ಕರ್ತವ್ಯ ಲೋಪ ಎಸಗಿದ ಆರೋಪ- ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್ ಅಮಾನತು

0

ನೆಲ್ಯಾಡಿ: ಗ್ರಾಮ ಪಂಚಾಯಿತಿ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ನಿಯಮಗಳ ಉಲ್ಲಂಘನೆ, ಶಿಷ್ಟಾಚಾರ ಪಾಲಿಸದಿರುವುದು ಮತ್ತು ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್‌ರವರನ್ನು ಅಮಾನತುಗೊಳಿಸಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್‌ರವರು ಜೂ.7ರಂದು ಆದೇಶಿಸಿದ್ದಾರೆ.

ನರೇಗಾ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದ ಅಡ್ಡಹೊಳೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ, ರಾಜೀವ ಗಾಂಽ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕಳಪೆ, ಗ್ರಾಮ ಪಂಚಾಯಿತಿಯ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ಮತ್ತು ಕಾನೂನು, ನಿಯಮಗಳ ಉಲ್ಲಂಘನೆಯಾಗಿದೆ. ಪಿಡಿಒರವರು ಒಂದು ಪಕ್ಷದ ಪರವಾಗಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ವರ್ತಕರ ಸಂಘ ಗುಂಡ್ಯ, ಗಡಿನಾಡ ರಕ್ಷಣಾ ಸೇನೆ ಶಿರಾಡಿ ಹಾಗೂ ಶಿರಾಡಿ ಗ್ರಾಮಸ್ಥರು ದೂರು ನೀಡಿದ್ದರು. ಅಲ್ಲದೇ ಪಿಡಿಒ ವಿರುದ್ಧ ಗ್ರಾಮಸ್ಥರು ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರಿಗೂ ದೂರು ನೀಡಿದ್ದರು. ಪಿಡಿಒ ವಿರುದ್ಧ ಬಂದಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಚಿವ ಎಸ್.ಅಂಗಾರರವರು ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಟಿಪ್ಪಣಿ ಸಲ್ಲಿಸಿದ್ದರು. ಗ್ರಾಮಸ್ಥರ ದೂರು ಹಾಗೂ ಸಚಿವರ ಟಿಪ್ಪಣಿ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ದ.ಕ.ಜಿ.ಪಂ.ನ ಯೋಜನಾ ನಿರ್ದೇಶಕರು, ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ, ಬಜೆಟ್ ವಿಭಾಗದ ಲೆಕ್ಕ ಶಾಖೆಯ ಲೆಕ್ಕಾಧೀಕ್ಷಕರು, ಆಡಳಿತ ಶಾಖೆಯ ಅಧೀಕ್ಷಕರು ಹಾಗೂ ಪುತ್ತೂರು ಉಪ ವಿಭಾಗದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಇಂಜಿನಿಯರ್‌ರವರ ನೇತೃತ್ವದ ತನಿಖಾ ತಂಡ ರಚಿಸಿ ದೂರು ಅರ್ಜಿಗಳಲ್ಲಿನ ಅಂಶಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡುವಂತೆ 21-4-2022ರಂದು ಆದೇಶಿಸಿದ್ದರು.

ಈ ತನಿಖಾ ತಂಡವು 15-5-2022ರಂದು ಶಿರಾಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ, 3-6-2022ರಂದು ತನಿಖಾ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಲ್ಲಿಸಿತ್ತು. ತನಿಖಾ ತಂಡದ ವರದಿಯ ಆಧಾರದಲ್ಲಿ ಮೇಲ್ನೋಟಕ್ಕೆ, ಪಿಡಿಒರವರು ಕರ್ತವ್ಯ ಲೋಪ ಎಸಗಿರುವುದು ಸಾಬೀತುಗೊಂಡಿರುವ ಹಿನ್ನೆಲೆಯಲ್ಲಿ ಆರೋಪಗಳ ಕುರಿತು ವಿವರವಾದ ವಿಚಾರಣೆ ನಡೆಸುವ ಸಲುವಾಗಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ 7-6-2022ರಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಪಿಡಿಒ ಅವರನ್ನು ಸೇವೆಯಿಂದ ಅಮಾನುತಗೊಳಿಸಿ ಆದೇಶಿಸಿದ್ದಾರೆ. ಅಮಾನತು ಅವಧಿಯಲ್ಲಿ ಪಿಡಿಒರವರು ಕೆ.ಸಿ.ಎಸ್.ಆರ್. ನಿಯಮಾವಳಿ 1958ರ ನಿಯಮ 98ರ ಪ್ರಕಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಅಮಾನತಿನಲ್ಲಿರುವ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಾಖಲೆ ನೀಡಿದ್ದೇನೆ; ವೆಂಕಟೇಶ್

ನನ್ನ ಮೇಲೆ ಬಂದಿದ್ದ ಆರೋಪ ನಿರಾಕರಿಸಿ ತನಿಖಾ ತಂಡಕ್ಕೆ ಸಮರ್ಪಕ ದಾಖಲೆ ನೀಡಿದ್ದೇನೆ. ಅದು ಯಾವುದನ್ನೂ ಪರಿಗಣಿಸಲಿಲ್ಲ. ಆರೋಪಗಳಿಗೆ ಸಂಬಂಧಿಸಿದಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಯಾವುದೇ ವರದಿ ಪಡೆದುಕೊಂಡಿರುವುದಿಲ್ಲ. ಏಕಾಏಕಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ 2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಮಾಡಿರುವ ಸಾಧನೆಗಾಗಿ ’ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ’ ರಾಜ್ಯ ಮಟ್ಟದ ಪ್ರಶಸ್ತಿಯೂ ನನಗೆ ಬಂದಿದೆ. 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಸರಕಾರ ನಿಗದಿಪಡಿಸಿದ ಗುರಿಗಿಂತ ದುಪ್ಪಟ್ಟು ಸಾಧನೆಯಾಗಿದ್ದು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಬಂದಿದೆ. ಅಭಿವೃದ್ದಿ ಕೆಲಸ ಮಾಡಿದ್ದನ್ನು ಗಣನೆಗೆ ತೆಗೆದುಕೊಳ್ಳದೇ ರಾಜಕೀಯ ಒತ್ತಡಕ್ಕೆ ಮಣಿದು ಸೇವೆಯಿಂದ ಅಮಾನತು ಮಾಡಲಾಗಿದೆ.-ಪಿ.ವೆಂಕಟೇಶ್, ಪಿಡಿಒ

