ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ, ಪುಸ್ತಕ ವಿತರಣೆ

0

  • ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಸಂಘಟನೆಗಳಿಂದ ಆಗಬೇಕು : ಕಿಶೋರ್ ಶೆಟ್ಟಿ

 

ಪುತ್ತೂರು: ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಯುವಜನ ಒಕ್ಕೂಟ ಪುತ್ತೂರು ಇವರ ಸಹಯೋಗದೊಂದಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜೂ.26 ರಂದು ಮಜ್ಜಾರಡ್ಕದಲ್ಲಿ ನಡೆಯಿತು. ಬೆಂಗಳೂರು ನವರಂಗ್ ಡ್ರಗ್ ಹೌಸ್‌ನ ಮಾಲಕ ಕಿಶೋರ್ ಶೆಟ್ಟಿ ಅರಿಯಡ್ಕರವರು ಕಾರ್ಯಕ್ರಮವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ನಿಜವಾಗಿ ಒಂದು ಉತ್ತಮ ಕೆಲಸವಾಗಿದೆ. ಗ್ರಾಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಮಜ್ಜಾರಡ್ಕ ಸಂಘಟನೆ ಒಂದು ಮಾದರಿ ಕೆಲಸವನ್ನು ಮಾಡಿದೆ, ಸಂಘಟನೆಗಳಿಂದ ಇಂತಹ ಕೆಲಸಗಳು ಆಗಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಕೊಡುಗೈ ದಾನಿ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಲೋಕೇಶ್ ರೈ ಅಮೈ ಮಾತನಾಡಿ, ಹೆತ್ತವರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡದೆ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿ ಮಾಡಬೇಕು, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸಬೇಕು ಎಂದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶ್ರೀಕಾಂತ್ ಪೂಜಾರಿ ಬಿರಾವು, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ನ್ಯಾಯವಾದಿ ಉದಯಶಂಕರ್ ಶೆಟ್ಟಿ, ಪತ್ರಕರ್ತ ಸಿಶೇ ಕಜೆಮಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘಟನೆಯ ಗೌರವ ಸಲಹೆಗಾರ, ಕೊಡುಗೈ ದಾನಿ ಮೋಹನ್‌ದಾಸ್ ರೈ ಕುಂಬ್ರ, ಸಂಘಟನೆಯ ಅಧ್ಯಕ್ಷ ಉದಯ್ ಸ್ವಾಮಿನಗರ ಉಪಸ್ಥಿತರಿದ್ದರು. ದಾನಿ ಕಿಶೋರ್ ಶೆಟ್ಟಿ ಅರಿಯಡ್ಕರವರಿಗೆ ಸಂಘಟನೆಯ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭವಿತ್ ಮಜ್ಜಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ವಂದಿಸಿದರು. ಕಾರ್ಯಕ್ರಮದ ಬಳಿಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಜೇತ್ ಮಜ್ಜಾರ್‌ರವರು ಸಂಘಟನೆಯ ಸದಸ್ಯರಿಗೆ ಯೋಗ ಮಾಹಿತಿ ನೀಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆಗೈದ ಗ್ರಾಮದ ವಿದ್ಯಾರ್ಥಿಗಳಾದ ಮಂಜುಳಾ ಕೆ, ಹರೀಶ್ ಮತ್ತು ಮೋಕ್ಷಿತಾರವರುಗಳಿಗೆ ಶಾಲು, ಹಾರ, ಸ್ಮರಣಿಕೆ ಹಾಗೂ ಸಂಘಟನೆಯ ವತಿಯಿಂದ ೨ ಸಾವಿರ ರೂ.ನಗದು ನೀಡಿ ಅಭಿನಂದಿಸಲಾಯಿತು. ಅಂಗವಾಡಿಯಿಂದ ಹತ್ತನೆ ತರಗತಿಯ ವರೇಗಿನ ಗ್ರಾಮದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪುಸ್ತಕ ವಿತರಿಸಲಾಯಿತು. ಎ.ಕಿಶೋರ್ ಶೆಟ್ಟಿ ಅರಿಯಡ್ಕ, ಮೋಹನ್‌ದಾಸ್ ರೈ ಕುಂಬ್ರ, ರಘುನಾಥ ಗೋಳ್ತಿಲ, ನಾರಾಯಣ ಪೂಜಾರಿ ಕಾವು ಮಾಣಿಯಡ್ಕ, ರವಿ ಅಜಿಲ ಸ್ವಾಮಿನಗರ, ಸ್ವಸ್ತಿಕ್‌ರಾಜ್ ರೈ ಕುಂಬ್ರ, ರಾಜೇಶ್ ಮಂಗಳೂರು, ರತನ್ ರೈ ಕುಂಬ್ರ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.

ವೈಯುಕ್ತಿಕ ಧನ ಸಹಾಯ ಮಾಡಿದ ಲೋಕೇಶ್ ರೈ
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98ಕ್ಕಿಂತ ಹೆಚ್ಚು ಅಂಕ ಗಳಿಸಿದ ಅರಿಯಡ್ಕ ಗ್ರಾಮದ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ರೂ.5 ಸಾವಿರ ನೀಡುತ್ತೇನೆ ಎಂದು ಲೋಕೇಶ್ ರೈ ಅಮೈ ವಾಗ್ದಾನ ಮಾಡಿದ್ದರು. ಅದರಂತೆ ಈ ವರ್ಷ 613 ಅಂಕಗಳನ್ನು ಪಡೆದುಕೊಂಡ ಮಂಜುಳಾ ಕೆ. ರವರಿಗೆ ನಗದು ನೀಡಿ ಅಭಿನಂದಿಸಿದರು. ಮುಂದಿನ ವರ್ಷ ಇದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶೇ.98 ಕ್ಕಿಂತ ಹೆಚ್ಚು ಅಂಕ ಪಡೆಯಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here