`94ಸಿ, ಅಕ್ರಮ ಸಕ್ರಮ ಅರ್ಜಿಗಳು ಗ್ರಾ.ಪಂ. ಪರಿಶೀಲನೆಗೆ ಒಳಪಡಬೇಕು’-ಕಡಬದಲ್ಲಿ ಕಡತ ವಿಲೇವಾರಿ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಸೂಚನೆ

0

ಕಡಬ: ಅಕ್ರಮ ಸಕ್ರಮ, 94 ಸಿ ಅರ್ಜಿಗಳು ಇನ್ನುಮುಂದೆ ಕಡ್ಡಾಯವಾಗಿ ಗ್ರಾ.ಪಂ ಗಳ ಪರಿಶೀಲನೆಗೆ ಒಳಪಟ್ಟು ಗ್ರಾ.ಪಂ ಹಂತದಲ್ಲೇ ಅರ್ಜಿಗಳು ಮಂಜೂರಾತಿಗೆ ಯೋಗ್ಯವಾಗಿವೆಯೇ ಎಂದು ನಿರ್ಧಾರವಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿದ್ದಾರೆ.

 

ಅವರು ಶುಕ್ರವಾರ ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಕಡತ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮಕರಣಿಕರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಗ್ರಾಮದ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಗ್ರಾಮ ಪಂಚಾಯಿತಿಗೆ ಗ್ರಾಮದಲ್ಲಿನ ಸರಕಾರಿ ಜಾಗಗಳ ಸಂಪೂರ್ಣ ಮಾಹಿತಿ ಇರಬೇಕು, ಹಾಗೂ ಅದರ ರಕ್ಷಣೆ ಪಂಚಾಯಿತಿಯದ್ದಾಗಿರುತ್ತದೆ. ಅದೇ ರೀತಿ ೯೪ ಸಿ ಹಾಗೂ ಅಕ್ರಮ-ಸಕ್ರಮ ಅರ್ಜಿಗಳು ಗ್ರಾಮ ಪಂಚಾಯಿತಿಗಳ ಅವಗಾಹನೆಗೆ ಬಂದು ಕಡತಗಳು ಮತ್ತೆ ಮುಂದುವರಿಯಬೇಕು, ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಮಾಹಿತಿಯ ಪಟ್ಟಿ ಗ್ರಾಮ ಪಂಚಾಯಿತಿ ಬಳಿ ಇರಬೇಕು. ಹಾಗೆ ಬಂದ ಅರ್ಜಿಗಳು ಮಂಜೂರಾತಿಗೆ ಯೋಗ್ಯವಾಗಿದೆಯೇ ಎನ್ನುವುದನ್ನು ಪಂಚಾಯಿತಿ ನಿರ್ಧರಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾನೆಯೆ?, ಮನೆ ತೆರಿಗೆ ಪಾವತಿಸಿದ್ದಾನೆಯೆ?, ವಿದ್ಯುತ್ ಬಿಲ್ ಪಾವತಿಸಿದ್ದಾನೆಯೆ?, ಮುಂತಾದ ನಿಯಮಾವಳಿಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು, ಈಗಾಗಲೇ ೯೪ ಸಿ ಯಲ್ಲಿ ಹಕ್ಕು ಪಡೆದವರಲ್ಲಿ ಕೆಲವರಿಗೆ ಬೋಗಸ್ ಆಗಿ ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನುವ ದೂರು ಬಂದಿವೆ. ಹಾಗೂ ಇತ್ತೀಚೆಗೆ ನೀಡಿರುವ ಅರ್ಜಿಗಳಂತು ಬಹುತೇಕ ಬೋಗಸ್ ಇವೆ ಆದ್ದರಿಂದ ಅರ್ಹರಿಗೆ ಮಾತ್ರ ಹಕ್ಕುಪತ್ರ ದೊರೆಯುವಂತಾಗಲು ಗ್ರಾ.ಪಂ ನಿರಾಕ್ಷೇಪಣಾ ಪತ್ರ ನೀಡಬೇಕು. ಹಾಗೂ ಅಕ್ರಮ ಸಕ್ರಮದಡಿಯಲ್ಲಿ ಕೂಡಾ ಕಾನೂನು ಬಾಹಿರವಾಗಿ ಹಕ್ಕು ಪತ್ರ ನೀಡಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅದರ ಅರ್ಜಿಗಳು ಹಾಗೂ ಈಗಾಗಲೇ ಮಂಜೂರಾಗಿರುವ ಭೂಮಿಯ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಪರಿಶೀಲನೆಗೆ ಒಳಗಾಗಬೇಕು, ಒಂದು ಅಕ್ರಮ ಸಕ್ರಮ ಮಂಜೂರಾತಿ ನಡೆಸುವಾಗ ಕಂದಾಯ ಇಲಾಖೆಯವರು ಅಲ್ಲಿ ರಸ್ತೆ, ದಾರಿ ಇರುವ ಬಗ್ಗೆ ನಮೂದಿಸಬೇಕು, ಆ ಭೂಮಿಯ ಅಕ್ಕ ಪಕ್ಕದ ಜನರಿಗೆ ಅನುಕೂಲವಾಗುವಂತೆ ಕನಿಷ್ಟ ೮ ಅಡಿ ಕಾಲು ದಾರಿ ನಮೂದಿಸಬೇಕು ಹಾಗಾದಾಗ ದಾರಿ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಈ ವಿಚಾರದಲ್ಲಿ ವಿಎ ಹಾಗೂ ಪಿಡಿಒಗಳು ರಾಜಿ ಮಾಡಿಕೊಳ್ಳುವಂತಿಲ್ಲ. ಈ ಎಲ್ಲಾ ಕಾರ್ಯಗಳನ್ನು ಇನ್ನು ಒಂದು ತಿಂಗಳಲ್ಲಿ ಮಾಡಿ ವರದಿ ನೀಡಬೇಕು, ಇನ್ನು ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡುವುದು ನಿಲ್ಲಬೇಕು ಇದಕ್ಕೂ ಮೀರಿ ಭೂಮಿ ಮಂಜೂರು ಮಾಡಿದರೆ ಅಂತಹ ವಿಎಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ವಿ.ಎ., ಪಿಡಿಒ ದಿನಚರಿ ನಾಮಫಲಕದಲ್ಲಿರಲಿ: ಕಂದಾಯ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಗ್ರಾಮ ಕರಣಿಕರ ಕಾರ್ಯ ಮಹತ್ತರವಾದುದು, ಅವರು ವಾರಕ್ಕೆ ಕನಿಷ್ಠ ಮೂರು ದಿನವಾದರೂ ಗ್ರಾಮದ ಕಚೇರಿಯಲ್ಲಿರಬೇಕು, ವಿಎ ಗಳ ಅನುಪಸ್ಥಿತಿಯಲ್ಲಿ ಗ್ರಾಮ ಸೇವಕರಾದರೂ ಹಾಜರಿರಬೇಕು, ಗ್ರಾಮಕರಣಿಕರು ಕಛೇರಿಯಲ್ಲಿರುವ ಮಾಹಿತಿಯನ್ನು ನಾಮಫಲಕದಲ್ಲಿ ನಮೂದಿಸಬೇಕು. ಇದು ಗ್ರಾಮ ಪಂಚಾಯಿತಿಗಳಲ್ಲಿ ಕೂಡಾ ಕಡ್ಡಾಯವಾಗಿದೆ ಆ ಮೂಲಕ ಗ್ರಾಮಕರಣಿಕರು ಹಾಗೂ ಗ್ರಾ.ಪಂ ಪಿಡಿಒಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದಾಗ ಜನರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಪ್ಲಾಟಿಂಗ್ ಅರ್ಜಿ-ಮೇ ಅಂತ್ಯದೊಳಗೆ ವಿಲೇವಾರಿ: ಪ್ಲಾಟಿಂಗ್ ಸಮಸ್ಯೆ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಯವರು ಮೇ ಅಂತ್ಯದ ಒಳಗೆ ಪ್ಲಾಟಿಂಗ್‌ಗೆ ಬಂದ ಅರ್ಜಿಗಳನ್ನು ವಿಲೆವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸವಣೂರು ಗ್ರಾಮ ಪಂಚಾಯಿತಿ ಪಿಡಿಒ ನಾರಾಯಣ ಗೌಡ ಮಾತನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೆಂಚನಕೆರೆ ಯನ್ನು ಒತ್ತುವರಿ ಮಾಡಿಕೊಂಡು ವ್ಯಕ್ತಿಯೊಬ್ಬರು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ, ಇದನ್ನು ತೆರವುಗೊಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಸಿಡಿಮಿಡಿಗೊಂಡ ಡಿಸಿಯವರು ಅಲ್ಲಿನ ವಿಎ ಹಾಗೂ ಇತರ ಕಂದಾಯ ಅಧಿಕಾರಿಗಳ ವಿರುದ್ದ ಚಾರ್ಜ್ ಮಾಡಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಅದನ್ನು ಕೆರೆಯಾಗಿ ಉಳಿಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ಆದೇಶ ಮಾಡಿದರು.

