ರಾಮಕುಂಜ: ಜಿಲ್ಲಾ ಗೋ ಶಾಲೆಗೆ ಶಂಕುಸ್ಥಾಪನೆ

0

  • ತಾಲೂಕಿಗೊಂದು ಪಶು ಸಂಜೀವಿನಿ ಆಂಬುಲೆನ್ಸ್; ಪ್ರಭು ಬಿ.ಚವ್ಹಾಣ್
  •  ಆತ್ಮನಿರ್ಭರ ಗೋ ಶಾಲೆ, ಗೋ ಹತ್ಯೆ ತಡೆಗೆ ಕಠಿನ ಕ್ರಮ ಪಶುಸಂಗೋಪನೆಗೆ ಒತ್ತು: ನಳಿನ್‌ಕುಮಾರ್
  • ಜಾನುವಾರು’ವೀರ್ಯ ಬ್ಯಾಂಕ್’ಸ್ಥಳಾಂತರ ಆಗಬಾರದು: ಮಠಂದೂರು
  • ಗೋ ಶಾಲೆ ಕನಸು ಸಾಕಾರ: ಮಾಲತಿ ಎನ್.ಕೆ.

 

ರಾಮಕುಂಜ: ಜಿಲ್ಲಾಡಳಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದಕ್ಷಿಣ ಕನ್ನಡ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘ, ಮಂಗಳೂರು ಹಾಗೂ ಗ್ರಾಮ ಪಂಚಾಯತ್ ರಾಮಕುಂಜ ಇವರ ಸಹಯೋಗದೊಂದಿಗೆ ರಾಮಕುಂಜದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಗೋ ಶಾಲೆಗೆ ಶಂಕುಸ್ಥಾಪನೆ ಜೂ.29ರಂದು ಬೆಳಿಗ್ಗೆ ನಡೆಯಿತು.


ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ರವರು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಪಶು ಸಂಜೀವಿನಿ ಆಂಬುಲೆನ್ಸ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಮೂಲಕ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿದ್ದು ಶೀಘ್ರದಲ್ಲಿ ಬೆಳಗಾವಿ, ಮೈಸೂರು, ಕಲ್ಬುರ್ಗಿ ವಿಭಾಗದಲ್ಲೂ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಯಡಿ 275 ಆಂಬುಲೆನ್ಸ್‌ಗಳಿದ್ದು ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಆಂಬುಲೆನ್ಸ್ ಬರಲಿದೆ. 1962 ನಂಬರ್‌ಗೆ ರೈತರು ಕರೆ ಮಾಡಿದಲ್ಲಿ ರೈತರ ಮನೆ ಬಾಗಿಲಿಗೆ ಪಶುವೈದ್ಯರು ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ವರದಿ ನೀಡಲಿದ್ದಾರೆ ಎಂದರು. ರಾಜ್ಯದಲ್ಲಿ ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಾಣಿ ಕಲ್ಯಾಣ ಮಂಡಳಿಯೂ ಸ್ಥಾಪನೆ ಮಾಡಲಾಗಿದೆ ಎಂದು ಚವ್ಹಾಣ್ ಹೇಳಿದರು.


ಆತ್ಮನಿರ್ಭರ ಗೋ ಶಾಲೆ:
ಗೋ ಮೂತ್ರ, ಸೆಗಣಿಯಿಂದ ಸುಮಾರು ೩೨ ಉತ್ಪನ್ನ ತಯಾರಿಸಬಹುದಾಗಿದೆ. ಆದ್ದರಿಂದ ರಾಜ್ಯದಲ್ಲಿ ಆತ್ಮನಿರ್ಭರ ಗೋ ಶಾಲೆ ತೆರೆಯುವ ಮೂಲಕ ಗೋ ಉತ್ಪನ್ನಗಳನ್ನು ಸಿದ್ಧಪಡಿಸಲಾಗುವುದು. ಈ ಸಂಬಂಧ ಈಗಾಗಲೇ ಗುಜರಾತ್, ಉತ್ತರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ತೆರಳಿ ಅಧ್ಯಯನ ಮಾಡಲಾಗಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.


