ಕೊಯಿಲ ಪಶುವೈದ್ಯಕೀಯ ಕಾಲೇಜು ಶೀಘ್ರ ಲೋಕಾರ್ಪಣೆ; ಪ್ರಭು ಬಿ.ಚವ್ಹಾಣ್

0

ರಾಮಕುಂಜ: ಕೊಯಿಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶುವೈದ್ಯಕೀಯ ಕಾಲೇಜು ಕಟ್ಟಡದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ ಮುಂದಿನ ಆರು ತಿಂಗಳಿನೊಳಗೆ ತರಗತಿ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.

 


ಪಶುವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಪಶುವೈದ್ಯಕೀಯ ಕಾಲೇಜು ಘೋಷಣೆ ಮಾಡಿದ್ದರು. ಸಿದ್ದರಾಮಯ್ಯ ಬಂದು ಶಂಕುಸ್ಥಾಪನೆ ಮಾಡಿದ್ದಾರೆ. ಕಾಮಗಾರಿ ಪೂರ್ತಿಗೊಳಿಸಲು ಮತ್ತೆ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಬರಬೇಕಾಯಿತು, ಪ್ರಭು ಚವ್ವಾಣ್ ಕಾಮಗಾರಿ ಮುಗಿಸಿಬಿಡುತ್ತಾರೆ ಎಂದು ಹೇಳಿ, ಕೊಯಿಲ ಪಶುವೈದ್ಯಕೀಯ ಕಾಲೇಜಿಗೆ ಕಳೆದ ಬಜೆಟ್‌ನಲ್ಲಿ ೧೮ ಕೋಟಿ ರೂ., ಅನುದಾನ ಬಿಡುಗಡೆ ಮಾಡಲಾಗಿದೆ. ಕಟ್ಟಡ ಕಾಮಗಾರಿಗೆ ಸರ್ಕಾರದ ಕಡೆಯಿಂದ ಅರ್ಥಿಕ ಸಹಕಾರಕ್ಕೆ ಕೊರತೆಯಾಗಿಲ್ಲ. ಹಂತ ಹಂತವಾಗಿ ಅನುದಾನ ಬಿಡಗಡೆಗೊಳಿಸಲಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.

ಕಳಪೆಯಾಗಿದ್ದಲ್ಲಿ ಕ್ರಮ:
ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು, ಕಾಮಗಾರಿ ಲೋಪವಾಗಿದೆಯೇ ಎಂದು ಇಂಜಿನಿಯರ್‌ಗಳ ಮೂಲಕ ಪರಿಶೀಲಿಸಲಾಗುವುದು. ಲೋಪವಾದಲ್ಲಿ ಸರಿಪಡಿಸಿಕೊಡುವ ತನಕ ಬಿಲ್ಲು ಪಾವತಿ ತಡೆಹಿಡಿಯಲಾಗುವುದು ಎಂದರು. ಮಂಗಳೂರಿನಲ್ಲಿನ ಪಶು ಪಾಲಿಕ್ಲಿನಿಕ್ ಕಟ್ಟಡದಲ್ಲಿ ಸಣ್ಣ ಪುಟ್ಟ ಕೆಲಸಗಳು ಬಾಕಿಯಿವೆ. ಇದನೆಲ್ಲ ಶೀಘ್ರದಲ್ಲಿ ಮುಗಿಸಿ ಉದ್ಘಾಟನೆಗೊಳಿಸಲಾಗುವುದು ಎಂದು ಹೇಳಿದರು.

ಕತ್ತಿ ಹೇಳಿಕೆ ವೈಯಕ್ತಿಕ:
ಪ್ರತ್ಯೇಕ ರಾಜ್ಯದ ಕುರಿತು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ಮುಂದೆ ಪ್ರತ್ಯೇಕ ರಾಜ್ಯ ಮಾಡುವ ಇರಾದೆಯಿಲ್ಲ. ಕರ್ನಾಟಕ ಅಖಂಡ ರಾಜ್ಯವಾಗಿಯೇ ಉಳಿಯಲಿದೆ ಎಂದರು. ಈ ಸಂದರ್ಭ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ್ ಆರ್ ಕೆ, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಉಪಾಧ್ಯಕ್ಷೆ ಕಮಾಲಕ್ಷಿ ಪಾಜಳಿಕೆ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಪಶು ಸಂಗೋಪನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here