ಕೋವಿಡ್ ನಾಲ್ಕನೇ ಅಲೆ ವಕ್ಕರಿಸುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಪಡೆಯುವಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಸೂಚಿಸಿದರು.

ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್‌ನಂದನ್, ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ, ಭೂದಾಖಲೆಗಳ ಜಿಲ್ಲಾ ಉಪನಿರ್ದೆಶಕ ನಿರಂಜನ್ ಉಪಸ್ಥಿತರಿದ್ದರು. ಕಡಬ ತಹಸೀಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಕಡಬ ಉಪತಹಸೀಲ್ದಾರ್‌ಗಳಾದ ನವ್ಯಾ, ಕೆ.ಟಿ.ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಮಗತ್ತ್‌ಮಲೆ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಭೂದಾಖಲೆಗಳ ಸಹಾಯಕ ನಿರ್ದೆಶಕಿ ರಮಾ ದೇವಿ, ಕಡಬ ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ. ಪಕೀರ ಮೂಲ್ಯ, ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಜನರಿಗೆ ತೊಂದರೆಯಾಗುವ ಕೆಲಸ ಮಾಡಿದರೆ ಅಮಾನತು
ಅಧಿಕಾರಿಗಳು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತವರನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಸೇರಿ ಎಲ್ಲಾ ಕಂದಾಯ ಅಧಿಕಾರಿಗಳಿಗೆ ಕ್ಲಾಸ್ ತಗೊಂಡ ಜಿಲ್ಲಾಧಿಕಾರಿಯವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹೋದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದರು.

ಗೇರು ನಿಗಮದ ಲೀಸ್ ಜಮೀನಿನಲ್ಲಿ ಮಾಜಿ ಸೈನಿಕರಿಗೆ ನೀಡಿದ್ದ ಜಾಗ ರದ್ದುಗೊಳಿಸಲು ಆದೇಶ
ತಾಲೂಕಿನ ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬ್ರ ೨೧೫ ಪಿ೧ ರಲ್ಲಿ ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಲೀಸ್ ಜಮೀನಿನಲ್ಲಿ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಾಗದ ವಿಚಾರದಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಪರಿಶೀಲಿಸದೆ ಕಡತ ತಯಾರಿಸಿದ ಪರಿಣಾಮ ಇತ್ತೀಚೆಗೆ ಗೊಂದಲವೇರ್ಪಟ್ಟಿದೆ. ಆ ಜಾಗವನ್ನು ರದ್ದುಗೊಳಿಸಿ ಬೇರೊಂದು ಕಡೆ ಸರ್ಕಾರಿ ಜಮೀನನ್ನು ತಕ್ಷಣ ಗುರುತಿಸಿ ಎಂದು ಕಡಬ ತಹಸೀಲ್ದಾರ ಅನಂತ ಶಂಕರ್ ಅವರಿಗೆ ಡಿಸಿ ಆದೇಶಿಸಿದರು.

LEAVE A REPLY

Please enter your comment!
Please enter your name here