ಮೇ.1: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಅಮೃತ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ

0

  • ನಿರಂತರ ಕಾರ್‍ಯಕ್ರಮಗಳ ಆಯೋಜನೆ
  • ಡಿಸೆಂಬರ್ ತಿಂಗಳಿನಲ್ಲಿ ಸಮಾರೋಪ ಸಮಾರಂಭ


ಉಪ್ಪಿನಂಗಡಿ: “ಸಹಕಾರಿ ಟೌನ್ ಬ್ಯಾಂಕ್ ಉಪ್ಪಿನಂಗಡಿ” ಎಂಬ ಹೆಸರಿನೊಂದಿಗೆ ನಗದು ವ್ಯವಹಾರಗಳನ್ನು ನಡೆಸುವ ಸಂಸ್ಥೆಯಾಗಿ 1947ರಲ್ಲಿ ಸ್ಥಾಪನೆಗೊಂಡ ಸಂಘವು ಅಧಿಕೃತ ರೂಪ ಪಡೆದುಕೊಂಡು 2022 ಈ ವರ್ಷ ಅಮೃತ ಮಹೋತ್ಸವದ ವರ್ಷಾಚರಣೆ “ಅಮೃತ ಸಂಗಮ” ನಡೆಯಲಿದ್ದು, ಇದರ ಉದ್ಘಾಟನೆ ಮೇ.1ರಂದು ಜರಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಕಾಯರ್ಪಾಡಿ ತಿಳಿಸಿದರು.

ಎ. 27ರಂದು ಸಂಘದ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು ಸಂಘದ ವಲಯದಲ್ಲಿ ಒಳಗೊಂಡಿರುವ 5 ಗ್ರಾಮಗಳ ಆಸಕ್ತ ಸಾರ್ವಜನಿಕರನ್ನು, ಸಹಕಾರಿಗಳನ್ನು, ಚುನಾಯಿತ ಜನ ಪ್ರತಿನಿಧಿಗಳನ್ನು ಸಂಘಟಿಸಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಗೌರವಾಧ್ಯಕ್ಷತೆಯಲ್ಲಿ ಅಮೃತಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ. ಆ ಮೂಲಕ ಸಂಘದ ಈ ಸುದೀರ್ಘ ಇತಿಹಾಸವನ್ನು ದಾಖಲಿಸುವ ಪ್ರಯತ್ನ ನಡೆಸಲಿದ್ದೇವೆ ಎಂದು ತಿಳಿಸಿದರು.

ಹಿರಿಯ ಕಾರ್ಯಕರ್ತರ, ಸಹಕಾರಿಗಳ ಪಾಲ್ಗೊಳ್ಳುವಿಕೆಯಲ್ಲಿ ಅನೇಕ ರಚನಾತ್ಮಕ ಕಾರ್ಯಗಳು ನಡೆಯಲಿವೆ. ಸಂಘದ ವ್ಯಾಪ್ತಿಯಲ್ಲಿರುವ ಉಪ್ಪಿನಂಗಡಿ, ಇಳಂತಿಲ, ಹಿರೇಬಂಡಾಡಿ, ಬಜತ್ತೂರು ಮತ್ತು 34-ನೆಕ್ಕಿಲಾಡಿ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಕೃಷಿಕರಿಗಾಗಿ, ಯುವ ಕೃಷಿಕರಿಗಾಗಿ, ಕೃಷಿ ಆಧಾರಿತ ಉದ್ಯಮಿಗಳಿಗಾಗಿ, ವಿಶೇಷ ಅರಿವು ಮೂಡಿಸುವ ವಿಚಾರ ಸಂಕಿರಣ, ಪ್ರ್ರಾತ್ಯಕ್ಷಿಕ ತರಬೇತಿ, ಸ್ಪರ್ಧೆ, ಸನ್ಮಾನ, ಪುರಸ್ಕಾರ, ಕ್ರೀಡೋತ್ಸವ, ಆರೋಗ್ಯ ಶಿಬಿರ ಮೊದಲಾದ ವಿವಿಧ ಬಗೆಯ ಕಾರ್ಯಕ್ರಮಗಳು ವರ್ಷ ಪೂರ್ತಿ ನಡೆಯಲಿವೆ ಎಂದು ವಿವರಿಸಿದರು.

ಸಹಕಾರಿ ರಂಗದ ವಿವಿಧ ಆಯಾಮಗಳನ್ನು ಕುರಿತು ನಾಡಿನ ನುರಿತ ಬರಹಗಾರರ ಲೇಖನಗಳನ್ನು ಒಳಗೊಂಡ “ಅಮೃತ ಸಂಗಮ” ಸ್ಮರಣ ಸಂಚಿಕೆ ಹೊರ ತರಲಿದ್ದು, ಸಂಘದ ಇತಿಹಾಸ, ಸಹಕಾರಿ ರಂಗವನ್ನು ಕುರಿತು ಚಿಂತನೆಗಳು, ನೆನಪಿನ ಚಿತ್ರ, ಸಂಪುಟ ಈ ಗ್ರಂಥದಲ್ಲಿ ಇರಲಿದೆ ಎಂದರು.

