ಪೆರಾಬೆ ಗ್ರಾ.ಪಂ.ಅಧ್ಯಕ್ಷತೆಗೆ ಚಂದ್ರಶೇಖರ ರೈ ರಾಜೀನಾಮೆ

0

ಪೆರಾಬೆ: ಕಳೆದ ಒಂದು ವರ್ಷಗಳಿಂದ ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಚಂದ್ರಶೇಖರ ರೈ ಅಗತ್ತಾಡಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ವೈಯಕ್ತಿಕ ಕಾರಣ ನೀಡಿ ಚಂದ್ರಶೇಖರ ರೈಯವರು ಅಧ್ಯಕ್ಷ ಸ್ಥಾನಕ್ಕೆ ಮಾ.೯ರಂದು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದು ಅವರ ರಾಜೀನಾಮೆಯು ಅಂಗೀಕಾರಗೊಂಡಿದೆ. ಚಂದ್ರಶೇಖರ ರೈಯವರು 2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪೆರಾಬೆ ಗ್ರಾಮ ಪಂಚಾಯಿತಿಗೆ ಕುಂತೂರು 1ನೇ ವಾರ್ಡ್ನ ಸಾಮಾನ್ಯ ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪಧಿಸಿ ಚುನಾಯಿತರಾಗಿದ್ದರು. ಆ ಬಳಿಕ ಫೆ.18, 2021ರಂದು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಪೆರಾಬೆ ಗ್ರಾ.ಪಂ.ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಚಂದ್ರಶೇಖರ ರೈಯವರ ಅಧಿಕಾರದ ಅವಧಿ ಎರಡೂವರೇ ವರ್ಷವಾಗಿದ್ದರೂ ಅವರು 1 ವರ್ಷದ ಅವಧಿಯಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉದ್ಯಮ ಹಾಗೂ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿಯಾಗಿರುವ ಚಂದ್ರಶೇಖರ ರೈಯವರು ಸತತ ೫ ಬಾರಿ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಇವರು ನಿರಂತರ ೨೫ ವರ್ಷಗಳಿಂದ ಪೆರಾಬೆ ಗ್ರಾ.ಪಂ.ನ ಸದಸ್ಯರಾಗಿದ್ದಾರೆ. ಈ ಹಿಂದೆ ಎರಡೂವರೇ ವರ್ಷ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದರು. ಇದೀಗ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವುಗೊಂಡಿದ್ದು ಮೇ ೫ರಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕೆಲಸದ ಒತ್ತಡ;
ಕಳೆದ ೧ ವರ್ಷಗಳಿಂದ ಗ್ರಾ.ಪಂ.ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದು ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಉದ್ಯಮ ಕ್ಷೇತ್ರದಲ್ಲೂ ತೊಡಗಿಕೊಂಡಿರುವುದರಿಂದ ಹಾಗೂ ಇತರೇ ವೈಯಕ್ತಿಕ ಕೆಲಸಗಳ ಒತ್ತಡದಿಂದ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾ.೯೯ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸದಸ್ಯನಾಗಿ ಮುಂದುವರಿಯುತ್ತೇನೆ ಎಂದು ಚಂದ್ರಶೇಖರ ರೈಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here