ಕೊಣಾಲು ತಿರ್ಲೆ ಮಹಾವಿಷ್ಣುಮೂರ್ತಿ ದೇವರ ನೂತನ ದೇವಾಲಯಕ್ಕೆ ಶಿಲಾನ್ಯಾಸ

0
  • ದೇವಸ್ಥಾನಗಳ ಜೀರ್ಣೋದ್ಧಾರ ಸನಾತನ ಧರ್ಮಕ್ಕೆ ಶುಭ ಸಂಕೇತ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ
  • ಜೀರ್ಣೋದ್ದಾರ ಕೆಲಸ ಶೀಘ್ರ ಪೂರ್ಣಗೊಳ್ಳಲಿ: ಬ್ರಹ್ಮಶ್ರೀ ನಾಗೇಶ ತಂತ್ರಿ
  •  ದೇವಸ್ಥಾನದ ಜೀರ್ಣೋದ್ಧಾರ ಭಕ್ತರ ಕರ್ತವ್ಯ: ರಮೇಶ ಕಾರಂತ
  • ಬೇಧ ಮರೆತು ಜೀರ್ಣೋದ್ದಾರದಲ್ಲಿ ತೊಡಗಿಸಿಕೊಳ್ಳಬೇಕು: ಬಲರಾಮ ಆಚಾರ್ಯ
  • ಊರಿನ ಎಲ್ಲರೂ ಕೈಜೋಡಿಸಬೇಕು: ರಾಧಾಕೃಷ್ಣ ಕುವೆಚ್ಚಾರು
  • ಜೀರ್ಣೋದ್ಧಾರದಿಂದ ಸಿಗುವ ಪುಣ್ಯ ಎಲ್ಲಿಯೂ ಸಿಗುವುದಿಲ್ಲ: ಕುಶಾಲಪ್ಪ ಗೌಡ
  • ದೇವಸ್ಥಾನ ನಿರ್ಮಾಣದಿಂದ ಊರಿಗೆ ಸುಭಿಕ್ಷೆ: ಧನ್ಯಕುಮಾರ್ ರೈ

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವರ ನೂತನ ದೇವಾಲಯ ನಿರ್ಮಾಣಕ್ಕೆ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿಯವರ ಹಾಗೂ ವಾಸ್ತು ಶಿಲ್ಪಿ ರಮೇಶ ಕಾರಂತರ ನಿರ್ದೇಶನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಜೂ.1ರಂದು ನಡೆಯಿತು.

 


ಬೆಳಿಗ್ಗೆ ಗಂಟೆ 9.15ರಿಂದ 10.12ರ ಕರ್ಕಾಟಕ ಲಗ್ನದ ಸುಮೂಹೂರ್ತದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು. ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿಯವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು, ವಿವಿಧ ಕಡೆಗಳಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ ಕೆಲಸಗಳಲ್ಲಿ ಆ ಊರಿನ ಭಕ್ತರು ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡು ಅಲ್ಪಾವಧಿಯಲ್ಲಿಯೇ ದೇವಸ್ಥಾನ ಪುನರ್‌ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಸನಾತನ ಧರ್ಮಕ್ಕೆ ಶುಭ ಸಂಕೇತವಾಗಿದೆ. ದೇವಸ್ಥಾನ ದೇವರಿಗೆ ಅಗತ್ಯವಾಗಿರುವುದಲ್ಲ, ಭಕ್ತರಿಗೆ, ಊರಿನ ಏಳಿಗೆಗೆ ದೇವಾಲಯ ನಿರ್ಮಾಣ ಆಗಬೇಕೆಂದು ನುಡಿದರು. ಊರಿನ ದೇವಾಲಯ, ವಿದ್ಯಾಲಯ ಸುಸ್ಥಿತಿಯಲ್ಲಿ ಇದ್ದಲ್ಲಿ ಆ ಊರು ಸಹ ಸುಭಿಕ್ಷೆಯಲ್ಲಿದೆ ಎಂದು ತಿಳಿಯಬಹುದಾಗಿದೆ. ಆದ್ದರಿಂದ ನಮ್ಮೂರಿನ ದೇವಾಲಯವನ್ನು ಸುಂದರವಾಗಿ ರೂಪಿಸಿಕೊಂಡು ದೇವರನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬಂದಲ್ಲಿ ನಮ್ಮ ಮನೆ, ಊರು, ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ ಸ್ವಾಮೀಜಿಯವರು, ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವರ ನೂತನ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಊರಿನ ಭಕ್ತರು ತಮ್ಮ ಶಕ್ತಿಯ ಅನುಸಾರ ತೊಡಗಿಸಿಕೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ದೇವಾಲಯ ನಿರ್ಮಾಣ ಕೆಲಸ ಪೂರ್ಣಗೊಂಡು ಬ್ರಹ್ಮಕಲಶೋತ್ಸದ ವೈಭವ ನೋಡುವ ಸೌಭಾಗ್ಯ ಊರಿನ ಜನರಿಗೆ ಒದಗಿ ಬರಲಿ ಎಂದರು.

ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿ ಕೆಮ್ಮಿಂಜೆಯವರು ಮಾತನಾಡಿ, ದೇವಸ್ಥಾನ ನಿರ್ಮಾಣ ಕೆಲಸ ಊರಿನ, ಪರವೂರಿನ ಭಕ್ತ ಮಹಾಜನರ ಸಹಕಾರದೊಂದಿಗೆ ಶೀಘ್ರವಾಗಿ ಪೂರ್ಣಗೊಂಡು ಬ್ರಹ್ಮಕಲಶೋತ್ಸವ ಆಗುವಂತೆ ದೇವರು ಅನುಗ್ರಹಿಸಿಲಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ವಾಸ್ತುಶಿಲ್ಪಿ ರಮೇಶ ಕಾರಂತರವರು ಮಾತನಾಡಿ, ದೇವಸ್ಥಾನ ದೇವರ ಸ್ಥೂಲ ಶರೀರ. ಅಜೀರ್ಣವಸ್ಥೆಗೆ ಬಂದಾಗ ಸರಿಪಡಿಸುವುದು ಭಕ್ತರ ಕರ್ತವ್ಯವಾಗಿದೆ. ಆದ್ದರಿಂದ ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ದೇವಸ್ಥಾನ ನಿರ್ಮಾಣದ ಮಹತ್ತರ ಜವಾಬ್ದಾರಿ ಊರಿನ ಭಕ್ತರ ಮೇಲಿದೆ. ೧ ವರ್ಷದಲ್ಲಿ ದೇವಾಲಯ ನಿರ್ಮಾಣ ಕೆಲಸ ಪೂರ್ಣಗೊಂಡು ಪುನರ್ ಪ್ರತಿಷ್ಠೆಗೊಳ್ಳಬೇಕು. ಬ್ರಹ್ಮಕಲಶೋತ್ಸವದ ಭಾಗ್ಯವನ್ನು ಭಕ್ತರು ಸದ್ವಿವಿನಿಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಮಾತನಾಡಿ, ತಿರ್ಲೆ ಮಹಾವಿಷ್ಣು ದೇವಸ್ಥಾನ ನಿರ್ಮಾಣ ಯಶಸ್ವಿಯಾಗಿ, ನಿರ್ವಿಘ್ನವಾಗಿ ಶೀಘ್ರದಲ್ಲಿ ಸಂಪೂರ್ಣಗೊಳ್ಳಲಿದೆ. ಊರಿನ ಭಕ್ತರು ಬೇಧ ಮರೆತು ದೇವಸ್ಥಾನದ ಜೀರ್ಣೋದ್ದಾರ ಕೆಲಸದಲ್ಲಿ ಕೈ ಜೋಡಿಸಬೇಕು. ಊರಿನ ಎಲ್ಲರಿಗೂ ಮಹಾವಿಷ್ಣು ದೇವರ ಅನುಗ್ರಹವಿರಲಿ ಎಂದರು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರುರವರು ಮಾತನಾಡಿ, ಈ ಭಾಗದ ಬಹುತೇಕ ದೇವಾಲಯಗಳು ಜೀರ್ಣೋದ್ದಾರಗೊಂಡಿದ್ದರೂ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಬಾಕಿಯಾಗಿತ್ತು. ಈಗ ಇಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಆಗಿದೆ. ಊರಿನ ಎಲ್ಲರೂ ಜೀರ್ಣೋದ್ಧಾರ ಕೆಲಸದಲ್ಲಿ ತೊಡಗಿಕೊಳ್ಳಬೇಕು. ತನು, ಮನ,ಧನ ಸಹಾಯದೊಂದಿಗೆ ದೇವಾಲಯ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಹೇಳಿದರು. ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ, ದೈವ, ದೇವರ ಸೇವೆಗೆ ದೇವಸ್ಥಾನ, ದೈವಸ್ಥಾನದ ಜೀರ್ಣೋದ್ದಾರ ಕೆಲಸ ಸುಸಂದರ್ಭವಾಗಿದೆ. ಇದರಿಂದ ಸಿಗುವ ಪುಣ್ಯ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ದೇವಸ್ಥಾನದ ಜೀರ್ಣೋದ್ದಾರ ಕೆಲಸದಲ್ಲಿ ಶ್ರದ್ಧಾ, ಭಕ್ತಿಯಿಂದ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ದೇವಸ್ಥಾನ ನಿರ್ಮಾಣ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು. ಇದರಿಂದ ಊರಿಗೆ ಸುಭಿಕ್ಷೆಯಾಗಲಿದೆ. ಇಂದಿನಿಂದ ಪ್ರತಿನಿತ್ಯವೂ ಇಲ್ಲಿ ಕೆಲಸ ನಡೆಯುತ್ತಿರಬೇಕು ಎಂದರು. ತಾ.ಪಂ.ಮಾಜಿ ಸದಸ್ಯೆಯರಾದ ಉಷಾ ಅಂಚನ್, ತೇಜಸ್ವಿನಿಶೇಖರ ಗೌಡ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಅಜಿತ್ ಪಾಲೇರಿ ಸಂದರ್ಭೋಚಿತವಾಗಿ ಮಾತನಾಡಿದರು.


ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ, ದೇವಸ್ಥಾನದ ಆಡಳಿತ ಧರ್ಮದರ್ಶಿ ಮಾಧವ ಸರಳಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಾನಂದ ಕಾರಂತರವರು ಸ್ವಾಮೀಜಿಗೆ ಫಲ, ತಾಂಬೂಲ ಸಮರ್ಪಿಸಿ ಅಶೀರ್ವಾದ ಪಡೆದರು. ಅರುಣ್‌ರಾಜ್ ಸರಳಾಯ, ಬಾಲಕೃಷ್ಣ ಅಗರ್ತ, ಅಜೇಯರಾಜ್ ಸರಳಾಯ, ನೋಣಯ್ಯ ಗೌಡ ಡೆಬ್ಬೇಲಿ, ಸತೀಶ್ ಕೆ.ಎಸ್.ದುರ್ಗಾಶ್ರೀ, ಸಂಧ್ಯಾಲೋಕೇಶ್, ಜನಾರ್ದನ ಶಾಂತಿಮಾರು, ವನಿತಾ ಅಂಬರ್ಜೆ, ಮೋಹನ, ಡೊಂಬಯ್ಯ ಗೌಡ ಎಣ್ಣೆತ್ತೋಡಿಯವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.

ಆರತಿ ರವಿಕುಮಾರ್ ಅವರು ದೇವಸ್ಥಾನದಲ್ಲಿ ಈ ತನಕ ನಡೆದ ಕೆಲಸ ಕಾರ್ಯಗಳ ಕುರಿತ ವರದಿ ವಾಚಿಸಿದರು. ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಜಯಂತ ಅಂಬರ್ಜೆ ಸ್ವಾಗತಿಸಿ, ಹರೀಶ್ ಶೆಟ್ಟಿ ಪಾತೃಮಾಡಿ ವಂದಿಸಿದರು. ಬಾಲಚಂದ್ರ ರೈ ಪಾತ್ರಾಜೆ ಕಾರ್ಯಕ್ರಮ ನಿರೂಪಿಸಿದರು. ವೀಣಾ ಎ.ಆರ್.ಭಟ್, ಅಂಜಲಿ ಎ.ಆರ್.ಭಟ್ ಪ್ರಾರ್ಥಿಸಿದರು. ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸ್ವಾಮೀಜಿಗೆ ಸುಮಂಗಲೆಯರ ಪೂರ್ಣಕುಂಭ ಸ್ವಾಗತ ನೀಡಲಾಯಿತು. ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here