ಪವರ್‌ಮ್ಯಾನ್ ದುರ್ಗಾಸಿಂಗ್‌ಗೆ ‘ಪ್ರಜಾವಾಣಿ ಸಾಧಕರು-2022’ಪ್ರಶಸ್ತಿ ಪ್ರದಾನ

0

 

ನೆಲ್ಯಾಡಿ: ‘ಮಿಯಾವಾಕಿ’ ಮಾದರಿ ಅನುಸರಿಸಿ ಕಾಡು ಬೆಳೆಸುವ ಮೂಲಕ ಪರಿಸರ ಕಾಳಜಿ ತೋರಿಸುತ್ತಿರುವ ಪವರ್‌ಮ್ಯಾನ್ ದುರ್ಗಾಸಿಂಗ್‌ರವರಿಗೆ ಜೂ.25ರಂದು ಪ್ರಜಾವಾಣಿ ಮಂಗಳೂರು ಬ್ಯೂರೊ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ‘ಪ್ರಜಾವಾಣಿ ಸಾಧಕರು-2022’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೆರೆಮರೆಯ ಕಾಯಿಯಂತಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 22 ಮಂದಿಯನ್ನು ಗುರುತಿಸಿ ಅವರಿಗೆ ‘ಪ್ರಜಾವಾಣಿ ಸಾಧಕರು-೨೦೨೨’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಮಿಯಾವಾಕಿ’ ಮಾದರಿ ಅನುಸರಿಸಿಕೊಂಡು ಕಾಡು ಬೆಳೆಸುತ್ತಿರುವ ದುರ್ಗಾಸಿಂಗ್‌ರವರಿಗೆ ಪರಿಸರ ಕಾಳಜಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಗೋಳಿತ್ತೊಟ್ಟಿನಲ್ಲಿ ಪವರ್‌ಮ್ಯಾನ್ ಆಗಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಗೋಳಿತ್ತೊಟ್ಟು, ಆಲಂತಾಯ, ನೆಲ್ಯಾಡಿ, ಕೊಣಾಲು ಶಾಲಾ ಪರಿಸರದಲ್ಲಿ ಮಿಯಾವಾಕಿ ಮಾದರಿಯಲ್ಲಿ ಕಾಡು ಬೆಳೆಸಲಾಗಿದೆ. ಕೌಕ್ರಾಡಿ ಗ್ರಾಮ ಪಂಚಾಯಿತಿಯ ಹೊಸಮಜಲು ಘನ ತ್ಯಾಜ್ಯ ಘಟಕದಲ್ಲೂ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಮಿಯಾವಾಕಿ ಮಾದರಿಯಲ್ಲಿ ಕಾಡು ಬೆಳೆಸಲಾಗಿದೆ. ಇವರ ಪರಿಸರ ಕಾಳಜಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದುರ್ಗಾಸಿಂಗ್‌ರವರು, ಆರಂಭದಲ್ಲಿ ಕೆಲವರು ನನ್ನ ಕೆಲಸ ನೋಡಿ, ನೀವು ಹಲಸಂಡೆ ಗಿಡ ನೆಡುತ್ತಿದ್ದೀರಾ ಎಂದು ಛೇಡಿಸಿದ್ದರು. ಕೊನೆಗೆ ಹುಚ್ಚಾ ಎಂದೂ ಕರೆದರು. ಮಾಧ್ಯಮದಲ್ಲಿ ನನ್ನ ಕಾರ್ಯದ ಬಗ್ಗೆ ಲೇಖನ ಬಂದಾಗ ಜನ ನನ್ನನ್ನು ನೋಡುವ ದೃಷ್ಟಿಯೇ ಬದಲಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಜಾವಾಣಿಯ ಮಂಗಳೂರು ಬ್ಯುರೋ ಮುಖ್ಯಸ್ಥ ಗಣೇಶ ಚಂದನಶಿವ, ಡೆಕ್ಕನ್ ಹೆರಾಲ್ಡ್ ಮಂಗಳೂರು ಬ್ಯೂರೋ ಮುಖ್ಯಸ್ಥ ಹರ್ಷ, ಹಿರಿಯ ವರದಿಗಾರ ಉದಯ್ ಯು., ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here