ಉದ್ಘಾಟನಾ ಸಮಾರಂಭ:
ಮೇ. 1ರಂದು ಬೆಳಿಗ್ಗೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಸಂಕೀರ್ಣದಿಂದ ಸಂಘದ ಸಂಗಮ ಕೃಪಾ ಸಭಾಭವನದವರೆಗೆ ಭವ್ಯವಾದ “ಅಮೃತ ಸಂಗಮ ಸಹಕಾರಿ ಮೆರವಣಿಗೆ” ನಡೆಯಲಿದೆ. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಕಾರ್‍ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು, ಭಾರತ ಸರಕಾರದ ಪದ್ಮಶ್ರೀ ಪುರಸ್ಕೃತರಾದ ಕೃಷಿ ಪಂಡಿತ ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್ ಉಪಸ್ಥಿತರಿರುತ್ತಾರೆ.

ಉದ್ಘಾಟನಾ ಸಮಾರಂಭದ ಬಳಿಕ ಅಮೃತ ಸಂಗಮ ವಿಚಾರಗೋಷ್ಠಿಗಳಲ್ಲಿ ಪ್ರಥಮವಾಗಿ ಕೃಷಿ ವಿಚಾರ ಸಂಗಮ ನಡೆಯಲಿದ್ದು, ವಿಟ್ಲದಲ್ಲಿರುವ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆಯ ವಿಜ್ಞಾನಿ ಡಾ| ಭವಿಷ್ಯ ಹಾಗೂ ಅದೇ ಸಂಸ್ಥೆಯ ತಾಂತ್ರಿಕ ಅಧಿಕಾರಿ ಪುರಂದರ ಸಿ. ಸಂಪನ್ಮೂಲ ವ್ಯಕ್ತಿಯಾಗಿ “ಅಡಿಕೆಯೊಂದಿಗೆ ಬಹುಬೆಳೆ ಕೃಷಿ ಪದ್ಧತಿ” ಮತ್ತು ಅದರ ನಿರ್ವಹಣೆ, “ಬೋರ್ಡೋ ದ್ರಾವಣ ತಯಾರಿಕೆ” ವಿಷಯಗಳನ್ನು ಕುರಿತು ಉಪನ್ಯಾಸ ತರಬೇತಿಯನ್ನು ನೀಡಲಿದ್ದಾರೆ. ಕಾರ್‍ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಕೊಡ ಮಾಡಲಾದ 2 ಟ್ಯಾಕ್ಟರ್‌ನ್ನು ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.

ವಾರ್ಷಿಕ 846ಕೋಟಿ ರೂಪಾಯಿ ವ್ಯವಹಾರ ನಡೆಸಿ, ಅಂದಾಜು ರೂ. 2.50 ಕೋಟಿ ಲಾಭದೊಂದಿಗೆ ಸಂಘವು ಕೃಷಿಯೇತರ ಉದ್ದೇಶದ ಗೃಹ ನಿರ್ಮಾಣ, ವಾಹನ ಖರೀದಿ, ಚಿನ್ನಾಭರಣ ಸಾಲ, ಗೃಹೋಪಯೋಗಿ ವಸ್ತು ಖರೀದಿ ಸಾಲ, ಇತರ ಉದ್ದೇಶದ ಸಾಲಗಳನ್ನು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ನೀಡುತ್ತಿದೆ ಹಾಗೂ ರಸಗೊಬ್ಬರ, ಕೀಟನಾಶಕ, ಕ್ರಿಮಿನಾಶಕ, ಕೃಷಿ ಸಲಕರಣೆಗಳು ಮತ್ತು ಪಡಿತರ ವಿತರಣೆ ವ್ಯವಹಾರ ನಡೆಸುತ್ತಿದೆ. ಜಿಲ್ಲೆಯಲ್ಲೇ ಉತ್ತಮ ಸಾಧನೆಯನ್ನು ದಾಖಲಿಸಿರುವ ನಮ್ಮ ಸಂಘದ ಅಮೃತಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ, ಎಲ್ಲರ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

ಸಮಾರೋಪ ಸಮಾರಂಭ:
ಅಮೃತಮಹೋತ್ಸವ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮವು ಇದೇ ದಶಂಬರ್ ತಿಂಗಳಲ್ಲಿ ನಡೆಸಲು ಯೋಜನೆಯನ್ನು ಮಾಡಲಾಗಿದೆ. ಈ ವೇಳೆಯಲ್ಲಿ ಅಂದಾಜು ರೂ. 2.25ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಗೋದಾಮು ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು. ನೂತನವಾಗಿ ಆರಂಭಿಸಲಿರುವ ಜನತಾ ಮಾರುಕಟ್ಟೆಯನ್ನು ಉದ್ಘಾಟಿಸುವ ಬಗೆಗೂ ಸಿದ್ದತೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಸ್ವಾಗತ ಸಮಿತಿ ಸಂಚಾಲಕ ಚಂದ್ರಶೇಖರ ತಾಳ್ತಜೆ, ಪ್ರಚಾರ ಸಮಿತಿ ಸಂಚಾಲಕ ಜಯಂತ ಪೊರೋಳಿ, ಮಾಜಿ ಅಧ್ಯಕ್ಷರಾದ ಪೆಲಪ್ಪಾರು ವೆಂಕಟರಮಣ ಭಟ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು, ಸಂಘದ ನಿರ್ದೇಶಕರಾದ ಜಗದೀಶ ರಾವ್ ಬೊಳ್ಳಾವು, ಸುಜಾತ ರೈ, ರಾಮ ನಾಯ್ಕ್, ಕುಂಞ, ಧರ್ಣಪ್ಪ ನಾಯ್ಕ್, ದಯಾನಂದ ಸರೋಳಿ, ಸಚಿನ್ ಉಪಸ್ಥಿತರಿದ್ದರು. ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here