ಗೋ ಹತ್ಯೆ ತಡೆಗೆ ಕಠಿಣ ಕ್ರಮ:
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿ ಇದಕ್ಕೆ ಪೂರಕವಾಗಿ ಕೆಲಸ ನಡೆಯುತ್ತಿದೆ. ಗೋವು ಕಸಾಯಿಖಾನೆಗೆ ಹೋಗುವುದನ್ನು ತಡೆಯಬೇಕು. ಗೋವಿನ ರಕ್ಷಣೆ ಆಗಬೇಕೆಂಬ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಿನಲ್ಲಿ ಪಾಲನೆಗೆ ಪಶುಸಂಗೋಪನಾ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾಯ್ದೆ ಜಾರಿಗೊಂಡ ಬಳಿಕ 15ಸಾವಿರ ಹಸುಗಳ ರಕ್ಷಣೆ ಆಗಿದೆ.700ಕ್ಕಿಂತಲೂ ಹೆಚ್ಚು ಕೇಸು ದಾಖಲಾಗಿದೆ ಎಂದು ಹೇಳಿದ ಸಚಿವ ಪ್ರಭು ಬಿ.ಚವ್ಹಾಣ್‌ರವರು, ಗೋ ಹತ್ಯೆ ನಿಷೇಧ ಮಾಡಿದ ಬಳಿಕ ಗೋ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲೂ ಗೋ ಶಾಲೆ ನಿರ್ಮಾಣ ಆಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೊಂದರಂತೆ ರಾಜ್ಯದಲ್ಲಿ 100 ಗೋ ಶಾಲೆ ಆರಂಭಿಸಲಾಗುವುದು. ರಾಮಕುಂಜದಲ್ಲಿ ನಿರ್ಮಾಣಗೊಳ್ಳಲಿರುವ ಗೋ ಶಾಲೆ ಕಾಮಗಾರಿ 2 ತಿಂಗಳಿನೊಳಗೆ ಪೂರ್ಣಗೊಂಡು ಉದ್ಘಾಟನೆಗೊಳ್ಳಬೇಕೆಂದು ಹೇಳಿದರು.


ಪಶುಸಂಗೋಪನೆಗೆ ಒತ್ತು: ನಳಿನ್‌ಕುಮಾರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ರಾಜ್ಯ ಸರಕಾರ ಪಶುಸಂಗೋಪನೆಗೆ ಒತ್ತು ನೀಡುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಗೋ ಸಂಸ್ಕೃತಿ, ಕೃಷಿ ಸಂಸ್ಕೃತಿ ಉಳಿಸುವ ಕೆಲಸ ಆಗಿದೆ. ಹಿಂದಿನ ಸರಕಾರಗಳು ದೃಢ ನಿರ್ಧಾರ ಕೈಗೊಳ್ಳದೇ ಇರುವುದರಿಂದಲೇ ರಾಜ್ಯದಲ್ಲಿ ಗೋ ಹತ್ಯೆ ಹೆಚ್ಚಾಗಿ ನಡೆಯುತಿತ್ತು. ಈಗಿನ ಸರಕಾರ ಪ್ರತಿ ಜಿಲ್ಲೆಯಲ್ಲೂ ಗೋ ಶಾಲೆ ತೆರೆಯುವ ಮೂಲಕ ಗೋವುಗಳ ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.


