಮಾಜಿ ಅಧ್ಯಕ್ಷ ಚಿದಾನಂದ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here