ಡಾ.ಅನ್ನಪೂರ್ಣ ಎಸ್. ಕಿಣಿಯವರಿಂದ ವಿವೇಕಾನಂದ ಸಿಬಿಎಸ್‌ಇ ಶಾಲೆಗೆ 7 ಲಕ್ಷ ರೂ. ದಾನ

0
ವಿವೇಕಾನಂದ ಸಿಬಿಎಸ್‌ಇ ಶಾಲೆಯಲ್ಲಿ ನಿರ್ಮಾಣವಾದ 3ಡಿ ವಿಜ್ಞಾನ ಪಾರ್ಕ್

ಪುತ್ತೂರು: ಅಮೆರಿಕದ ನ್ಯಾಯಾರ್ಕ್‌ನ ಮೌಂಟ್ ಸೈನಾಯ್ ಮೆಡಿಕಲ್ ಸೆಂಟರ್‌ನ ಕಾರ್ಡಿಯಾಕ್ ಕೆತಟರೈಸೇಷನ್ ಪ್ರಯೋಗಶಾಲೆಯ ನಿರ್ದೇಶಕಿ, ಇಂಟರ್‌ನ್ಯಾಷನಲ್ ಕಾರ್ಡಿಯಾಲಜಿ ಫೆಲೋಶಿಪ್‌ನ ನಿರ್ದೇಶಕಿ ಹಾಗೂ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿನಿ ಡಾ. ಅನ್ನಪೂರ್ಣ ಎಸ್. ಕಿಣಿ ಅವರು ನೆಹರುನಗರ ವಿವೇಕಾನಂದ ಸಿಬಿಎಸ್‌ಇ ಶಾಲೆಗೆ 7 ಲಕ್ಷ ರೂ. ದಾನ ನೀಡಿದ್ದಾರೆ. ಇದರಿಂದ ಸಿಬಿಎಸ್‌ಇ ಶಾಲೆಯಲ್ಲಿ ಪುತ್ತೂರಿನಲ್ಲಿಯೇ ಮೊತ್ತ ಮೊದಲ ಬಾರಿಗೆ, ಮೂರು ಆಯಾಮಗಳ ವಿಜ್ಞಾನ ಪಾರ್ಕ್ (3 ಡಿ ಸೈನ್ಸ್ ಪಾರ್ಕ್), ಕಾಂಪೋಸೈಟ್ ಲ್ಯಾಬ್ (ಕಾಂಪೋಸಿಟ್ ಲ್ಯಾಬ್) ಇತ್ಯಾದಿ ರೂಪಿಸಲಾಗಿದೆ.

ದಿ. ಖಂಡಿಗೆ ನಾಮದೇವ ಪ್ರಭು ಮತ್ತು ದಿ. ಪುಷ್ಪಲತಾ ಪ್ರಭು ಬೊಳುವಾರು ಅವರ ಸುಪುತ್ರಿಯಾಗಿರುವ ಡಾ. ಅನ್ನಪೂರ್ಣ ಎಸ್. ಕಿಣಿ, 1984ರಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣ, ಬಳಿಕ ಮಂಗಳೂರಿನ ಕೆ.ಎಂ.ಸಿ.ಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಚಿನ್ನದ ಪದಕದೊಂದಿಗೆ ಪೂರೈಸಿದ್ದರು.

 

