ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಯುಗಾದಿ ಆಚರಣೆ, ತಪ್ಪಂಗಾಯಿ ಸ್ಪರ್ಧೆ

0


ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ, ಸಾಂಪ್ರದಾಯಿಕ ತಪ್ಪಂಗಾಯಿ ಸ್ಪರ್ಧೆ ಎ.15ರಂದು ನಡೆಯಿತು.

ಬೆಳಿಗ್ಗೆ ಶ್ರೀ ದೇವರಿಗೆ ಕಣಿ ಅರ್ಪಿಸಲಾಯಿತು. ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಬಳಿಕ ಸಾಂಪ್ರದಾಯಿಕ ತಪ್ಪಂಗಾಯಿ ಸ್ಪರ್ಧೆ ಬಾಲಕರಿಗೆ ಮತ್ತು ಸಾರ್ವಜನಿಕರಿಗೆ ನಡೆಯಿತು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯರವರು ವೈದಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರಾದ ವನಜ ಪಲ್ಲಡ್ಕ, ಮೋಹಿನಿ ಪಾನ್ಯಾಲು, ಮುರಳಿಕೃಷ್ಣ ಕೆ ಬಡಿಲ, ಶ್ರೀರಾಮ ಕೆಮ್ಮಾರ, ಮುರಳಿಕೃಷ್ಣ ಬಡಿಲ, ಸಂಜೀವ ಗೌಡ ಕೊನೆಮಜಲು, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬುಡಲೂರು, ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ, ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ದೇವಸ್ಥಾನದ ಕಾರ್ಯದರ್ಶಿ ಭವಿತ್, ಉಪಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗಮನ ಸೆಳೆದ ತಪ್ಪಂಗಾಯಿ ಸ್ಪರ್ಧೆ:

ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಮುಗಿದ ಬಳಿಕ ಬಿಷು ಆಚರಣೆ ಸಂದರ್ಭ ಬಾಲಕರಿಗೆ ಹಾಗೂ ಯುವಕರಿಗೆ ಪ್ರತ್ಯೇಕವಾಗಿ ತಪ್ಪಂಗಾಯಿ ಸ್ಪರ್ಧೆ ಪ್ರತಿ ವರ್ಷ ನಡೆಯುತ್ತದೆ. ಮಹಾಪೂಜೆಯ ಬಳಿಕ ಅರ್ಚಕರು ತೆಂಗಿನಕಾಯಿಯೊಂದಕ್ಕೆ ಪೂಜೆ ನಡೆಸಿ ದೇವಸ್ಥಾನದ ಧ್ವಜಕಂಬದ ಬಳಿ ಮೇಲಕ್ಕೆ ಆರಿಸಿ ಬಿಡುತ್ತಾರೆ. ಇದನ್ನು ಸ್ಪರ್ಧಿಗಳು ಹಾರಿ ಹಿಡಿದು ದೇವಳಕ್ಕೆ ಒಂದು ಸುತ್ತು ಹಾಕಿ ದೇವಳದ ಮೆಟ್ಟಿಲಿಗೆ ಒಡೆಯುವುದು ಸ್ಪರ್ಧೆಯ ನಿಯಮ. ಸ್ಪರ್ಧೆಯಲ್ಲಿ ಗೆದ್ದವನನ್ನು ಆಡಳಿತ ಸಮಿತಿಯಿಂದ ವಿಶೇಷವಾಗಿ ಗೌರವಿಸಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತೆಂಗಿನ ಕಾಯಿ ಹಿಡಿಯಲು ಪ್ರಯತ್ನಿಸುತ್ತಾರೆ ಮತ್ತು ಹಿಡಿದವನಿಂದ ತನ್ನ ವಶಕ್ಕೆ ಪಡೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಾರೆ. ಜಾತ್ರೋತ್ಸವ ಮುಗಿದ ಬಳಿಕ ತಪ್ಪಂಗಾಯಿ ಸ್ಪರ್ಧೆ ಈ ಹಿಂದಿನಿಂದಲೇ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಹೇಳಿದರು.

LEAVE A REPLY

Please enter your comment!
Please enter your name here