ಪಿಡಿಒ ಮೇಲಿನ ಆರೋಪಗಳು

  •  ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುವ ಕುರಿತು ಗುತ್ತಿಗೆದಾರರನ್ನು ಆಯ್ಕೆ ಮಾಡಿರುವ ಬಗ್ಗೆ
  •  ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಏಕಪಕ್ಷೀಯವಾಗಿ ಗುತ್ತಿಗೆದಾರರನ್ನು ನೇಮಕಾತಿ ಮಾಡಿಕೊಂಡಿರುವುದು  ನಿಯಮ ಬಾಹಿರವಾಗಿರುತ್ತದೆ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000ವನ್ನು ಉಲ್ಲಂಘನೆ ಮಾಡಲಾಗಿದೆ.
  •  ಗುಂಡ್ಯದಲ್ಲಿ ಅಂಗಡಿ ಕಟ್ಟಡಗಳ ಏಲಂ ಮಾಡುವ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸದೆ ನಿಯಮಗಳನ್ನು ಉಲ್ಲಂಸಿ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ ಏಕಪಕ್ಷೀಯವಾಗಿ ಮತ್ತು ವಿವೇಚನಾನುಸಾರವಾಗಿ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
  •  ಅಂಗವಿಕಲರ ನಿಧಿಗೆ ಸಂಬಂಧಿಸಿದಂತೆ -ಲಾನುಭವಿಗಳಿಗೆ ನಿಯಮಾನುಸಾರ ಚೆಕ್ ಮೂಲಕ ಪಾವತಿಸಿರುವುದಿಲ್ಲ ಹಾಗೂ ಅಂಗವಿಕಲ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಕ್ರಿಯಾ ಯೋಜನೆ ತಯಾರಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ಏಕಪಕ್ಷೀಯವಾಗಿ ಅನುದಾನ ಬಳಸಿರುವುದು ಕಾನೂನು ಬಾಹಿರವಾಗಿರುತ್ತದೆ.
  •  2018-19ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿನ ಸಿಸಿ ಕ್ಯಾಮರಾ ಖರೀದಿ ಸಂಬಂಧ ದರಪಟ್ಟಿ ಕರೆಯದೆ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು ೨೦೦೦ವನ್ನು ಪಾಲಿಸದೆ ಖರೀದಿ ಪ್ರಕ್ರಿಯೆ ನಡೆಸಿರುವುದರಿಂದ ಕರ್ತವ್ಯ ಲೋಪ ಆಗಿರುತ್ತದೆ.
  •  ಗ್ರಾಮ ಪಂಚಾಯತ್ ಕಾಯಾ?ಲಯಕ್ಕೆ ಸರಿಯಾಗಿ ಹಾಜರಾಗದಿರುವ ಕುರಿತು ದೂರು ಸಲ್ಲಿಸಿರುವುದನ್ನು ಪರಿಶೀಲಿಸಲಾಗಿ ಜನವರಿ 2022ರಿಂದ ಏಪ್ರಿಲ್ 2022ರವರೆಗೆ ಇ-ಹಾಜರಾತಿಯನ್ನು ಪರಿಶೀಲಿಸಿದಾಗ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿರುವುದು ಮತ್ತು ಅನಧಿಕೃತ ಗೈರು ಹಾಜರಾಗಿರುವುದು.
  •  ಕೋವಿಡ್-19ಸಮಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಬಿಡುಗಡೆಗೊಂಡ 50ಸಾವಿರ ಮೊತ್ತವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿರುವುದಿಲ್ಲ. ಕೋವಿಡ್ ಕಿಟ್ ಖರೀದಿ ಸಂದರ್ಭ ನಿಯಮ ಪಾಲಿಸದೆ ಏಕಪಕ್ಷೀಯವಾಗಿ ಸಾಮಾಗ್ರಿ ಖರೀದಿಸಿರುವುದು ಕರ್ತವ್ಯಲೋಪವಾಗಿರುತ್ತದೆ. ಈ ಕಛೇರಿ ಆದೇಶದಲ್ಲಿ ನಿಯಮಗಳನ್ನು ಪಾಲಿಸಿ ವೆಚ್ಚ ಭರಿಸಲು ಸೂಚಿಸಿದ್ದರೂ ಸದ್ರಿ ನಿಯಮ ಉಲ್ಲಂಸಲಾಗಿದೆ.
  •  ಹೈಮಾಸ್ಟ್ ಸೋಲಾರ್ ಅಳವಡಿಸುವ ಕಾಮಗಾರಿಯ ಟೆಂಡರನ್ನು ನಿಯಮಾನುಸಾರ ಇ-ಟೆಂಡರ್ ಮೂಲಕ ನಡೆಸದೆ ನಿಯಮ ಉಲ್ಲಂಸಲಾಗಿದೆ.
  •  ಶಿರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಹೊಳೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಶಿರಾಡಿ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಹಾಗೂ ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಸಿರುವುದು.
  •  ಗುಂಡ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಸ್ಥಾವರಕ್ಕೆ ಪಂಪ್ ಅಳವಡಿಸುವ ಸಂಬಂಧ ಮೀಟರ್ ಡೆಪಾಸಿಟ್‌ನ್ನು ವಿದ್ಯುತ್ ಇಲಾಖೆಗೆ  ಪಾವತಿಸುವ ಬದಲು ಎಲೆಕ್ಟ್ರಿಕಲ್ ಅಂಗಡಿಯವರಿಗೆ ಪಾವತಿಸಿ ಕರ್ತವ್ಯ ಲೋಪವೆಸಗಿರುವುದು.

LEAVE A REPLY

Please enter your comment!
Please enter your name here