ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಉದಯ ಚೌಟ ನಿಧನ

0

ಪುತ್ತೂರು: ಖ್ಯಾತ ಕಬಡ್ಡಿ ಆಟಗಾರ,  ಜಿಲ್ಲೆಯ ಪ್ರಥಮ ಏಕಲವ್ಯ ಪ್ರಶಸ್ತಿ ಪುರಸ್ಕೃತ  ಕಬಡ್ಡಿ ಆಟಗಾರನೆಂದು ಹೆಸರು ಗಳಿಸಿರುವ, ಮಾಯಿದೆ ದೇವುಸ್ ಚರ್ಚ್ ಸಮೂಹ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಉದಯ ಚೌಟ(43ವ.)ರವರು ಮೇ 21 ರಂದು ಮುಂಜಾನೆ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

 

ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯ ವೆಂಕಪ್ಪ ಚೌಟ ಹಾಗೂ ಬೇಬಿ ದಂಪತಿ ಪುತ್ರರಾಗಿರುವ ಉದಯ ಚೌಟರವರು ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಓರ್ವರಾಗಿದ್ದರು. 2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ತಂಡದಲ್ಲಿ ಇವರು ಅತ್ತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಪ್ರಸಕ್ತ ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಕಛೇರಿಯಲ್ಲಿ ಉಪ ಪ್ರಬಂಧಕರಾಗಿದ್ದ ಉದಯ ಚೌಟ ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆಪಿಟಿಸಿಎಲ್ ಉದ್ಯೋಗದಲ್ಲಿದ್ದರು. ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಕಾಲಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಇವರು ವಿದ್ಯಾರ್ಥಿ ದಿಸೆಯಿಂದಲೂ ಕ್ರೀಡಾಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು.

ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ನಾಲ್ಕು ವರ್ಷ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿದ್ದ ಉದಯ್ ಚೌಟರವರು ಅಂತರ್ ವಿಶ್ವವಿದ್ಯಾನಿಲಯಕ್ಕೆ ದಕ್ಷಿಣ ವಲಯಕ್ಕೆ ಮಂಗಳೂರು ವಿವಿಯನ್ನು ಮೂರು ವರ್ಷ ಪ್ರತಿನಿಧಿಸಿದ್ದರು. ೧೯೯೩ರಲ್ಲಿ ಜ್ಯೂನಿಯರ್ ನ್ಯಾಷನಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಇವರು ೨೦೦೦ ರಿಂದ ೨೦೦೮ರ ವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು. ಬ್ಯಾಂಕ್ ಒಲಿಂಪಿಯಾಡ್ ತಂಡದ ನಾಯಕನಾಗಿ, ಬ್ಯಾಂಕ್ ಸ್ಪೋರ್ಟ್ಸ್ ಬೋರ್ಡ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಇವರು ಇದರಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದ.ಕ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಂಘಟನಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರ:
೨೦೦೪ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ ೫ ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಲ್ಲಿ ಅತ್ತ್ಯುತ್ತಮ ಸಾಧನೆಗೆ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಉದಯ ಚೌಟರವರದ್ದು. ೨೦ ವರ್ಷಗಳ ಕಾಲ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ೧೦೦ಕ್ಕೂ ಅಧಿಕ, ರಾಜ್ಯ ಮಟ್ಟದಲ್ಲಿ ೩೦೦ಕ್ಕೂ ಅಧಿಕ ಪಂದ್ಯಾಟಗಳನ್ನು ಆಡಿದ್ದಾರೆ.