ಜಾನುವಾರು’ವೀರ್ಯ ಬ್ಯಾಂಕ್’ಸ್ಥಳಾಂತರ ಆಗಬಾರದು: ಮಠಂದೂರು
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಡಿ.ವಿ.ಸದಾನಂದ ಗೌಡರವರು ಶಾಸಕರಾಗಿದ್ದ ವೇಳೆ ದ.ಕ.,ಕೊಡಗು ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿ ಪುತ್ತೂರಿನಲ್ಲಿ ಜಾನುವಾರು ‘ವೀರ್ಯ ಬ್ಯಾಂಕ್’ ಸ್ಥಾಪನೆ ಮಾಡಲಾಗಿದೆ. ಇದನ್ನು ಮಂಗಳೂರಿಗೆ ಸ್ಥಳಾಂತರಿಸುವ ಬದಲು ಇಲ್ಲಿಯೇ ಆಧುನಿಕವಾಗಿ ಅಭಿವೃದ್ಧಿಗೊಳಿಸಬೇಕೆಂದು ಹೇಳಿದರು. ರಾಜ್ಯ ಸರಕಾರ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಿ ೨೬೦ ಕೋಟಿ ರೂ.,ಅನುದಾನ ನೀಡಿದೆ. ಅನುಗ್ರಹ ವಿಮೆ ಯೋಜನೆ ಜಾರಿಗೆ ಬಂದಿದೆ. ಗೋ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡುವ ಮೂಲಕ ಗೋಪಾಲಕರಿಗೆ ರಕ್ಷಣೆ ನೀಡಿ, ಗೋವುಗಳ ಸಾಕಾಣಿಕೆಗೆ ಉತ್ತೇಜನ ನೀಡುತ್ತಿದೆ ಎಂದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.,ಮಾತನಾಡಿ, ರಾಮಕುಂಜದಲ್ಲಿ ಗೋ ಶಾಲೆಯ ಅವಶ್ಯಕತೆ ಇತ್ತು. ಈ ಕನಸು ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.


ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಎಮ್., ಕಡಬ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೆಚ್., ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೈಸೂರು ಇಲ್ಲಿನ ಜಂಟಿ ನಿರ್ದೇಶಕ ಡಾ.ಸಿ.ವೀರಭದ್ರಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಶುಸಂಗೋಪನಾ ಇಲಾಖೆ ಸುಳ್ಯ ಇಲ್ಲಿನ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ವಂದಿಸಿದರು. ಪಶುಸಂಗೋಪನಾ ಇಲಾಖೆ ಪುತ್ತೂರು ಇಲ್ಲಿನ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಪ್ರಾರ್ಥಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಡಿಸೆಂಬರ್ ಅಂತ್ಯಕ್ಕೆ ಆರಂಭ:
ಪಶುಪಾಲನಾ ಇಲಾಖೆ ದ.ಕ.ಮಂಗಳೂರು ಇಲ್ಲಿನ ಉಪನಿರ್ದೇಶಕ(ಆಡಳಿತ) ಡಾ.ಪ್ರಸನ್ನ ಕುಮಾರ್ ಟಿ.ಜಿ.,ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಕುಂಜದಲ್ಲಿ ಜಿಲ್ಲಾ ಗೋ ಶಾಲೆಗೆ 98.45 ಎಕ್ರೆ ಜಾಗ ಮಂಜೂರಾಗಿದ್ದು ಈಗ 13 ಎಕ್ರೆ ಜಾಗದಲ್ಲಿ ಗೋ ಶಾಲೆ ಆರಂಭಗೊಳಿಸುತ್ತಿದ್ದೇವೆ. 38 ಲಕ್ಷ ರೂ.,ವೆಚ್ಚದಲ್ಲಿ ಬೇಲಿ ರಚನೆ ಕೆಲಸ ನಡೆಯುತ್ತಿದೆ. 2 ಬೋರ್‌ವೆಲ್ ಕೊರೆಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಡಿಸೆಂಬರ್ ಅಂತ್ಯದ ವೇಳೆಗೆ 100 ಜಾನುವಾರು ಹಟ್ಟಿ ರಚನೆ ಮಾಡಿಕೊಡುವುದಾಗಿ ತಾ.ಪಂ. ಇವರು ಅಶ್ವಾಸನೆ ನೀಡಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಗೋ ಶಾಲೆ ಆರಂಭಿಸುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here