ಸೇತುವೆ ಮುರಿದು ಪಂಚೋಡಿ-ಮಯ್ಯಳ ಸಂಪರ್ಕ ಕಡಿತ: ಸ್ಥಳಕ್ಕೆ ಶಾಸಕರ ಭೇಟಿ: ಕೇರಳ ಮುಖ್ಯಮಂತ್ರಿ ಹಾಗೂ ಕಾಸರಗೋಡು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ-ಮಠಂದೂರು

0

ಪುತ್ತೂರು: ಈಶ್ವರಮಂಗಲ ಸಮೀಪದ ಪಂಚೋಡಿ ಕುದ್ರೋಳಿಯಾಗಿ ಮಯ್ಯಳ-ದೇಲಂಪಾಡಿ ಸಂಪರ್ಕಿಸುವ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಸೇತುವೆ ಕುಸಿತದಿಂದಾಗಿ ಜನರಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದೆ. ಪರಿಶೀಲಿಸಿ ನೋಡುವಾಗ ಸೇತುವೆ ಕೇರಳಕ್ಕೆ ಹೊಂದಿಕೊಂಡಿರುವುದರಿಂದ ಕೇರಳ ಸರಕಾರವೇ ಇದನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿಗೆ ಮತ್ತು ಕಾಸರಗೋಡು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಈ ಸೇತುವೆಯನ್ನು ಸಂಪರ್ಕಿಸುವ ಪಂಚೋಡಿ-ಕುದ್ರೋಳಿ ರಸ್ತೆಯೂ ಹದಗೆಟ್ಟಿದ್ದು ಅದರ ಡಾಮರೀಕರಣಕ್ಕಾಗಿ ಅನುದಾನ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು. ಸೇತುವೆ ಕುಸಿದು ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸುದ್ದಿ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಸಚಿತ್ರ ವರದಿ ಪ್ರಕಟಿಸಿತ್ತು. ಸೇತುವೆ ಕುಸಿತಕ್ಕೊಳಗಾದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಕೇರಳ ಸರಕಾರದ ಗಮನ ಸೆಳೆದ ಶಾಸಕರ ನಡೆಗೆ ಸ್ಥಳೀಯವಾಗಿ ಪ್ರಶಂಸೆ ವ್ಯಕ್ತವಾಗಿದೆ.

ಶಾಸಕರ ಜೊತೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ನೆ.ಮುಡ್ನೂರು ಗ್ರಾ.ಪಂ ಸದಸ್ಯರಾದ ಚಂದ್ರಹಾದ, ಪ್ರದೀಪ್ ರೈ, ಶಕ್ತಿಕೇಂದ್ರದ ಸಂಚಾಲಕ ದೀಪಕ್ ಕುಮಾರ್ ಉಪಸ್ಥಿತರಿದ್ದರು.

ಜು.೨೯ರಂದು ರಾತ್ರಿ ಕುಸಿತಗೊಂಡಿದ್ದ ಸೇತುವೆ:
ಜು.೨೯ರಂದು ರಾತ್ರಿ ವೇಳೆ ಸೇತುವೆ ಮುರಿದು ಬಿದ್ದಿದ್ದು ಸದ್ಯಕ್ಕೆ ಸ್ಥಳೀಯರೇ ಸೇರಿಕೊಂಡು ತಾತ್ಕಾಲಿಕವಾಗಿ ಅಡಿಕೆ ಮರದ ಪಾಲ ನಿರ್ಮಿಸಿ ನಡೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಸಂಪರ್ಕ ಕಡಿತದಿಂದ ವಾಹನ ಸಂಚಾರ ನಿಂತ ಪರಿಣಾಮ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಸೇತುವೆ ಕುಸಿತದಿಂದಾಗಿ ದೇಲಂಪಾಡಿ, ಮಯ್ಯಳ ಭಾಗದಿಂದ ಈಶ್ವರಮಂಗಲ, ಪುತ್ತೂರು ಕಡೆಗೆ ಬರುವವರು ಹಾಗೂ ಪುತ್ತೂರು, ಈಶ್ವರಮಂಗಲ ಭಾಗದಿಂದ ಆ ಕಡೆ ಹೋಗುವವರು ಮೇನಾಲ ಮೆನಸಿನಕಾನ ಮೂಲಕ ಸಂಚರಿಸಬೇಕಾಗಿದ್ದು ಸುಮಾರು ೬ರಿಂದ ೭ ಕಿ.ಮೀ,ನಷ್ಟು ಹೆಚ್ಚುವರಿಯಾಗಿ ಸುತ್ತಬಳಸಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಮಯ್ಯಳ, ದೇಲಂಪಾಡಿ ಭಾಗದಿಂದ ಹೆಚ್ಚಿನ ವಿದ್ಯಾರ್ಥಿಗಳು ಮೇನಾಲ, ಈಶ್ವರಮಂಗಲ, ಕಾವು, ಪುತ್ತೂರು ಭಾಗದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರಸ್ತುತ ಸೇತುವೆ ಕುಸಿತದಿಂದ ಸಮಸ್ಯೆಗೆ ಸಿಲುಕಿದ್ದಾರೆ. ದೂರದ ಮಾರ್ಗವಾಗಿ ಹೋಗುವ ವೇಳೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯವಾಗದೇ ತೊಂದರೆಗೊಳಗಾಗಿದ್ದಾರೆ.

LEAVE A REPLY

Please enter your comment!
Please enter your name here