ಮಂಗಳೂರು ವಿವಿ ಸತತ 4 ವರ್ಷ ಫಿಲೋಮಿನಾ ಚಾಂಪಿಯನ್:
ಉದಯ ಚೌಟರವರು ೧೯೯೭-೨೦೦೧ರ ಅವಧಿಯಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಕಬಡ್ಡಿಯಲ್ಲಿ ಅವರ ರೈಡಿಂಗ್ ನೋಡುವುದೇ ಪ್ರೇಕ್ಷಕರಿಗೆ ಮಹದಾನಂದವಾಗಿತ್ತು. ಆವಾಗ ಮಡ್ ಕೋರ್ಟ್ ಅಂಕಣ, ಈಗಿನ ಮ್ಯಾಟ್ ಅಂಕಣವಾಗಿರಲಿಲ್ಲ. ವಿಶ್ವವಿದ್ಯಾನಿಲಯದ ಇತರ ಕಾಲೇಜಿನ ತಂಡಗಳಲ್ಲಿನ ಕಬಡ್ಡಿ ಆಟಗಾರರಿಗೆ ಉದಯ ಚೌಟರವರು ಸಿಂಹಸ್ವಪ್ನವಾಗಿದ್ದರು. ಅವರು ರೈಡಿಂಗ್ ಮಾಡಿದಾಗಲೆಲ್ಲಾ ಎರಡ್ಮೂರು ಅಂಕಗಳಲ್ಲದೆ ಬೋನಸ್ ಅಂತ ಹೆಚ್ಚುವರಿ ಅಂಕ ಕೂಡ ಫಿಲೋಮಿನಾ ತಂಡಕ್ಕೆ ಲಭಿಸುತ್ತಿತ್ತು. ಇವರ ಅದ್ಭುತ ಆಟದಿಂದಾಗಿ ಫಿಲೋಮಿನಾ ಕಾಲೇಜು ಅಂದು ಸತತ ನಾಲ್ಕು ವರ್ಷ ಮಂಗಳೂರು ವಿವಿ ಚಾಂಪಿಯನ್‌ಶಿಪ್ ಎನಿಸಿಕೊಂಡಿತ್ತು. ಮಾತ್ರವಲ್ಲದೆ ಮಂಗಳೂರು ವಿವಿ ತಂಡದ ನಾಯಕನಾಗಿಯೂ ಆಯ್ಕೆಯಾಗಿದ್ದರು. ಕಬಡ್ಡಿ ಅಲ್ಲದೆ ಅಥ್ಲೆಟಿಕ್ಸ್‌ನಲ್ಲಿ ಡಿಸ್ಕಸ್ ತ್ರೋ ಹಾಗೂ ವೈಟ್‌ಲಿಪ್ಟಿಂಗ್ ಕೂಡ ಪ್ರತಿನಿಧಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದ ಉದಯ ಚೌಟರವರ ಅಕಾಲಿಕ ಮರಣಕ್ಕೆ ಕುಟುಂಬಸ್ಥರು, ಊರವರು ಕಂಬನಿ ಮಿಡಿದಿದ್ದಾರೆ. ಮೃತ ಉದಯ ಚೌಟರವರು ತಾಯಿ ಬೇಬಿ, ಪತ್ನಿ ಪ್ರಣೀತಾ, ಪುತ್ರ ನಿಶಾನ್, ಪುತ್ರಿ ನಿರ್ವಿ, ಸಹೋದರರಾದ ಇಂಡೇನ್ ಗ್ಯಾಸ್ ಏಜೆಂಟ್ ಜಗನ್ನಾಥ್ ಚೌಟ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಸಹೋದರಿ ಭಾರತಿ ಭಾಗಮಂಡಲರವರನ್ನು ಅಗಲಿದ್ದಾರೆ.

ಸಂತಾಪ..
ಮಂಗಳೂರು ವಿವಿ ಕಬಡ್ಡಿಯಲ್ಲಿ ಫಿಲೋಮಿನಾ ಕಾಲೇಜನ್ನು ನಾಲ್ಕು ವರ್ಷ ಪ್ರತಿನಿಧಿಸುವ ಮೂಲಕ ಕಾಲೇಜಿಗೆ ಚಾಂಪಿಯನ್‌ಶಿಪ್ ಪಟ್ಟವನ್ನು ಅಲಂಕರಿಸಲು ಪ್ರಮುಖ ಕಾರಣಕರ್ತರಾದ ಉದಯ ಚೌಟರವರ ಅಗಲಿಕೆ ನಮಗೆ ಅತೀವ ನೋವನ್ನುಂಟು ಮಾಡಿದೆ. ಕಾಲೇಜು ಹಮ್ಮಿಕೊಳ್ಳುವ ಕ್ರೀಡಾ ಚಟುವಟಿಕೆಗಳಿಗೆ ಉದಯ ಚೌಟರವರು ಕಾಲೇಜಿನ ಮೇಲಿನ ಅಭಿಮಾನದಿಂದ ಬರುತ್ತಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸುತ್ತಿದ್ದರು. ಇನ್ನು ಮುಂದೆ ಉದಯ ಚೌಟರವರು ಕೇವಲ ನೆನಪು ಮಾತ್ರ. ಆದರೆ ಅವರು ಮಾಡಿರುವಂತಹ ಸಾಧನೆಗಳು ಎಂದಿಗೂ ಅಮರವಾಗಿ ಉಳಿಯಲಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಅವರ ಅಗಲಿಕೆಯ ದುಃಖ ಸಹಿಸಿಕೊಳ್ಳಲು ಕುಟುಂಬಕ್ಕೆ ಭಗವಂತ ಶಕ್ತಿಯನ್ನು ನೀಡಲಿ ಎಂದು ಫಿಲೋಮಿನಾ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಆಡಳಿತ ಮಂಡಳಿ ಹಾಗೂ ಕಾಲೇಜು ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here