ಡಾ. ಅನ್ನಪೂರ್ಣ ಕಿಣಿ

ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಇವರು, ಸ್ಟ್ರಕ್ಚರಲ್ ಹೃದಯ ಸಂಬಂಧೀ ಕಾಯಿಲೆಗಳಲ್ಲಿ ರಕ್ತ ಪರಿಚಲನೆಯ ಕವಾಟಗಳ ತೊಂದರೆಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುವ ಕೆಲವೇ ಕೆಲವು ವೈದ್ಯರಲ್ಲಿ ಮೊದಲಿಗರು. ವರ್ಷವೊಂದರಲ್ಲಿ ಸುಮಾರು 1000ಕ್ಕೂ ಮಿಕ್ಕಿ ಹೃದಯ ಚಿಕಿತ್ಸೆ ಮಾಡುವ ಇವರ ಚಿಕಿತ್ಸೆ ಫಲಕಾರಿಯಾಗದಿರುವ ಅನುಪಾತ ಅತ್ಯಂತ ಕಡಿಮೆ. ಅಂದರೆ ಒಂದು ಸಾವಿರದಲ್ಲಿ ಮೂರರಷ್ಟು ಮಾತ್ರ. ಈವರೆಗೆ 6000ಕ್ಕೂ ಹೆಚ್ಚು ಕೊರೊನರಿ ಆಂಜಿಯೋಗ್ರಾಮ್ ಹಾಗೂ 16000ಕ್ಕೂ ಮಿಕ್ಕಿ ಆಂಜಿಯೊ ಪ್ಲಾಸ್ಟಿ ಚಿಕಿತ್ಸೆಗಳನ್ನು ಪೂರೈಸಿರುವುದು ಇವರ ಹೆಗ್ಗಳಿಕೆ.

ಇಂತಹ ಸೂಕ್ಷ್ಮ, ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡುವ ಇತರ 350 ವೈದ್ಯರಲ್ಲಿ ಡಾ. ಕಿಣಿಯವರನ್ನು, ಅತ್ಯಂತ ಸುರಕ್ಷಿತ ವೈದ್ಯೆ ಎಂಬುದಾಗಿ ಆರೋಗ್ಯ ಸಂಸ್ಥೆ ಗುರುತಿಸಿದೆ. ಇವರ ಕಾರ್ಯವೈಖರಿಯಿಂದ ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ಬಹಳ ಸಲ ವಿಶೇಷವಾಗಿ ಗುರುತಿಸಲ್ಪಟ್ಟಿದ್ದಾರೆ. ಇವರ ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳು ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ಸಂಬಂಧಿತ ಪಠ್ಯಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ವೈದ್ಯಕೀಯ ಪ್ರಯೋಗ ಕಾರ್ಯಗಳ ಮುಖ್ಯಸ್ಥೆ ಹಾಗೂ ಮುಖ್ಯ ನಿರ್ವಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದರ ನಡುವೆ, ಯೋಗದ ಉತ್ತಮ ಪ್ರಚಾರಕ್ಕಾಗಿ, ಅಂತಾರಾಷ್ಟ್ರೀಯ ಯೋಗ ದಿನದಂದು ನ್ಯೂಯಾರ್ಕಿನ ಪ್ರಸಿದ್ಧ ಸೆಂಟ್ರಲ್ ಪಾರ್ಕ್‌ನಲ್ಲಿ ಯೋಗ ಪ್ರದರ್ಶನ ನೀಡುತ್ತಾರೆ. ಇವರಿಗೆ ಸಂದ ಪ್ರಮುಖ ಪ್ರಶಸ್ತಿಗಳು – ಅಮೆರಿಕನ್ ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ ಅವರು ಕೊಡಮಾಡಿದ ಎಕ್ಸಲೆನ್ಸ್ ಇನ್ ಮೆಡಿಸಿನ್ ಅವಾರ್ಡ್ (ಎಎಪಿಐ)ನ್ನು 2016ನೇ ಜೂನ್ ತಿಂಗಳಿನಲ್ಲಿ ಸ್ವೀಕರಿಸಿರುವರು. ಎಎಚ್‌ಎದ ಹಾರ್ಟ್ ಆಫ್ ಗೋಲ್ಡ್ ಅವಾರ್ಡನ್ನು 2018ರ ಜೂನ್ ತಿಂಗಳಿನಲ್ಲಿ ಪಡೆದಿರುವರು. ಅಲ್ಲದೇ ಅಮೆರಿಕದ ಅತ್ಯಂತ ಹಿರಿಮೆಯ, ಗರಿಮೆಯ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಓನರ್ ಪ್ರಶಸ್ತಿಗೆ 2017ರ ಮೇನಲ್ಲಿ ಡಾ. ಕಿಣಿಯವರು ಭಾಜನರಾದರು.

LEAVE A REPLY

Please enter your comment!
Please enter your name here